ಹಾವೇರಿ: ಕೆಸರಳ್ಳಿ ಗ್ರಾಮವು ನೆರೆ ಬಂದಾಗಲೆಲ್ಲಾ ಮುಳುಗಡೆ ಭೀತಿ ಎದುರಿಸುತ್ತಿದ್ದು, ಈ ಬಾರಿ ನೆರೆಗೆ ಶೇ. 90ರಷ್ಟು ಗ್ರಾಮ ಮುಳುಗಡೆಯಾಗಿದೆ. ಜಿಲ್ಲಾಡಳಿತ ಶಾಶ್ವತ ಪರಿಹಾರವಾಗಿ ಸ್ಥಳಾಂತರ ಮಾಡಬೇಕು ಎಂದು ಕೆಸರಳ್ಳಿ ಗ್ರಾಮಸ್ಥರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆ ನೆರೆ ಬಂದು ಸಾಕಷ್ಟು ಗ್ರಾಮಗಳು ಭಾಗಶಃ ಮುಳುಗಡೆಯಾಗಿದ್ದರಿಂದ ಜನಜೀವನ, ಜಾನುವಾರು ಹಾಗೂ ಹೊಲಗದ್ದೆಗಳಲ್ಲಿನ ಬೆಳೆಗಳು ಜಲಾವೃತವಾಗಿ ತೀವ್ರ ಸಂಕಷ್ಟಕ್ಕೀಡಾಗಿವೆ. ಹಾಗೆಯೇ ಹಾವೇರಿ ತಾಲೂಕಿನ ಕೆಸರಳ್ಳಿ ಗ್ರಾಮವು ವರದಾ ನದಿ ದಡದಲ್ಲಿದ್ದು, ನೆರೆ ಬಂದಾಗೊಮ್ಮೆ ಪದೆ ಪದೇ ಮುಳುಗಡೆ ಭೀತಿ ಎದುರಿಸುತ್ತಿದೆ. ಅಲ್ಲದೇ ಈ ವರ್ಷವಂತೂ ಅದು ತುಂಬಾ ಅಪಾಯಕಾರಿ ಸ್ಥಿತಿ ತಲುಪಿತ್ತು. ಶೇ. 90ರಷ್ಟು ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ಬಹುತೇಕ ಮನೆಗಳು ಜಖಂಗೊಂಡಿವೆ. 15-20 ಮನೆಗಳು ಸಂಪೂರ್ಣ ಬಿದ್ದಿವೆ. ಆದರೂ ಸರಕಾರ ಪರಿಹಾರ ಕಲ್ಪಿಸಲು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದರು.
ಮೊದಲಿನಿಂದಲೂ ಈ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಗ್ರಾಮಸ್ಥರು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಲದ ನೆರೆಯಿಂದಾಗಿ ಬದುಕು ಕಳೆದುಕೊಂಡಿರುವ ಜನತೆ ಮರಳಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಸರಕಾರ ಹಾಗೂ ಜಿಲ್ಲಾಡಳಿತವು ಕೂಡಲೇ ಕೆಸರಳ್ಳಿ ಗ್ರಾಮವನ್ನು ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಎದುರು ಗ್ರಾಮಸ್ಥರು ಅನಿರ್ದಿಷ್ಟವಾಗಿ ತೀವ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಸಂಚಾಲಕ ಮುಕ್ತಾನಂದ ಹಿರೇಮನಿ ಮಾತನಾಡಿ, ನೆರೆಯಿಂದಾಗಿ ಗ್ರಾಮದ ಸಂಪೂರ್ಣ ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿದ್ದಾರೆ. ಸರಕಾರ ಘೋಷಿಸಿದ ತುರ್ತು ಸಹಾಯ ನಿಧಿ 10 ಸಾವಿರ ರೂ. ಎಲ್ಲ ಫಲಾನುಭವಿಗಳಿಗೂ ದೊರೆತಿಲ್ಲ. ಅಲ್ಲದೇ ಈ ವರೆಗೂ ಈ ಗ್ರಾಮದ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಕೂಡಲೇ ಎಲ್ಲರಿಗೂ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಅಶೋಕ ಗುರುಬಸಣ್ಣವರ, ಬಸವರಾಜ ಪಾಟೀಲ, ಶೇಖರಗೌಡ ಅರಳಳ್ಳಿ, ಶಿವನಗೌಡ ಪಾಟೀಲ, ಬಸವಣ್ಣಯ್ಯ ಮಳ್ಳೂರುಮಠ, ಬಸವರಾಜ ಪಾಟೀಲ, ಮುಂತಾದವರು ವಹಿಸಿದ್ದು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.