Advertisement

ವಿವಾದಗಳ ಆಗರ ನಗರಸಭೆಯಲ್ಲಿ ಅಭಿವೃದ್ಧಿ ಸ್ತಬ್ಧ

03:26 PM Sep 20, 2018 | Team Udayavani |

ಕೋಲಾರ: ನಗರಸಭೆ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ವಿವಾದಗಳ ಹುತ್ತವಾಗಿದ್ದು, ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ತಬ್ಧವಾಗಿದೆ. ನಗರಸಭೆಯ ಮೂಲಭೂತ ಕರ್ತವ್ಯಗಳಾದ ಕಸ ವಿಲೇವಾರಿ, ಒಳ ಚರಂಡಿ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಕುಡಿಯುವ ನೀರು ಸೋರಿಕೆ ತಡೆಗಟ್ಟುವಿಕೆ, ಚರಂಡಿಗಳ ಸ್ವತ್ಛತೆ ಇತ್ಯಾದಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಅಥವಾ ನಾಮಾಕಾವಸ್ತೆ ನಡೆಯುತ್ತಿದ್ದು, ನಗರಸಭಾ ಸದಸ್ಯರು ವಾರಕ್ಕೆರೆಡು ಮೂರು ಬಾರಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ.

Advertisement

ಇವುಗಳ ನಡುವೆ ಕಳೆದ ಆರೇಳು ತಿಂಗಳುಗಳಿಂದಲೂ ನಗರಸಭೆಗೆ ಖಾಯಂ ಪೌರಾಯುಕ್ತರು ಇಲ್ಲದೇ ಮೂರು ನಾಲ್ಕು ಬಾರಿ ಬದಲಾವಣೆಗಳು ಆಗುತ್ತಿದೆ. ಇದು ಸಾಲದೆಂಬಂತೆ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಪ್ರಹಸನವೂ ನಡೆದು ನಗರಸಭೆಯ ಸಂಪೂರ್ಣ ಬಂದ್‌ ಆಗುವಂತಾಗಿಬಿಟ್ಟಿದೆ. 

ಮೂಲಭೂತ ಕೆಲಸಗಳು ಸ್ಥಗಿತ: ನಗರದ 35 ವಾರ್ಡ್‌ಗಳಿಗೂ ಕೊಳವೆ ಬಾವಿಯ ನೀರೇ ಆಧಾರವಾಗಿದ್ದು, ಕೊಳವೆ ಬಾವಿ ನಿರ್ವಹಣೆ ನಗರಸಭೆಯ ಆದ್ಯತಾ ಕರ್ತವ್ಯವಾಗಿದೆ. ಆದರೆ, ಕೊಳವೆ ಬಾವಿ ನಿರ್ವಹಣೆ ಟೆಂಡರ್‌ ಮುಗಿದು ಎರಡು ತಿಂಗಳು ಮುಗಿದಿದ್ದರೂ ಮತ್ತೂಬ್ಬರಿಗೆ ಜವಾಬ್ದಾರಿ ಒಪ್ಪಿಸಲು ನಗರಸಭೆಗೆ ಸಾಧ್ಯವಾಗಿಲ್ಲ. ಇದರಿಂದ ಕೊಳವೆ ಬಾವಿಗಳಲ್ಲಿ ನೀರಿದ್ದರೂ ಪಂಪು ಮೋಟಾರು ಅಳವಡಿಸದೆ ಕೋಲಾರ ನಗರದ ಜನತೆ ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸಿ ಬಳಸುವುದು ಕುಡಿಯುವುದು ಅನಿವಾರ್ಯವಾಗಿದೆ.

ನಗರಸಭೆಯ 10 ಟ್ಯಾಂಕರ್‌ಗಳನ್ನು ಖರೀದಿಸಿ ನೀರು ಸರಬರಾಜು ಮಾಡುತ್ತಿದ್ದು, 5 ತಿಂಗಳಿನಿಂದಲೂ ಈ ಟ್ಯಾಂಕರ್‌ಗಳ ಡೀಸೆಲ್‌ ಬಾಕಿ ಇರುವುದರಿಂದ ಹತ್ತೂ ಟ್ಯಾಂಕರ್‌ಗಳು ಸ್ತಬ್ಧಗೊಂಡು ವಾರವಾಗಿದೆ. ನಲ್ಲಿಗಳ ಮೂಲಕ ನೀರನ್ನೇ ಸರಬರಾಜು ಮಾಡದ ನಗರಸಭೆ, ನೀರು ಸೋರಿಕೆ ತಡೆಯಲು ಮಾತ್ರ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಜವಾಬ್ದಾರಿ ಒಪ್ಪಿಸಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.

ಬೀದಿ ದೀಪಗಳ ನಿರ್ವಹಣೆ ಟೆಂಡರ್‌ ಮುಕ್ತಾಯವಾಗಿ ನಾಲ್ಕೈದು ತಿಂಗಳೇ ಮುಗಿದಿತ್ತು. ಇದೀಗ ಟೆಂಡರ್‌ ಕರೆಯಲಾಗಿ ಗುತ್ತಿಗೆದಾರರನ್ನು ನೇಮಕ ಮಾಡಿದ್ದರೂ, ಇನ್ನೂ ವರ್ಕ್‌ ಆರ್ಡ್‌ರ್‌ ಕೊಡಲು ನಗರಸಭೆಗೆ ಸಾಧ್ಯವಾಗದೆ ಬಹುತೇಕ ರಸ್ತೆಗಳು ಕತ್ತಲ ಕೂಪವಾಗಿ ಗೋಚರಿಸುತ್ತದೆ.
 
ಒಳಚರಂಡಿ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿರುವ ನಗರಸಭೆ ಕೆಟ್ಟು ನಿಂತಿರುವ ಸಕ್ಕಿಂಗ್‌ ಯಂತ್ರವನ್ನು ದುರಸ್ತಿಪಡಿಸಲಾಗದ ಸ್ಥಿತಿಯಲ್ಲಿದೆ. ಸಕ್ಕಿಂಗ್‌ ವಾಹನಗಳ ಕೊರತೆ, ಇರುವ ವಾಹನಕ್ಕೆ ಸಿಬ್ಬಂದಿ ಕೊರತೆ ಇರುವುದರಿಂದ ಒಳಚರಂಡಿ ದೂರುಗಳಿಗೆ ಸ್ಪಂದಿಸಲಾಗುತ್ತಿಲ್ಲ. ಇದರಿಂದ ನಗರದ ಅರ್ಧಭಾಗದಷ್ಟು ಒಳಚರಂಡಿ ಬ್ಲಾಕ್‌ ಆಗುವ ಸಮಸ್ಯೆಯಿಂದ ನಾಗರಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ.

Advertisement

ಕೋಲಾರ ನಗರಸಭೆಯಲ್ಲಿ ಕಸ ವಿಲೇವಾರಿ ಮತ್ತೂಂದು ಬೃಹದಾಕಾರದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಸ ಹಾಕಲು ಜಾಗವಿಲ್ಲವೆಂಬ ಸಬೂಬು ಹೇಳಿಕೊಂಡು ಸ್ವತ್ಛತೆ ಮರೆತ್ತಿದ್ದ ನಗರಸಭೆಗೆ ಹಿಂದಿನ ಜಿಲ್ಲಾಧಿಕಾರಿ ಸತ್ಯವತಿ ಜಾಗ
ಹುಡುಕಿಕೊಟ್ಟಿದ್ದರು. ಆದರೆ, ಇರುವ ಪೌರಕಾರ್ಮಿಕರಿಂದ ಕೆಲಸ ತೆಗೆಸಿ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲಾಗದ ನಗರಸಭೆಯಿಂದ ಇಡೀ ನಗರಸ ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ.

ಮಳೆಗಾಲದಲ್ಲಿ ನಗರದ ಎಲ್ಲಾ ಚರಂಡಿಗಳನ್ನು ಸ್ವತ್ಛತಾ ಆಂದೋಲದ ಮಾದರಿಯಲ್ಲಿ ಒಮ್ಮೆ ಸ್ವತ್ಛಗೊಳಿಸಿದರೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಸೇರುತ್ತದೆ. ಅಪಾಯಗಳು ಕಡಿಮೆಯಾಗುತ್ತದೆ. ಆದರೆ, ಚರಂಡಿಗಳ ಸ್ವತ್ಛತೆಯನ್ನೇ ಮರೆತ ನಗರಸಭೆಯಿಂದ ತುಂತುರು ಹನಿಗಳು ಬಿದ್ದರೂ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಡುತ್ತಿದ್ದು, ಕಸ ರಸ್ತೆ ಮೇಲೆ ನಿಲ್ಲುವಂತಾಗಿದೆ. 

ಹಿಂದಿನ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೊಂದಾಣಿಕೆಯಿಂದ ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಂದಲೇ ಉತ್ತಮ ಆಡಳಿತ ನೀಡುತ್ತಿತ್ತು. ಆದರೆ, ಈಗ ಪೌರಕಾರ್ಮಿಕರ ಕೊರತೆ, ಯಂತ್ರೋಪಕರಣ ದುರಸ್ತಿ, ಎಂಜಿನಿಯರ್‌ ಗಳ ಕೊರತೆ, ಆಯುಕ್ತರಿಲ್ಲ ಇತ್ಯಾದಿ ನೆಪ ಸಬೂಬುಗಳ ನಡುವೆ ನಾಗರೀಕ ಸೇವೆ ನೇಪಥ್ಯಕ್ಕೆ
ಸರಿಯುವಂತಾಗಿದೆ. 

ನಗರಸಭೆಯಲ್ಲಿ ಒಟ್ಟು 418 ಅನುಮೋದಿತ ಹುದ್ದೆಗಳಿದ್ದು, ಈ ಪೈಕಿ ಕೇವಲ 111 ಖಾಯಂ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ದಿನಗೂಲಿ, ಹೊರಗುತ್ತಿಗೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಲೆಕ್ಕದಲ್ಲಿ 142 ಮಂದಿ
ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 165 ಹುದ್ದೆಗಳು ಖಾಲಿ ಇವೆ.
 
ಅವಿಶ್ವಾಸದ ಪ್ರಹಸನ: ಕೋಲಾರ ನಗರಸಭೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇವುಗಳನ್ನು ಜವಾಬ್ದಾರಿಯಿಂದ ನಿಬಾಯಿಸಬೇಕಾದ ಆಡಳಿತ ಮಂಡಳಿ ಪುರಪಿತೃಗಳು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಪ್ರಹಸನ ನಡೆಸಿ ಟೀಕೆಗೆ ಗುರಿಯಾಗಿದ್ದಾರೆ. ಅಂತಿಮವಾಗಿ ಅವಿಶ್ವಾಸವನ್ನು ಮಂಡಿಸಲಾಗದೆ ಸ್ವಾರ್ಥ ಸಾಧನೆ ಮಾಡಿಕೊಂಡಿದ್ದಾರೆ. ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದ ಕೆಲವು ಸದಸ್ಯರು ಜೇಬು ತುಂಬಿಸಿಕೊಂಡು, ಪ್ರವಾಸ ಭಾಗ್ಯ ಅನುಭವಿಸಿ ತೆಪ್ಪಗಾಗಿದ್ದಾರೆ.

ನಾಗರಿಕರ ಆಕ್ರೋಶ: ನಗರಸಭೆಯ ಅಧ್ವಾನದ ಆಡಳಿತ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರಿಕರು, ಇನ್ನುಳಿದ ಆರೇಳು ತಿಂಗಳುಗಳ ಆಡಳಿತವನ್ನು ಸಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ನಡುವೆಯೂ ಕೆಲವು ನಾಗರಿಕರು ನಗರಸಭೆ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ನಗರಸಭೆ ಕಂಪ್ಯೂಟರ್‌
ಪೀಠೊಪಕರಣಗಳು ಧ್ವಂಸಗೊಳಿಸಲಾಗಿದೆ. ಆರೇಳು ತಿಂಗಳ ನಂತರ ಎದುರಾಗುವ ಚುನಾವಣೆಯಲ್ಲಾದರೂ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನತೆ ಕಾಯುವಂತಾಗಿದೆ.

ಆಯುಕ್ತರ ಬದಲಾವಣೆ ಆಟ ಆರೇಳು ತಿಂಗಳ ಹಿಂದೆ ಆಯುಕ್ತರಾಗಿದ್ದ ರಾಮಪ್ರಕಾಶ್‌ ಅನಧಿಕೃತ ಟ್ಯಾಂಕರ್‌ಗಳಿಗೆ ಕಡಿವಾಣ ಹಾಕಿದರೆಂಬ ಕಾರಣಕ್ಕಾಗಿ ಅವರನ್ನು ಬದಲಾಯಿಸಲು ನಗರಸಭಾ ಸದಸ್ಯರೇ ಮುಂದಾಗಿದ್ದರು.
ಆನಂತರ ವಿಧಾನಸಭಾ ಚುನಾವಣೆ ಸಮಯದಿಂದಲೂ ಕೋಲಾರ ನಗರಸಭೆಗೆ ರಾಮಪ್ರಕಾಶ್‌, ಶ್ರೀಕಾಂತ್‌, ರಾಮಪ್ರಕಾಶ್‌, ಸತ್ಯನಾರಾಯಣ, ರಾಮಪ್ರಕಾಶ್‌ ಎಂಬಂತೆ ಬದಲಾವಣೆಯಾಗುತ್ತಲೇ ಇದೆ. ಸೆ.18 ಬುಧವಾರ ಸರಕಾರದ ಆದೇಶದ ಮೇರೆಗೆ ರಾಮಪ್ರಕಾಶ್‌ ಪೌರಾಯುಕ್ತರಾಗಿ ಅಧಿಕಾರ ಸ್ಪೀಕರಿಸಿದ ಬೆನ್ನಲ್ಲೇ ಮಧ್ಯಾಹ್ನದ ವೇಳೆಗೆ ರಾಮಪ್ರಕಾಶ್‌ ವರ್ಗಾವಣೆಗೆ ನ್ಯಾಯಾಲಯದಿಂದ ತಡೆ ಸಿಕ್ಕಿದೆಯೆಂಬ ವರ್ತಮಾನಗಳು ಬಂದಿದ್ದು, ಮತ್ತೆ ಸತ್ಯನಾರಾಯಣ ಮುಂದುವರಿಸುವ ಸಾಧ್ಯತೆಗಳಿವೆ. ಆಯುಕ್ತರ ಈ ಬದಲಾವಣೆ ಆಟದಲ್ಲಿ ನಗರಸಭೆ ಅಭಿವೃದ್ಧಿ ಕುಂಠಿತಗೊಂಡಿದೆ.

ಸರಕಾರದ ಆದೇಶದ ಮೇಲೆ ಬುಧವಾರ ಪೌರಾಯುಕ್ತರಾಗಿ ನೇಮಕಗೊಂಡೆ, ಸಂಜೆ ವೇಳೆಗೆ ಹಿಂದಿನ ಪೌರಾಯುಕ್ತರು
ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆಂಬ ಮಾಹಿತಿ ಬಂದಿದೆ. ಇದರ ನಿರೀಕ್ಷೆಯಲ್ಲಿರುವ ತಾವು ನಗರಸಭೆ ಅಭಿವೃದ್ಧಿ ಕುರಿತು ಮಾತನಾಡುವುದಿಲ್ಲ. ನಗರಸಭೆಯ ಈ ಸ್ಥಿತಿಗೆ ಏನು ಕಾರಣ ಎನ್ನುವುದನ್ನು ಕೋಲಾರದ ಜನತೆಯೇ ಅರ್ಥ ಮಾಡಿಕೊಳ್ಳಬೇಕಾಗಿದೆ.
  ರಾಮಪ್ರಕಾಶ್‌, ಪೌರಾಯುಕ್ತರು

ಕೋಲಾರ ನಗರಸಭೆಯಲ್ಲಿ ಸೌಲಭ್ಯಗಳ ಕೊರತೆಗಳ ನಡುವೆಯೂ ಮೂಲಭೂತ ಸೇವೆಗಳನ್ನು ಒದಗಿಸಲು ಸಾಧ್ಯವಿದೆ. ಹಿಂದಿನ ಅಧ್ಯಕ್ಷರು ಇದನ್ನು ನಿರೂಪಿಸಿದ್ದಾರೆ. ಆದರೆ, ಈಗ ಆಡಳಿತಾತ್ಮಕ ಸಮಸ್ಯೆಗಳು ಮತ್ತು ಸಿಬ್ಬಂದಿ
ಅಧಿಕಾರಿಗಳ ಕೊರತೆಯಿಂದಾಗಿ ನಾಗರಿಕ ಸೇವಾ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
  ಗಾಂಧಿನಗರ ನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ

 ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next