ಕಲಬುರಗಿ: ಕಾಂಗ್ರೆಸ್ ಪಕ್ಷದ ಹೀನಾಯ ಸೋಲು ಹಾಗೂ ತಮ್ಮ ಸೋಲನ್ನು ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಲಿನ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡೂರು ದಿನದೊಳಗೆ ನವದೆಹಲಿಯಲ್ಲಿ ಸಭೆ ಸೇರಿ ಪರಾಮರ್ಶಿ ಸಲಾಗುವುದು. ಜನರ ತೀರ್ಪನ್ನು ಸ್ವಾಗತಿಸಲಾಗುವುದು. ಒಟ್ಟಾರೆ ಸೋಲು ಆಘಾತ ತಂದಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಹಜ. ನನ್ನ ಸೈದ್ಧಾಂತಿಕ ಹೋರಾಟಕ್ಕೆ ಜನತೆ ಮನ್ನಣೆ ಕೊಟ್ಟಿಲ್ಲ.
ಕಲಬುರಗಿಯ ಜನರು ನನಗೆ ಆಶೀರ್ವಾದ ಮಾಡಿಲ್ಲ. ನನ್ನ ವಿರುದ್ಧ ಜನ ಕೊಟ್ಟಿರುವ ತೀರ್ಪನ್ನು ಸ್ವೀಕಾರ ಮಾಡುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಹೊರಗಿನಿಂದ ಬಂದು ಪ್ರಚಾರ ಮಾಡಿದ ನಾಯಕರಿಗೆ ನಾನು ಕೃತಜ್ಞತೆ ತಿಳಿಸುತ್ತೇನೆ. ಅವರ ಶ್ರಮಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ನನಗೆ ನಂಬಿಕೆ ಇದೆ. ಜನ ಕೊಟ್ಟ ತೀರ್ಪಿಗೆ ತಲೆಬಾಗಬೇಕು. ಸೋಲಿನ ಕಾರಣ ಬಗ್ಗೆ ಸಮಾಲೋಚನೆ ಮಾಡಲಾಗುವುದು. ನಮ್ಮ ಲೋಪ-ದೋಷಗಳು, ತಪ್ಪು ತಿಳಿವಳಿಕೆಯಿಂದ ನಮ್ಮಿಂದ ದೂರ ಹೋದವರಿಗೆ ಮನವರಿಕೆ ಮಾಡಿ ಪಕ್ಷಕ್ಕೆ ಕರೆ ತರುತ್ತೇವೆ. ಸೋಲಿನ ಬಗ್ಗೆ ಕಾರ್ಯಕರ್ತರು ಧೃತಿಗೇಡುವುದು ಬೇಡ. ಮುಂದೆ ಕೂಡ ಹೋರಾಟ ಮಾಡಿ ಪಕ್ಷವನ್ನು ಗಟ್ಟಿಗೊಳಿಸೋಣ ಎಂದರು .