Advertisement
ಆಂಧ್ರಪ್ರದೇಶ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ಎಚ್‌ಐವಿ ಬಾಧಿತರಿಗೆ ಪ್ರತೀ ತಿಂಗಳು 2 ಸಾವಿರ ರೂ. ನೀಡುತ್ತಿದ್ದಾರೆ. ಆದರೆ ನಮ್ಮಲ್ಲಿ ಈ ಯೋಜನೆಯಿಲ್ಲ. ಬದಲಾಗಿ ಪತಿ ಮೃತಪಟ್ಟಿದ್ದರೆ ಅದರ ಆಧಾರದಲ್ಲಿ ವಿಧವಾ ವೇತನ ನೀಡಲಾಗುತ್ತಿದೆ ಅಷ್ಟೇ. ಇದರಿಂದ ಎಲ್ಲರಿಗೂ ಈ ಹಣ ಸಿಗುತ್ತಿಲ್ಲ. ಕರ್ನಾಟಕದಲ್ಲೂ ಜಾರಿಗೆ ತನ್ನಿ ಎನ್ನುವ ಬೇಡಿಕೆಯಿದೆ.
ಉಡುಪಿ ಜಿಲ್ಲೆಯಲ್ಲಿ 4,153, ದ.ಕ. ಜಿಲ್ಲೆಯಲ್ಲಿ 4,127 ಸೇರಿದಂತೆ ಪ್ರಸ್ತುತ ರಾಜ್ಯದಲ್ಲಿ 3 ಲಕ್ಷಕ್ಕೂ ಮಿಕ್ಕಿ ಎಚ್‌ಐವಿ ಬಾಧಿತರಿದ್ದಾರೆ. ಇವರಲ್ಲಿ 3-4 ವರ್ಷಗಳ ಹಿಂದೆ ಕೆಲವರಿಗೆ ಸರಕಾರದಿಂದ ನಿವೇಶನ ಹಾಗೂ ವಸತಿ ಸಿಕ್ಕಿದೆ. ಆದರೆ 2018-19ನೇ ಸಾಲಿನಿಂದ ವಸತಿ ಯೋಜನೆಗಳಿಗೆ ರಾಜ್ಯ ಸರಕಾರ ಅನುದಾನ ಹಂಚಿಕೆ ಮಾಡದ ಕಾರಣ ಆ ಬಳಿಕ ಯಾರಿಗೂ ವಸತಿ ಮಂಜೂರಾಗಿಲ್ಲ. 2022-23ನೇ ಸಾಲಿನಲ್ಲಿ ದ.ಕ.ದಲ್ಲಿ 280 ಮಂದಿ, ಉಡುಪಿಯಲ್ಲಿ 13 ಮಂದಿ (7 ಮಂದಿ ನಿವೇಶನ ಹಾಗೂ 6 ಮಂದಿ ವಸತಿ ಹಾಗೂ ನಿವೇಶನ ಎರಡಕ್ಕೂ) ಅರ್ಜಿ ಸಲ್ಲಿಸಿದ್ದಾರೆ. ನಿಯಮದಿಂದ ಯಾಕೆ ಅಡ್ಡಿ ?
ವಸತಿ ಹಾಗೂ ನಿವೇಶನ ಪಡೆಯಲು ಎಚ್‌ಐವಿ ಬಾಧಿತರಿಗೆ ಪ್ರತ್ಯೇಕ ನಿಯಮವೇನಿಲ್ಲ. ಎಲ್ಲರಿಗೂ ಒಂದೇ ರೀತಿ ಇರುವುದರಿಂದ ಸಮಸ್ಯೆಯಾಗಿದೆ. ನಿವೇಶನ ಇದ್ದರೆ ಮಾತ್ರ ಇವರಿಗೆ ವಸತಿ ಯೋಜನೆಯಡಿ ಅನುದಾನ ಮಂಜೂರಾಗುತ್ತದೆ. ಕೆಲವರಲ್ಲಿ ನಿವೇಶನ ಇರುವುದಿಲ್ಲ. ನಿವೇಶನ ಹಾಗೂ ವಸತಿ ಎರಡೂ ಬೇಕಾಗುವವರಿಗೆ ಪ್ರತ್ಯೇಕ ಯೋಜನೆಯಿದ್ದರೂ ಅದರಡಿ ಮಂಜೂರಾಗದೆ 7-8 ವರ್ಷಗಳೇ ಕಳೆದಿವೆ. ಇನ್ನು ನಿವೇಶನ ಇದ್ದರೂ ಅದು ಅವರ ಹೆಸರಲ್ಲಿ ಇರುವುದಿಲ್ಲ. ತಂದೆ-ತಾಯಿ ಹೆಸರಲ್ಲಿ ಇರುವುದರಿಂದ ಅವರಿಗೆ ಮನೆ ಮಂಜೂರಾಗುವುದಿಲ್ಲ. ನಿವೇಶನ ಬೇಕು ಅಂದರೂ ಇವರ ಹೆಸರು ತಂದೆ-ತಾಯಿ ಹೆಸರಿನ ಆರ್‌ಟಿಸಿಯಲ್ಲಿರುವುದರಿಂದ ಅದು ಸಹ ಸಿಗುವುದು ಕಷ್ಟ. ಗ್ರಾ.ಪಂ., ತಾಲೂಕು ಕಚೇರಿ, ಜಿಲ್ಲಾ ಕೇಂದ್ರಗಳಿಗೆ ಅರ್ಜಿ ಹಿಡಿದುಕೊಂಡು ಅಲೆದಾಡಿದರೂ ಸಿಗುತ್ತಿಲ್ಲ ಎನ್ನುವ ಅಳಲು ಸಂತ್ರಸ್ತರದ್ದು. ಹಾಗಾಗಿ ಅವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ನಿಯಮಗಳನ್ನು ಸಡಿಲಿಸಿ, ನಿವೇಶನ ಹಾಗೂ ವಸತಿ ಯೋಜನೆಯಡಿ ಸೌಲಭ್ಯ ಒದಗಿಸಬೇಕು ಎನ್ನುವುದು ಸಂತ್ರಸ್ತರ ಬೇಡಿಕೆಯಾಗಿದೆ.
Related Articles
ವಸತಿ ಹಾಗೂ ನಿವೇಶನಕ್ಕಾಗಿ ಎಚ್‌ಐವಿ ಬಾಧಿತರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಸರಕಾರಕ್ಕೆ ಸಲ್ಲಿಸಲಾಗಿದೆ. ಮಾಸಾಶನ ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿಯೇ ಬೆಳವಣಿಗೆಗಳು ಆಗಬೇಕಾಗಿದೆ. ಎಚ್‌ಐವಿ ಸೋಂಕು ಈಗ ನಿಯಂತ್ರಣದಲ್ಲಿದ್ದು, ಔಷಧಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎನ್ನುವುದಾಗಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಉಡುಪಿಯ ಡಾ| ಚಿದಾನಂದ ಸಂಜು ಎಸ್.ವಿ. ಉಡುಪಿ ಹಾಗೂ ದ.ಕ.ದ ಡಾ| ಬದ್ರುದ್ದೀನ್ ಎಂ.ಎನ್. ತಿಳಿಸಿದ್ದಾರೆ.
Advertisement
ಎಚ್‌ಐವಿ ಬಾಧಿತರು ವಸತಿ, ನಿವೇಶನ ಪಡೆಯಲು ಪ್ರಯಾಸಪಡುವಂತಾಗಿದೆ. ಬೇರೆ ರಾಜ್ಯಗಳಂತೆ ಮಾಸಾಶನ ಹಾಗೂ ಬಾಧಿತರ ಮಕ್ಕಳಿಗೆ ಉದ್ಯೋಗ ಮೀಸಲಾತಿ ನೀಡಿದರೆ ಅನುಕೂಲ ಆಗಲಿದೆ. ಹಿಂದೆ ಎಆರ್‌ಟಿ ಔಷಧ ತೆಗೆದುಕೊಂಡು ಬರಲು ಪ್ರಯಾಣ ವೆಚ್ಚ ನೀಡಲಾಗುತ್ತಿತ್ತು, ಈಗ ರದ್ದಾಗಿದೆ. ಧನಶ್ರೀ ಯೋಜನೆಯಡಿ ಅರ್ಜಿ ಸಲ್ಲಿಕೆ ವೇಳೆ ಗೌಪ್ಯತೆ ಕಾಪಾಡಿದರೆ ಉತ್ತಮ.– ಸಂಜೀವ ವಂಡ್ಸೆ , ಅಧ್ಯಕ್ಷರು, ಆಸರೆ ಚಾರಿಟೆಬಲ್ ಟ್ರಸ್ಟ್ ವಂಡ್ಸೆ ಸದನದಲ್ಲಿ ಪ್ರಸ್ತಾವ
ಎಚ್‌ಐವಿ ಬಾಧಿತರಿಗೆ ಆದ್ಯತೆ ನೆಲೆಯಲ್ಲಿ ವಸತಿ ಹಾಗೂ ನಿವೇಶನ ಒದಗಿಸಿಕೊಡುವ ಬಗ್ಗೆ, ಅದಕ್ಕಿರುವ ನಿಯಮಗಳನ್ನು ಸಡಿಲಿಕೆ ಮಾಡುವ ಕುರಿತಂತೆ, ಪ್ರತೀ ತಿಂಗಳು ಅವರಿಗೆ ಜೀವನ ನಡೆಸಲು ಅನುಕೂಲ ಆಗುವಂತೆ ಮಾಸಾಶನ ಯೋಜನೆ ಜಾರಿ ಮಾಡುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾವಿಸಿ, ಸರಕಾರದ ಗಮನಸೆಳೆಯಲಾಗುವುದು.
– ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ – ಪ್ರಶಾಂತ್ ಪಾದೆ