Advertisement

ಅಭಿವೃದ್ಧಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ

01:06 PM Mar 29, 2019 | Team Udayavani |

ರಾಮನಗರ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ತಮಗೆ ಶ್ರೀರಕ್ಷೆಯಾಗಲಿದೆ. ದೇಶದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಬೇಕಾಗಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದರಿಂದ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕಾಗಿದೆ. ಹೀಗಾಗಿ ಜಿಲ್ಲೆಯ ವಕೀಲರ ಸಹಕಾರ ಅಗತ್ಯವಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ತಿಳಿಸಿದರು.

Advertisement

ನಗರದ ನ್ಯಾಯಾಲಯ ಸಂಕಿರ್ಣದಲ್ಲಿರುವ ವಕೀಲರ ಸಂಘಕ್ಕೆ ಗುರುವಾರ ಬೆಳಿಗ್ಗೆ ಮತಯಾಚನೆಗೆ ಭೇಟಿ ನೀಡಿದ ಅವರು ಮಾತನಾಡಿ, ಕ್ಷೇತ್ರದ ಅಭ್ಯರ್ಥಿಯಾಗಿ ಹೈಕಮಾಂಡ್‌ ತಡವಾಗಿ ಘೋಷಿಸಿದ್ದಾರೆ. ಅಸಲಿಗೆ ತಾವು ಸದಾನಂದ ಗೌಡರು ಸ್ಪರ್ಧಿಸಿರುವ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದದ್ದಾಗಿ. ತಮ್ಮ ತಾಯಿಯವರ 11ನೇ ದಿನದ ಕಾರ್ಯ ಮುಗಿಸಿಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾಗಿ ಹೇಳಿದರು. ಹೀಗಾಗಿ ನಾಮಪತ್ರ ಸಲ್ಲಿಕೆಯೂ ತರಾತುರಿಯಾಗಿಯೇ ನಡೆದಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಸೇರಿದಂತೆ ಎಲ್ಲರಿಗೂ ತಿಳಿಸಲು ಸಹ ಸಮಯ ಅವಕಾಶ ಇರಲಿಲ್ಲ ಎಂದು ಹೇಳಿದರು.

ಈ ಕ್ಷೇತ್ರ ತಮಗೆ ಹೊಸದೇನಲ್ಲ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮೂರು ಜಿಲ್ಲೆಗಳನ್ನು ಒಳಗೊಂಡಿದೆ. ಈ ಕ್ಷೇತ್ರ ತಮಗೆ ಹೊಸದೇನು ಅಲ್ಲ. ರಾಮನಗರ ಜಿಲ್ಲೆಯಲ್ಲಿ ತಮ್ಮ ಸಂಬಂಧಿಕರು ಇದ್ದಾರೆ. ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಸಾಕಷ್ಟಿದೆ. ಜಿಲ್ಲೆಯ ನಗರ ವ್ಯಾಪ್ತಿಯ ಬೆಂಗಳೂರು- ಮೈಸೂರು ಹೆದ್ದಾರಿ ಅಗಲೀಕರಣಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಕಳೆದ ತಿಂಗಳಿನಿಂದ ಎರಡು ಹಂತದಲ್ಲಿ ಕಾಮಗಾರಿಕೆ ಕೆಲಸ ನಡೆಯುತ್ತಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ. ಗೆದ್ದ ನಂತರ ಜತೆಗೆ ಮೇಲ್ದರ್ಜೆಗೆ ಏರಿಸಲು ತಾವು ಪ್ರಯತ್ನಿಸುವುದಾಗಿ ಹೇಳಿದರು. ತಾವು ಯುವಕನಾಗಿದ್ದಾಗಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಬಿಜೆಪಿ ಸೇರಿದ್ದಾಗಿ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷನಾಗಿ, ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿರುವುದಾಗಿ ಹೇಳಿದರು.

ಮೋದಿ ವಿರೋಧಿಸುವ ಕೆಲಸ ಮಾಡಿದ್ದಾರೆ: ಕಳೆದ 5 ವರ್ಷಗಳಲ್ಲಿ ಸಂಸದರಾಗಿದ್ದ ಡಿ.ಕೆ.ಸುರೇಶ್‌ ಅವರು ಪ್ರಧಾನಿಯವರನ್ನು ನೇರವಾಗಿ ಭೇಟಿ ಮಾಡಿ, ಇಲ್ಲಿನ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದಿತ್ತು. ಮಾವು, ರೇಷ್ಮೆ ಬೆಳೆಗಾರರ ಸಂಕಷ್ಟಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಳ್ಳಬಹುದಿತ್ತು. ಆದರೆ, ಅದ್ಯಾವುದನ್ನು ಅವರು ಮಾಡಿಲ್ಲ. ಬರಿ ಮೋದಿಯವರನ್ನು ವಿರೋಧಿಸುವ ಕೆಲಸವನ್ನು ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲೇ ಗ್ರಾಮೀಣರ ಬದುಕು ಹಸನು ಮಾಡುವ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಿತ್ತು ಎಂದು ತಿಳಿಸಿದರು.

Advertisement

ವಿಶಾಲ ನ್ಯಾಯಾಲಯ ಸಂಕೀರ್ಣ ಅಗತ್ಯ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜು ಮಾತನಾಡಿ, ರಾಮನಗರ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಚಿಕ್ಕದಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ನ್ಯಾಯಾಲಯ ಸಂಕೀರ್ಣ ನಿರ್ಮಿಸುವ ಅಗತ್ಯವಿದೆ ಎಂದರು. ವಕೀಲ ಸಿದ್ದೇಗೌಡ, ವಕೀಲ ವಿನೋದ್‌ ಭಗತ್‌ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌, ಉಪಾಧ್ಯಕ್ಷ ಎಸ್‌.ಆರ್‌.ನಾಗರಾಜು, ಪ್ರಮುಖರಾದ ಬಿ.ನಾಗೇಶ್‌, ಪ್ರವೀಣ್‌ ಗೌಡ, ಜಿ.ವಿ.ಪದ್ಮನಾಭ, ಚಂದ್ರಶೇಖರ್‌ ರೆಡ್ಡಿ, ಚಂದನ್‌ ಮೋರೆ, ಮಂಜು, ರಮೇಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next