Advertisement
ನಾನು ಕಾಲೇಜು ಓದುತ್ತಿರುವಾಗ, ಇಂಗ್ಲಿಷ್ ಪ್ರಶ್ನೆಪತ್ರಿಕೆಗಳಲ್ಲಿ ಎನೊಟೇಶನ್ (Annotation) ಎಂಬ ವಿಭಾಗವೊಂದು ತಪ್ಪದೆ ಇರುತ್ತಿತ್ತು. ಎನೊಟೇಟ್ ಎಂದರೆ “ಸಂದರ್ಭ ಸಹಿತ ವಿವರಿಸು’ ಎಂದು ಅರ್ಥ. ನಮ್ಮ ಪ್ರಧಾನ ಪಠ್ಯಪುಸ್ತಕಗಳ ಮೂರು-ನಾಲ್ಕು ಸಾಲುಗಳ ಕೆಲವು ಪ್ರಸಿದ್ಧ ಭಾಗಗಳನ್ನು ಕೊಟ್ಟು ಅವುಗಳನ್ನು ವಿವರಿಸಲು ಕೇಳುತ್ತಿದ್ದರು. ಪ್ರಧಾನ ಪಠ್ಯಪುಸ್ತಕಗಳಿರುವುದು ಸಾಕಷ್ಟು ಆಳವೂ ಹರವೂ ಆದ ಅಧ್ಯಯನಕ್ಕೆ. ಇದನ್ನು ಪರೀಕ್ಷಿಸಿ ಅದಕ್ಕೆ ತಕ್ಕಂತೆ ಅಂಕಗಳನ್ನು ನೀಡುವ ವಿಧಾನ ಇದು. ಪ್ರತಿಯೊಂದು ಎನೊಟೇಷನ್‌ಗೂ ಒಂದು-ಒಂದೂವರೆ ಪುಟಗಳಷ್ಟು ಬರೆದರೆ ಸಾಕು. ಉದಾಹರಣೆಗೆ, ಈ ಸಾಲುಗಳನ್ನು ನೋಡಿ:
And burnt the topless towers of Ilium?
ಶೇಕ್ಸ್‌ಪಿಯರನ ಸಮಕಾಲೀನನಾಗಿದ್ದ ಕ್ರಿಸ್ಟೋಫರ್ ಮಾರ್ಲೋನ ಸುಪ್ರಸಿದ್ಧ ನಾಟಕವಾದ ಡಾಕ್ಟರ್ ಫಾಸ್ಟಸ್‌ನಲ್ಲಿ ಫಾಸ್ಟಸ್ ಸೈತಾನನ ಕಿಂಕರ ಮೆಫಿಸ್ಟೋಫಿಲಿಸ್‌ಗೆ ಹೇಳುವ ಮಾತುಗಳಿವು. ಹೋಮರನ ಇಡೀ ಈಲಿಯಡ್ ಮಹಾಕಾವ್ಯವೇ ಅಡಕವಾಗಿದೆ ಈ ಸಾಲುಗಳಲ್ಲಿ! ಇಲಿಯಂ ಎಂದರೆ ಟ್ರಾಯ್. ಟ್ರಾಯ್‌ನ ರಾಜಕುಮಾರ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಅರಸ ಮೆನಿಲಾಸ್‌ನ ಪತ್ನಿ ಅಪೂರ್ವ ಸುಂದರಿ - ಹೆಲೆನ್‌ಳನ್ನು ಹಾರಿಸಿಕೊಂಡು ಹೋಗುತ್ತಾನೆ. ಗ್ರೀಕ್ ರಾಜರುಗಳೆಲ್ಲ ಸೇರಿ ಸಾವಿರ ಹಡಗುಗಳಲ್ಲಿ ಬಂದು ಟ್ರಾಯ್ ಮೇಲೆ ಯುದ್ಧ ಸಾರಿ ಆ ನಗರವನ್ನು ಸುಟ್ಟು ಭಸ್ಮ ಮಾಡಿ ಹೆಲೆನ್‌ಳನ್ನು ಬಿಡಿಸಿಕೊಂಡು ಹೋಗುವುದೇ ಕತೆ. ಟ್ರಾಯ್‌ಯ ದುರಂತ ಕೇಂದ್ರೀಕೃತವಾಗಿರುವುದು ಹೆಲೆನ್‌ಳ ಸೌಂದರ್ಯದ ಮೇಲೆ ಎನ್ನುವುದನ್ನು ಮಾರ್ಲೋ ಎರಡೇ ಎರಡು ಸಾಲುಗಳಲ್ಲಿ ತಂದಿದ್ದಾನೆ. ನ್ಯಾಯವಾಗಿಯೇ ಇವು ಇಂಗ್ಲಿಷ್ ಸಾಹಿತ್ಯದಲ್ಲಿ ಅಜರಾಮರವಾಗಿವೆ. ಮುಂದೆ ಡಬ್ಲ್ಯೂ ಬಿ. ಯೇಟ್ಸ್ ಲಾಂಗ್-ಲೆಗ್ಡ್ ಫ್ಲೈಎಂಬ ಕವಿತೆಯಲ್ಲಿ ಮಾರ್ಲೋನ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾನೆ: That the topless towers be burnt
And men recall that face,
Move most gently if move you must
In this lonely place.
ಯೇಟ್ಸ್‌ನ ಇಡೀ ಕವಿತೆ ಸೃಷ್ಟಿಶೀಲ ಮೌನ ಮತ್ತು ಏಕಾಗ್ರತೆಯ ಕುರಿತು ಹೇಳುತ್ತದೆ. ಇಲ್ಲಿ ಯುದ್ಧನಿರತನಾದ ಜೂಲಿಯಸ್ ಸೀಸರ್, ಆದಮಿನ ಚಿತ್ರಬಿಡಿಸುವ ಮೈಖೆಲೇಂಜೆಲೋ ಇದ್ದಾರೆ. ಮೇಲಿನ ಸಾಲುಗಳಲ್ಲಿ, ಹೆಲೆನ್ ಬೀದಿಯ ಜನಸಾಮಾನ್ಯರ ನೃತ್ಯದ ಮಟ್ಟುಗಳನ್ನು ಅಭ್ಯಾಸ ಮಾಡುತ್ತಿದ್ದಾಳೆ; “ಯಾರೂ ತನ್ನ ಪಾದಗಳನ್ನು ನೋಡದಿರಲಿ’ ಎಂದುಕೊಳ್ಳುತ್ತಾಳೆ. “ಅವಳ ಲಕ್ಷ್ಯ ಕೆಡಿಸದಿರಿ’ ಎನ್ನುತ್ತದೆ ಕವಿತೆ. ಮುಗ್ದೆ ಅವಳು, ಒಂದು ಪಾಲು ಹೆಣ್ಣು, ಮೂರು ಪಾಲು ಮಗು! ನೋಡಿರಿ, ಆದರೆ ನೋಡದೆಯೂ ಇರಿ!
Related Articles
That nobody looks; her feet
Practice a tinker shuffle
Picked up on the street.
ಕವಿಯ ಪ್ರಕಾರ ಹೆಲೆನಿಗೂ ಮಾನವ ಇತಿಹಾಸದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಿದೆ. ಪ್ರೀತಿ-ಪ್ರೇಮದ ಪ್ರತೀಕ ಅವಳು. ಯೇಟ್ಸ್ ಗೆ ಹೆಲೆನ್ ಎಂದರೂ ಮಾಡ್‌ಗಾನ್ ಎಂದರೂ ಒಂದೇ. ಹೆಲೆನ್ ಕಲ್ಪನೆಯಲ್ಲಿ ಇರುವವಳಾದರೆ, ಅವನು ಪ್ರೀತಿಸುತ್ತಿದ್ದ ಐರಿಶ್ ಕ್ರಾಂತಿಕಾರಿಣಿ ಮಾಡ್‌ಗಾನ್ ಹೆಚ್ಚು ನೈಜವಾಗಿ ಕವಿಯ ಜೀವನದಲ್ಲಿ ಸದ್ಯತೆಯಲ್ಲಿ ಇದ್ದಾಳೆ ಎನ್ನಬಹುದು. ಹೆಲೆನ್ -ಮಾಡ್‌ಗಾನ್ ಮೋಟಿಫ್- ಈ ಸಮೀಕರಣ- ಯೇಟ್ಸ್‌ನ್ನು ಎಷ್ಟು ಕಾಡಿತ್ತು ಎಂದರೆ, No Second Troy ಎಂಬ ಪ್ರತ್ಯೇಕ ಕವಿತೆಯನ್ನೇ ಅವನು ಬರೆದಿದ್ದಾನೆ ಹಾಗೂ ಅದು ಈ ಕೆಳಗಿನ ಉಜ್ವಲ ಸಾಲುಗಳೊಂದಿಗೆ ಕೊನೆಗೊಳ್ಳುತ್ತದೆ:
Advertisement
Why, what could she have done, being what she is?Was there another Troy for her to burn?
ಮೆಫಿಸ್ಟೋಫಿಲಿಸ್ ಫಾಸ್ಟಸ್‌ಗೆ ತಂದು ತೋರಿಸಿದುದು ಹೆಲೆನ್‌ಳ ಛಾಯೆಯನ್ನಲ್ಲದೆ ನಿಜವಾದ ಹೆಲೆನ್‌ಳನ್ನಲ್ಲ. ಯಾಕೆಂದರೆ, ಆಕೆ ಸತ್ತು ಯುಗಗಳೇ ಆಗಿವೆ. ಇನ್ನು ಟಾಪ್‌ಲೆಸ್ ಟವರ್ಸ್ ಎಂದರೆ ಶಿಖರಗಳಿಲ್ಲದ ಗೋಪುರಗಳು ಎಂದು ಅರ್ಥವಲ್ಲ; ನಿಲುಕದ ಶಿಖರಗಳು ಅರ್ಥಾತ್ ಅತ್ಯುನ್ನತ ಗೋಪುರಗಳು ಎಂದರ್ಥ. ಲಕ್ಷ್ಯಪೂರ್ಣವಾದ ಓದು ಇಲ್ಲದೆ ಇದ್ದರೆ ನಾವು ಕೆಲವನ್ನು ಗಮನಿಸುವುದೇ ಇಲ್ಲ. ನೋಡುತ್ತೇವೆ, ಆದರೆ ಕಾಣುವುದಿಲ್ಲ. ಅಧ್ಯಯನ ಎಂದರೆ ಧಾವಂತವಿಲ್ಲದ, ಜಾಗೃತವಾದ, ಆಸಕ್ತ ಓದು. ಇಂಥ ಅಭ್ಯಾಸವೂ ಮನುಷ್ಯನಿಗೆ ಅಗತ್ಯ. ಅದು ನಮ್ಮ ಜ್ಞಾನಲೋಕವನ್ನು ವಿಸ್ತರಿಸುತ್ತದೆ, ನಮ್ಮ ಅಜ್ಞಾನವನ್ನು ನಮಗೇ ತೋರಿಸಿಕೊಡುತ್ತ ನಮ್ಮನ್ನು ಹೆಚ್ಚು ವಿನಯವಂತರನ್ನಾಗಿ ಮಾಡುತ್ತದೆ. ಮಿಲ್ಟನ್‌ನ ಅಂಧತ್ವದ ಕುರಿತಾದ ಸಾನೆಟ್. 17ನೆಯ ಶತಮಾನದ ಈ ಮಹಾಕವಿ ತನ್ನ 48ನೆಯ ವಯಸ್ಸಿನಲ್ಲೇ ಅಂಧನಾಗತೊಡಗಿದ. ಅವನು ಆಗಲೇ ಕೆಲವು ಉತ್ತಮ ಕವಿತೆಗಳನ್ನು ಬರೆದಿದ್ದರೂ, ಬರೆಯುವುದು ಇನ್ನಷ್ಟು ಇದ್ದುವು ಪ್ಯಾರಡೈಸ್ ಲಾಸ್ಟ್ (ಕಾವ್ಯ), ಪ್ಯಾರಡೈಸ್ ರಿಗೈನ್x (ಕಾವ್ಯ), ಸ್ಯಾಮ್ಸನ್ ಎಗನಿಸ್ಟಿಸ್ (ನಾಟಕ) ಮುಂತಾಗಿ. ತನ್ನಲ್ಲಿದ್ದ ಪ್ರತಿಭೆ ನಿಷ್ಪ್ರಯೋಜಕವಾಗಿ ತಾನಿನ್ನು ಕತ್ತಲೆಗೆ ತಳ್ಳಲ್ಪಟ್ಟು ಇದ್ದೂ ಸತ್ತಂತೆಯೇ ಎಂದು ಮರುಗುತ್ತಾನೆ. ಇಲ್ಲಿ ಮಿಲ್ಟನ್ ಪ್ರತಿಭೆ ಎನ್ನುವುದು ತನ್ನ ಕಾವ್ಯಪ್ರತಿಭೆಗೆ ಎಂದು ಬೇರೆ ಹೇಳಬೇಕಿಲ್ಲ; ಅವನು ಬಳಸುವ ಇಂಗ್ಲಿಷ್ ಪದ ಟ್ಯಾಲೆಂಟ್ (talent). ಮೇಲುನೋಟಕ್ಕೆ ಎಲ್ಲವೂ ಸರಳವಾಗಿದೆ: When I consider how my light is spent,
Ere half my days, in this dark world and wide,
And that one Talent which is death to hide
Lodged with me useless, though my Soul more bent
To serve therewith my Maker……
ಆದರೆ, ಈ ಮೇಲ್ನೋಟದ ಓದು ಒಂದು ವಿಷಯವನ್ನು ಮರೆಸುತ್ತದೆ: ಅದು ಕವಿ ಇಲ್ಲಿ ಟ್ಯಾಲೆಂಟ್ ಎಂಬ ಪದವನ್ನು ದ್ವಂದ್ವಾರ್ಥದಲ್ಲಿ ಬಳಸುತ್ತಿದ್ದಾನೆ ಎನ್ನುವುದು. ಈ ಪದದ ಒಂದು ಅರ್ಥ ಪ್ರತಿಭೆ ಎಂದಾದರೆ, ಇನ್ನೊಂದು ಅರ್ಥ ಹಣ ಎಂದು. ಪುರಾತನ ಗ್ರೀಸ್ ಮತ್ತು ರೋಮಿನಲ್ಲಿ ಒಂದು ಮೌಲ್ಯದ ನಾಣ್ಯಕ್ಕೆ ಟ್ಯಾಲೆಂಟ್ ಎಂದು ಕರೆಯುತ್ತಿದ್ದರು. ಬೈಬಲಿಗೆ ಸಂಬಂಧಿಸಿದಂತೆ ಪ್ಯಾರಬ್ ಆಫ್ ದ ಟ್ಯಾಲೆಂಟ್ಸ್ ಎಂಬ ನೀತಿಕತೆಯೊಂದು ಕ್ರಿಶ್ಚಿಯನರಲ್ಲಿ ಪ್ರಚಾರದಲ್ಲಿದೆ. ಇದು ಮ್ಯಾಥ್ಯೂ (25. 14-30) ಮತ್ತು ಲ್ಯೂಕ್(19. 11-27) ಸುವಾರ್ತೆಗಳಲ್ಲಿ ಅಲ್ಪ ವ್ಯತ್ಯಾಸಗಳೊಂದಿಗೆ ಬರುತ್ತದೆ. ಕತೆಯ ಪ್ರಕಾರ, ಮಾಲಿಕನೊಬ್ಬ ತನ್ನ ಮೂವರು ಸೇವಕರನ್ನು ಕರೆದು, ಮೊದಲನೆಯವನಿಗೆ ಐದು ಟ್ಯಾಲೆಂಟುಗಳನ್ನೂ, ಎರಡನೆಯವನಿಗೆ ಎರಡು ಟ್ಯಾಲೆಂಟುಗಳನ್ನೂ, ಮೂರನೆಯ ವನಿಗೆ ಒಂದು ಟ್ಯಾಲೆಂಟನ್ನೂ ಕೊಡುತ್ತಾನೆ. ಕಾಲ ಕಳೆದು ಮಾಲಿಕ ಸೇವಕರನ್ನು ಕರೆದು, “ಹಣವನ್ನೇನು ಮಾಡಿದಿರಿ’ ಎಂದು ಕೇಳಲು, “ನಾನು ಐದರಿಂದ ಇನ್ನು ಐದನ್ನು ಸಂಪಾದಿಸಿದೆ’ ಎನ್ನುತ್ತಾನೆ. ಎರಡನೆಯವನು, “ಎರಡರಿಂದ ಇನ್ನು ಎರಡನ್ನು ಸಂಪಾದಿಸಿದೆ’ ಎನ್ನುತ್ತಾನೆ. ಮಾಲಿಕನಿಗೆ ಸಂತೋಷವಾಗುತ್ತದೆ. ಮೂರನೆಯವನು ತಾನು ಹಣವನ್ನು ಕಾಪಿಡಲು ಮಣ್ಣಿನಲ್ಲಿ ಹೂತು ಹಾಕಿದೆ ಎನ್ನುತ್ತಾನೆ. ಪರ್ಯಾಯವಾಗಿ, ಸ್ವಂತ ಬಿತ್ತದಲ್ಲಿ ಬೆಳೆ ತೆಗೆಯುವ ಮಾಲಿಕನ ಸ್ವಭಾವವನ್ನೂ ಉಲ್ಲೇಖ ಮಾಡುತ್ತಾನೆ. ಇದರಿಂದ ಕೋಪಗೊಂಡ ಮಾಲಿಕ ಮೊದಲು ಕೊಟ್ಟಿದ್ದ ಒಂದು ನಾಣ್ಯವನ್ನೂ ಕಿತ್ತು ತೆಗೆದು ಅವನನ್ನು outer darknessಗೆ ಎಸೆಯುತ್ತಾನೆ. ಇಡೀ ಕತೆಯಲ್ಲಿ ಮ್ಯಾಥ್ಯೂ ಬಳಸುವುದು ಟ್ಯಾಲೆಂಟ್ ಪದವನ್ನು, ನಾಣ್ಯ ಎಂಬ ಅರ್ಥದಲ್ಲಿ; ಅದೇ ಅರ್ಥದಲ್ಲಿ ಲ್ಯೂಕ್ ಮಿನಾ ಎಂಬ ಇನ್ನೊಂದು ಪುರಾತನ ಪದವನ್ನು ಬಳಸುತ್ತಾನೆ. ಎರಡೂ ಮೊತ್ತದಲ್ಲಿ ಸಂಪತ್ತನ್ನು ಸೂಚಿಸುವ ಪದಗಳೇ. ಈ ಕತೆಯ ಹಿನ್ನೆಲೆಯಲ್ಲಿ ನೋಡಿದಾಗ ಮಿಲ್ಟನ್‌ನ ಕವಿತೆ ಹೆಚ್ಚು ಸಂಕೀರ್ಣವಾಗಿರುವಂತೆ ಅನಿಸುತ್ತದೆ. They also serve who only stand and wait ಎಂಬ ಮಾತು ಸ್ವಾನುಕಂಪ ಅನಿಸದೆ ಹೆಚ್ಚು ವಿಶ್ವಾತ್ಮಕ ಕಳಕಳಿಯಿಂದ ತುಂಬಿರುವ ಹಾಗೆ ತೋರುತ್ತದೆ. ಕೆ.ವಿ. ತಿರುಮಲೇಶ್