ಗದಗ: ಉದಯವಾಗಲಿ ಚೆಲುವು ಕನ್ನಡ ನಾಡು ಗೀತೆ ರಚಿಸಿದ ಕವಿ, ಕರ್ನಾಟಕ ಏಕೀಕರಣ ಹೋರಾಟದ ರೂವಾರಿ ಹುಯಿಲಗೋಳ ನಾರಾಯಣರಾವ್ ಅವರ ಗದುಗಿನ ಮನೆಯನ್ನು ಸ್ಮಾರಕ ಭವನವನ್ನಾಗಿ ನಿರ್ಮಾಣ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ| ರವೀಂದ್ರ ಕೊಪ್ಪರ ಆಗ್ರಹಿಸಿದರು.
ನಗರದ ಹಾಳ ದಿಬ್ಬದಲ್ಲಿರುವ ಹುಯಿಲಗೋಳ ನಾರಾಯಣರಾವ್ ಅವರ ಮನೆಯಲ್ಲಿ ಹುಯಿಲಗೋಳ ನಾರಾಯಣರಾವ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಹುಯಿಲಗೋಳ ನಾರಾಯಣರಾವ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಯಿಲಗೋಳ ನಾರಾಯಣರಾವ್ ಅವರರು ನಾಡು ಕಂಡಂತಹ ಶ್ರೇಷ್ಠ ಕವಿ, ಬರಹಗಾರ, ಸಾಹಿತಿ, ನಾಟಕ ಹಾಗೂ ಹೋರಾಟಗಾರ. ಉದಯವಾಗಲಿ ಚೆಲುವು ಕನ್ನಡ ನಾಡು ಗೀತೆ ರಚಿಸಿಸುವ ಮೂಲಕ ಕರ್ನಾಟಕ ಏಕೀಕರಣ ಹೋರಾಟದ ಕಿಚ್ಚು ಹೆಚ್ಚಿಸಿದರು. ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಕನ್ನಡ ಅಭಿಮಾನ ಇಂದಿನ ಯುವ ಜನರಿಗೆ ಆದರ್ಶಪ್ರಾಯವಾಗಿದೆ. ಅವರ ಚಿಂತನೆ, ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕು. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಅವರ ಮನೆಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡು, ಹೊಸದಾಗಿ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಬಿ. ತಳಗೇರಿ ಮಾತನಾಡಿ, ಹುಯಿಲಗೋಳ ನಾರಾಯಣರಾವ್ ರಚಿಸಿದ ಉದಯವಾಗಲಿ ಚಲುವು ಕನ್ನಡ ನಾಡು ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಹಾಡಲಾಯಿತು. ಈ ಹಾಡು ಕರ್ನಾಟಕದ ನಾಡ ಗೀತೆಯಾಗಬೇಕಿತ್ತು. ಆದರೆ, ಕೊನೆಗಳಿಗೆಯಲ್ಲಿ ಅದನ್ನು ಬದಲಾಯಿಸಲಾಯಿತು. ಹುಯಿಲಗೋಳ ನಾರಾಯಣರಾವ್‌ರ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರ ಹೆಸರಿನಲ್ಲಿ 1 ಲಕ್ಷ ರೂ. ದತ್ತಿ ಇಡಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಶರಣು ಗೋಗೇರಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹುಯಿಲಗೋಳ ನಾರಾಯಣರಾವ್ ಭಾವಚಿತ್ರವನ್ನು ಅನಾವರಣ ಗೊಳಸಿ, ಉದಯವಾಗಲಿ ಚೆಲುವು ಕನ್ನಡನಾಡು ಗೀತೆಯ ಮೊದಲ ನಾಲ್ಕು ಸಾಲುಗಳನ್ನು ಬರೆಯಿಸಲಾಗಿದೆ. ಪರಿಷತ್ತಿನ ವತಿಯಿಂದ ಪ್ರತಿ ವರ್ಷ ಹುಯಿಲಗೋಳ ನಾರಾಯಣರಾವ್ ಹೆಸರಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉಪನ್ಯಾಸ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಆಯುಕ್ತ ಮನ್ಸೂರಅಲಿ, ನಗರಾಭಿವೃದ್ಧಿ ಪ್ರಾ ಧಿಕಾರದ ಮಾಜಿ ಅಧ್ಯಕ್ಷ ಎಚ್.ವೈ. ದೇಸಾಯಿಗೌಡರ, ಹುಯುಲಗೋಳ ನಾರಾಯಣರಾವ್ ಅಭಿಮಾನಿ ಬಳಗದ ಅಧ್ಯಕ್ಷ ಮುತ್ತಣ್ಣ ಭರಡಿ, ಜಿ.ಎಸ್.ಹಿರೇಮಠ, ಶ್ರೀರಾಮ ಸೇನಾ ಮುಖ್ಯಸ್ಥ ರಾಜು ಖಾನಪ್ಪನವರ, ಭಗತ್ ಸಿಂಗ್ ಅಭಿಮಾನಿ ಬಳಗ ಅಧ್ಯಕ್ಷ ಸಲಾಮು ಮುಳಗುಂದ, ನಂದಕುಮಾರ ಚವ್ಹಾಣ, ವಿ.ಪಿ. ಪಾಟೀಲ, ವಿನಯ ಹುಯಲಗೋಳ ಉಪಸ್ಥಿತರಿದ್ದರು.