Advertisement

ಕೃಷಿ ತಾತ್ಸಾರದಿಂದ ಕುಟುಂಬ ವ್ಯವಸ್ಥೆಯೇ ನಾಶ

05:48 PM Jan 19, 2022 | Team Udayavani |

ಧಾರವಾಡ: ಇಂದಿನ ಯುವ ಜನಾಂಗ ಕೃಷಿ, ಜಲದ ಬಗ್ಗೆ ತಾತ್ಸಾರ ಹೊಂದಿದ್ದು, ಇದು ಮುಂದುವರಿದರೆ ಕುಟುಂಬ ವ್ಯವಸ್ಥೆಯೇ ನಾಶವಾಗುತ್ತದೆ ಎಂಬ ಎಚ್ಚರಿಕೆಯನ್ನು ಯುವಕರಿಗೆ ಮನವರಿಕೆ ಮಾಡಿಕೊಡುವ ತುರ್ತು ಕಾರ್ಯ ಆಗಬೇಕಿದೆ ಎಂದು ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ| ರಾಜೇಂದ್ರ ಪೊದ್ದಾರ ಹೇಳಿದರು.

Advertisement

ಕವಿಸಂನಲ್ಲಿ ದಿ| ಮರಿಗೌಡ ಫಕ್ಕೀರಗೌಡ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ “ಕೃಷಿ ನೆಲ-ಜಲ-ಸಹಕಾರ’ ಕುರಿತು ಅವರು ಮಾತನಾಡಿದರು. ನೆಲ ಮತ್ತು ಜಲದ ಬಗ್ಗೆ ಬದ್ಧತೆಯಿಂದ ತೊಡಗಿಕೊಳ್ಳುವ ಕಾಲ ಬಂದಿದೆ. ಇಂದು ನೀರು, ನೆಲ, ಸಂರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನೆ ಹಾಕಿಕೊಳ್ಳಬೇಕಿದೆ. ಇಂದು ವ್ಯಕ್ತಿಗತ ನೆಲೆಯಲ್ಲಿ ಯೋಚಿಸದೇ ಸಮೂಹ ನೆಲೆಗಟ್ಟಿನಲ್ಲಿ ನಿಂತು ಮಾತನಾಡುವಂತಾಗಬೇಕು ಎಂದರು.

ಇಂದು ಕೊರೊನಾಕ್ಕಿಂತ ಭೀಕರ ಸಂಕಷ್ಟ ಎಂದರೆ ಜಲ ಸಂಕಷ್ಟ. ಜಗತ್ತಿನ ಬಹುತೇಕ ಮಹಾ ಯುದ್ಧಗಳು ಬೇರೆ ಬೇರೆ ಕಾರಣಕ್ಕೆ ಆಗಿರಬಹುದು. ಆದರೆ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ ನಡೆಯುವುದು ಎಂದು ಜಗತ್ತಿನ ಜಲತಜ್ಞರು ಹೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಜಲಕಲಹ, ರಾಜ್ಯ ರಾಜ್ಯಗಳ ನಡುವೆ ನದಿ ನೀರಿನ ಜಗಳ, ನೇಪಾಳ, ಚೈನಾ, ಬಾಂಗ್ಲಾದೇಶಗಳೊಡನೆ ನೀರು ಹಂಚಿಕೆ ಜಗಳ. ಹೀಗೆ ಕೆಳಸ್ತರದಿಂದ ಜಾಗತಿಕ ಮಟ್ಟದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯಕ್ಕೂ ಜಲ ಸಂಕಷ್ಟ: ಸಿರಿಯಾ ದೇಶದ ಜನ ನೀರಿನ ಬರದಿಂದ ತತ್ತರಿಸಿದರು. ನಿರುದ್ಯೋಗಿಗಳು ಬಂದೂಕು ಹಿಡಿದರು. ಆಂತರಿಕ ಯುದ್ಧ ಪ್ರಾರಂಭವಾಗಿ ಜಲ ಸಂಕಷ್ಟಕ್ಕೆ ಜಗತ್ತಿಗೇ ಉದಾಹರಣೆಯಾಗಿ ಸಿರಿಯಾ ದೇಶ ನಿಂತಿದೆ. ಈಗ ನೀರಿನ ಸಂಕಷ್ಟದಲ್ಲಿ ರಾಜ್ಯ ಇದೆ. 1950ರಲ್ಲಿ ವಾರ್ಷಿಕ ತಲಾವಾರು 5000ಕ್ಕೂ ಹೆಚ್ಚು ಘನ ಮೀಟರ್‌ ನೀರು ಲಭ್ಯವಾಗುತ್ತಿತ್ತು. ಆದರೆ ಜನಸಂಖ್ಯಾ ಸ್ಫೋಟದಿಂದ ತಲಾವಾರು ನೀರಿನ ಲಭ್ಯತೆ ಕಡಿಮೆಯಾಗಿದ್ದು, ಈಗ ಕೇವಲ 1300 ಘನ ಮೀಟರ್‌ ಮಾತ್ರ ಲಭ್ಯವಾಗುತ್ತಿದೆ. ಇದು ನೀರಿನ ಸಂಕಷ್ಟದ ಮುನ್ಸೂಚನೆಯಾಗಿದೆ ಎಂದರು.

ಕೆಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಪಿ.ಪಾಟೀಲ ಮಾತನಾಡಿ, ಸಹಕಾರಿ ಕ್ಷೇತ್ರ ಬಡವಾಗಿದೆ. ಪ್ರಾಮಾಣಿಕತೆ ಇಲ್ಲವಾಗಿದೆ. ಯುವ ಜನಾಂಗ ಸಹಕಾರಿ ಕ್ಷೇತ್ರವನ್ನು ತಾತ್ಸಾರದಿಂದ ನೋಡುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಹಿಂದಿನ ಹಿರಿಯರು ಹಳ್ಳಿಗಳಲ್ಲಿ ಸಹಕಾರ ತತ್ವದ ಮೇಲೆಯೇ ಕೃಷಿ ಮಾಡುತ್ತಿದ್ದರು. ಅದು ಇಂದು ಮಾಯವಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ಆತಂಕದಲ್ಲಿದೆ ಎಂದು ಹೇಳಿದರು.

Advertisement

ನಿವೃತ್ತ ಪ್ರಾಚಾರ್ಯ ಬಿ.ಎಲ್‌. ಶಿವಳ್ಳಿ ಮಾತನಾಡಿದರು. ಬೆಳಗಾವಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ| ವಿ.ಎಸ್‌. ಸಾಧೂನವರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರವಾಗಿ ಬೊಮ್ಮನಾಯ್ಕ ಪಾಟೀಲ ಮಾತನಾಡಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ| ಜಿನದತ್ತ ಹಡಗಲಿ ವಂದಿಸಿದರು.

ಬಸವಪ್ರಭು ಹೊಸಕೇರಿ, ಡಾ| ಸಂಜೀವ ಕುಲಕರ್ಣಿ, ಗುರು ಹಿರೇಮಠ, ಡಾ| ಮಹೇಶ ಹೊರಕೇರಿ ಹಾಗೂ ಸುಶೀಲಾಬಾಯಿ ಮರಿಗೌಡ ಪಾಟೀಲ, ಡಾ| ಎಂ.ಬಿ. ಮುನೇನಕೊಪ್ಪ, ಸಿ.ಎಸ್‌. ಪಾಟೀಲ, ಎಸ್‌.ಜಿ. ಪಾಟೀಲ, ರಾಜೇಂದ್ರ ಸಾವಳಗಿ, ನಿರ್ಮಲಾ ಜಾಪಗಾಲ, ಬಿ.ಆರ್‌. ಪಾಟೀಲ, ಎಫ್‌. ಎಂ. ವೆಂಕನಗೌಡರ, ಆರ್‌.ಎಂ. ಪಾಟೀಲ, ಶಾಂತಾ ಪಾಟೀಲ, ಶಿ.ಮ. ರಾಚಯ್ಯನವರ, ಮಹಾಂತೇಶ ನರೇಗಲ್ಲ ಹಾಗೂ ಮರಿಗೌಡ ಫಕ್ಕೀರಗೌಡ ಪಾಟೀಲ ಪರಿವಾರದವರು ಪಾಲ್ಗೊಂಡಿದ್ದರು.

ಮನಸ್ಥಿತಿ ಬದಲಾಗದಿದ್ದರೆ ಕಷ್ಟ
ಭೂಮಿ ನಾಶವಾದರೆ ನಾವು ಬದುಕುವುದು ಹೇಗೆ? ಮಣ್ಣು ನಾಶವಾದರೆ ಮತ್ತೆ ಮಣ್ಣನ್ನು ಸೃಷ್ಟಿ ಮಾಡಲು ಆಗುವುದಿಲ್ಲ ಎಂಬ ಅರಿವು ಎಲ್ಲರಿಗೂ ಇರಬೇಕು. ನೆಲ-ಜಲ ಸಂಕಷ್ಟದಲ್ಲಿದೆ. ನಮ್ಮ ಸಂಕಷ್ಟವನ್ನು ಹೊರ ದೇಶದವರು ಬಂದು ಅಧ್ಯಯನ ಮಾಡುತ್ತಿದ್ದಾರೆ. ಇದು ನಮಗೆ ನಾಚಿಕೆ ತರುವಂತಹದ್ದು. ನಮ್ಮ ಸಮಸ್ಯೆಯನ್ನು ನಾವು ಅಧ್ಯಯನ ಮಾಡದೇ ಹೋಗುತ್ತಿದ್ದೇವೆ. ನಮ್ಮ ಮನಸ್ಥಿತಿ ಬದಲಾಗದೇ ಹೋದರೆ ದೇಶ ಇನ್ನಷ್ಟು ಜಲ ಸಮಸ್ಯೆ ಎದುರಿಬೇಕಾದೀತು ಎಂದು ಡಾ| ರಾಜೇಂದ್ರ ಪೊದ್ದಾರ ಎಚ್ಚರಿಸಿದರು.

ಬಾಟಲಿ ನೀರು ಖರೀದಿ ಮಾಡುವುದನ್ನು ನಿಲ್ಲಿಸಬೇಕಿದೆ. ಇದರಿಂದ ಮಿಲಿಯನ್‌ ಕೋಟಿಯ ಬಾಟಲಿ ಮಾಫಿಯಾವನ್ನು ಒಂದು ಸಣ್ಣ ನಿರ್ಧಾರದಿಂದ ಹೊಡೆದು ಹಾಕಬಹುದು.
ರಾಜೇಂದ್ರ ಪೊದ್ದಾರ,
ವಾಲ್ಮಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next