ಕೆ.ಆರ್.ಪುರ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಎ.ಗೋಪಾಲ್ ಬಿ.ನಾರಾಯಣಪುರ, ದೇವಸಂದ್ರ, ಸಿಂಗಯ್ಯನಪಾಳ್ಯ, ಬಸವನಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಕೆ.ಆರ್.ಪುರದ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು, 10 ವರ್ಷದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬಿಬಿಎಂಪಿಗೆ ಸೇರ್ಪಡೆಗೊಂಡ 110ಹಳ್ಳಿಗಳ ಪೈಕಿ ಕೆ.ಆರ್.ಪುರ ಭಾಗದ ಹಳ್ಳಿಗಳಿಗೆ ಸೌಕರ್ಯ ಒದಗಿಸಿಲ್ಲ.
ಸೌಕರ್ಯ ಒದಗಿಸುವುದಾಗಿ ಕೊಚ್ಚಿಕೊಂಡ ಕಾಂಗ್ರೆಸ್ 4 ವರ್ಷಗಳ ಬಳಿಕ ಎಚ್ಚೆತ್ತುಕೊಂಡು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದೆ. ಶಾಸಕರಿಗೆ ಅಭಿವೃದ್ಧಿಯ ಗುರಿ ಇದ್ದಿದ್ದರೆ 5 ವರ್ಷಗಳ ಅವಧಿಯಲ್ಲಿ ಕಾವೇರಿ ನೀರು, ಯುಜಿಡಿ ಸಂಪರ್ಕ ಕಲ್ಪಿಸಬಹುದಿತ್ತು. ಆಧರೆ ಚುನಾವಣೆ ಸಮೀಪಿಸಿದಾಗ ಸಿಎಂ ಹಾಗೂ ಕ್ಷೇತ್ರದ ಶಾಸಕರಿಗೆ ಅಭಿವೃದ್ಧಿ ನೆನಪಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಜನ ಮೆಚ್ಚಿಕೊಂಡಿದ್ದರು. ಕ್ಷೇತ್ರ ಹಾಗೂ ರಾಜ್ಯದ ಜನತೆ ಪ್ರಸ್ತುತ ಎರಡೂ ಪಕ್ಷಗಳ ಆಡಳಿತ ಗಮನಿಸಿ, ಬೇಸತ್ತಿದ್ದಾರೆ. ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದನ್ನು ಮನಗಂಡಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದ ಮತದಾರರು ಜೆಡಿಎಸ್ ಪಕ್ಷಕ್ಕೆ ಅಧಿಕ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನ ಜೆಡಿಎಸ್‌ಗೆ ಬೆಂಬಲಿಸುತ್ತಿರುವುದನ್ನು ಸಹಿಸಲಾಗದೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪ್ರಚಾರದ ವೇಳೆ ವಿನಾಕಾರಣ ಅಡ್ಡಿಪಡಿಸುವುದು, ಜೀವ ಬೆದರಿಕೆ ಹಾಕುವುದು, ಕಾರ್ಯಕರ್ತರನ್ನು ಪ್ರಚಾರದಿಂದ ದೂರ ಉಳಿಯುವಂತೆ ಬೆದರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಭಾನುವಾರವೂ ಎ.ನಾರಾಯಣಪುರದಲ್ಲಿ ಘಟನೆ ಮರುಕಳಿಸಿದೆ. ನಾಗರಿಕರು ಕೂಡಲೆ ಎಚ್ಚೆತ್ತುಕೊಂಡು ಗೂಂಡಾಗಳನ್ನು ಬೆಂಬಲಿಸುವ ಅಭ್ಯರ್ಥಿಗಳನ್ನು ಪರಾಭವಗೊಳಿಸಿ ಪಾಠ ಕಲಿಸಬೇಕಿದೆ ಎಂದರು.