Advertisement

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

11:25 PM Oct 16, 2021 | Team Udayavani |

ಕಾರವಾರ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಲ್‌ಎಚ್‌ಪಿಗಳಿಗೆ ಪರೀಕ್ಷೆಗೆ ಹಾಜರಾಗಲು ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ಡಿಎಚ್ಓ ಸತಾಯಿಸುತ್ತಿರುವ ಘಟನೆ ರಾತ್ರಿ ಬೆಳಕಿಗೆ ಬಂದಿದೆ.

Advertisement

ಇದರಿಂದಾಗಿ 20ಕ್ಕೂ ಒಳಗುತ್ತಿಗೆ ನೌಕರರಾದ ಎಂಎಲ್‌ಎಚ್‌ಪಿಗಳು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಶನಿವಾರ ರಾತ್ರಿಯವರೆಗೆ ಕುಳಿತು ಧರಣಿ ನಡೆಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಒಳಗುತ್ತಿಗೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಿಂದಲೂ ಅನೇಕರು ಎಂಎಲ್‌ಎಚ್‌ಪಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಮೂರು ವರ್ಷಗಳ ಒಪ್ಪಂದದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆರು ಜಿಲ್ಲೆಗಳಲ್ಲಿ 1,307 ಎಂಎಲ್‌ಎಚ್‌ಪಿ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಆನ್‌ಲೈನ್ ಪರೀಕ್ಷೆ ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ:ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಈಗಾಗಲೇ ಕಾರ್ಯನಿರತ ಎಂಎಲ್‌ಎಚ್‌ಪಿಗಳು ಈ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕ ಎನ್‌ಒಸಿ ಪಡೆಯಬೇಕಿರುತ್ತದೆ. ಒಂದುವೇಳೆ ಎನ್‌ಒಸಿ ಪಡೆದು ಬೇರೆ ಜಿಲ್ಲೆಗಳಲ್ಲಿ ನೇಮಕಾತಿಯಾದರೆ ಕಾರ್ಯನಿರತ ಜಿಲ್ಲೆಯಿಂದ ಬಿಡುಗಡೆಗೊಳ್ಳುವ ಪೂರ್ವ ಮೊದಲೇ ಮಾಡಿಕೊಂಡಿದ್ದ ಕರಾರು ಪತ್ರದಂತೆ ಮೊತ್ತವನ್ನು ಜಿಲ್ಲಾ ಆರೋಗ್ಯ ಸಂಘಕ್ಕೆ ಪಾವತಿಸಬೇಕಿರುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದರೆ ಪುನಃ ಮೊದಲಿನ ಜಿಲ್ಲೆಯಲ್ಲೇ ಎಂಎಲ್‌ಎಚ್‌ಪಿಗಳಾಗಿ ಮುಂದುವರಿಯಬೇಕಿದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೇ ಅಧಿಕೃತ ಜ್ಞಾಪನ ಪತ್ರವನ್ನೂ ಹೊರಡಿಸಲಾಗಿದೆ. ಆದರೆ ಈ ಪರೀಕ್ಷೆ ತೆಗೆದುಕೊಳ್ಳಲು ಉತ್ತರ ಕನ್ನಡದ ಜಿಲ್ಲಾಡಳಿತದ ಅಧಿಕಾರಿಗಳು ಜಿಲ್ಲೆಯಲ್ಲಿನ ಕಾರ್ಯನಿರತ ಎಂಎಲ್‌ಎಚ್‌ಪಿಗಳಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Advertisement

ಎನ್ ಓಸಿ ನೀಡದಿರಲು ಸಚಿವರ ಪರೋಕ್ಷ ಸೂಚನೆ?
ಎಂಎಲ್‌ಎಚ್‌ಪಿಗಳೇ ಹೇಳುವ ಪ್ರಕಾರ, ಬೇರೆ ಜಿಲ್ಲೆಗಳಿಂದ ಉತ್ತರ ಕನ್ನಡಕ್ಕೆ ಬಂದು ಕೆಲಸ ಮಾಡುವವರು ಅತಿ ಕಡಿಮೆ. ಅದರಲ್ಲೂ ಈಗಾಗಲೇ ನೇಮಕಾತಿಯಾದವರು ಎನ್‌ಒಸಿ ಪಡೆದು ಬೇರೆ ಜಿಲ್ಲೆಗಳಿಗೆ ನೇಮಕಾತಿಯಾದರೆ ಉತ್ತರ ಕನ್ನಡದ ಕಥೆಯೇನು? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದ್ದಾರಂತೆ. ಹೀಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಇರುವ ಎಂಎಲ್‌ಎಚ್‌ಪಿಗಳಿಗೆ ಎನ್‌ಒಸಿ ನೀಡದಂತೆ ಸೂಚಿಸಿದ್ದಾರಂತೆ. ಹೀಗಾಗಿ ಆರೋಗ್ಯಾಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಎಂಎಲ್‌ಎಚ್‌ಪಿಗಳು ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಎನ್‌ಒಸಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದೇವೆ. ಆದರೆ ಎನ್‌ಒಸಿ ನೀಡುತ್ತಿಲ್ಲ. ಕೇಳಿದರೆ ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದ್ದಾರೆ. ನಮಗೆ ನಮ್ಮ ಜಿಲ್ಲೆಗಳಲ್ಲಿ ಕೆಲಸ ಮಾಡಲು ಸಿಕ್ಕಿರುವ ಅವಕಾಶವಿದು. ನೇಮಕಾತಿಯಾಗುತ್ತದೆಯೋ, ಇಲ್ಲವೋ ಬೇರೆ ವಿಚಾರ. ಆದರೆ ಪರೀಕ್ಷೆ ಬರೆಯಲು ಎನ್‌ಒಸಿ ನೀಡಲು ಹೀಗೆ ಸತಾಯಿಸುತ್ತಿರುವುದು ಸರಿಯಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾದರೂ ಆರೋಗ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ಒಂದು ವೇಳೆ ನಾವು ನೇಮಕಾತಿಯಾದರೆ ಕರಾರು ಪತ್ರದಲ್ಲಿ ನಮೂದಾಗಿರುವ ಮೊತ್ತವನ್ನು ನೀಡಲು ಬದ್ಧರಿದ್ದೇವೆಂದು ಹೇಳಿದರೂ ಕೇಳುತ್ತಿಲ್ಲ. ಬೆಳಿಗ್ಗಿನಿಂದ ಕಾಯಿಸಿ, ಸಂಜೆಯ ಬಳಿಕ ಮದುವೆಯಾದವರಿಗೆ ಮಾತ್ರ ಎನ್‌ಒಸಿ ಕೊಡುತ್ತೇವೆ; ತಂದೆ-ತಾಯಿ ಇಲ್ಲದವರಿಗೆ ಅವರ ಮರಣದ ಕಾರಣವಿರುವ ಮರಣ ದಾಖಲೆ ನೀಡಿದರೆ ಎನ್‌ಒಸಿ ಕೊಡುತ್ತೇವೆಂದೆಲ್ಲ ಪೀಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಜೀಪು ಬಿಟ್ಟು ತೆರಳಿದ ಡಿಎಚ್‌ಒ ಶರದ್ ನಾಯಕ !
ಆರು ಜಿಲ್ಲೆಗಳಲ್ಲಿ 1,307 ಎಂಎಲ್‌ಎಚ್‌ಪಿ ಹುದ್ದೆಗಳಿಗಾಗಿ ನಡೆಯಲಿರುವ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಸೋಮವಾರವೇ ಕಡೆಯ ದಿನವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂದು (ಶನಿವಾರ) ಎನ್‌ಒಸಿ ಪಡೆಯಲೇಬೇಕೆಂದು ಎಂಎಲ್‌ಎಚ್‌ಪಿಗಳು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರಗೂ ಕಾಯುತ್ತಿದ್ದರು. ಆದರೆ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸರ್ಕಾರಿ ಜೀಪಿನಲ್ಲಿ ಮನೆಗೆ ಹೊರಡಲು ಮುಂದಾದಾಗ ಮತ್ತೆ ಮತ್ತೆ ಎಂಎಲ್‌ಎಚ್‌ಪಿಗಳು ಎನ್‌ಒಸಿ ಕೊಡಲು ಮನವಿ ಮಾಡಿ ಜೀಪಿಗೆ ಅಡ್ಡ ಬಂದಿದ್ದಾರೆನ್ನಲಾಗಿದೆ. ಇದರಿಂದಾಗಿ ಆರೋಗ್ಯಾಧಿಕಾರಿಗಳು ಜೀಪು ಬಿಟ್ಟು ಬೇರೆ ವಾಹನದಲ್ಲಿ ಮನೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next