Advertisement

ಸೋಲಿಗೆ ಮೈತ್ರಿ ಸಮನ್ವಯ ಕೊರತೆ ಕಾರಣ

03:01 PM May 25, 2019 | pallavi |

ಕೊಪ್ಪಳ: ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸಮ್ವಯತೆಯಿಂದ ಕೆಲಸ ಮಾಡಿದ್ದರೆ ನಮಗೆ ಸೋಲಾಗುತ್ತಿರಲಿಲ್ಲ. ಆದರೂ ಜನರ ತೀರ್ಪಿಗೆ ತಲೆ ಬಾಗಲೇ ಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಲ್ಲೆಡೆಯೂ ಮೋದಿಯ ಅಲೆ ಹೆಚ್ಚಾಗಿದ್ದರಿಂದ ನಮಗೆ ಸೋಲಾಗಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು, ಮತದಾರರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ, ನಾವು ದೊಡ್ಡ ಮೊತ್ತದ ಅಂತರದಿಂದ ಸೋತಿಲ್ಲ. 38 ಸಾವಿರ ಮತಗಳ ಅಂತರದಿಂದ ಸೋತಿದ್ದು, ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸರಿಯಾಗಿ ಸಮನ್ವಯದಿಂದ ಕೆಲಸ ಮಾಡಿದ್ದರೆ ಸೋಲಾಗುತ್ತಿರಲಿಲ್ಲ ಎಂದರು.

ಹಿಟ್ನಾಳ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಮಾತಿದೆ. ಇಂದು ಏಲ್ಲಿ ಕುಟುಂಬ ರಾಜಕಾರಣವಿಲ್ಲ ಹೇಳಿ? ಕ್ಷೇತ್ರದಲ್ಲಿ ಒಂದೂ ಅಭಿವೃದ್ಧಿ ಕೆಲಸ ಮಾಡದವರನ್ನು ಮತದಾರ ಗೆಲ್ಲಿಸಿದ್ದಾರೆ. ಗೋಡ್ಸೆ ದೇಶಭಕ್ತ ಎಂದವರನ್ನು, ಸಂವಿಧಾನ ಬದಲಾಯಿಸುತ್ತೇವೆ ಎಂದವರನ್ನು ಮತದಾರ ಗೆಲ್ಲಿಸಿದ್ದಾರೆ. ಇದನ್ನು ಹೇಗೆ ಹೇಳಬೇಕೋ ನನಗೂ ಅರ್ಥವಾಗುತ್ತಿಲ್ಲ. ಸಂವಿಧಾನ ಬದಲಿಸಬೇಕು. ಅಂಬೇಡ್ಕರ್‌ ಮೂರ್ತಿ ಕೆಡುವಬೇಕು ಎನ್ನುವ ವ್ಯಕ್ತಿಗಳು ಲಕ್ಷ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ನಾವು ಬಿಜೆಪಿ ತರ ಸುಳ್ಳು ಹೇಳುವುದನ್ನು ಕಲಿಯಬೇಕೋ ಅಥವಾ ಸತ್ಯವನ್ನೇ ಹೇಳಬೇಕೋ ಅರ್ಥವಾಗುತ್ತಿಲ್ಲ ಎಂದರು.

ಪರಾಜಿತ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ ಮಾತನಾಡಿ, ನಾವು ದೇಶಾದ್ಯಂತ ಇದ್ದ ಬಿಜೆಪಿ ಬಿರುಗಾಳಿಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಕಾಂಗ್ರೆಸ್‌, ಜೆಡಿಎಸ್‌ನ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ. 2ನೇ ಅವಧಿಗೆ ಸಂಸದರಾಗಿ ಆಯ್ಕೆಯಾದ ಸಂಗಣ್ಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಸೋಲಿಗೆ ನಾನಾ ಕಾರಣಗಳಿರಬಹುದು. ನಾನೂ ಸಾಕಷ್ಟು ಶ್ರಮವಹಿಸಿದ್ದೇನೆ. ನಮ್ಮ ಮತಗಳೆಲ್ಲ ನಮಗೆ ಬಂದಿವೆ. ಆದರೆ, ಕೆಲ ಮತಗಳು ಮಾತ್ರ ಬಿಜೆಪಿ ಕಡೆ ವಾಲಿವೆ. ಕೊಪ್ಪಳ ಕ್ಷೇತ್ರದ ಜನರೂ ಕೈ ಹಿಡಿದಿದ್ದು, ರಾಜ್ಯ, ಕೇಂದ್ರ ರಾಜಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾನ ಮಾಡಿದ್ದಾರೆ. ನಮ್ಮೆಲ್ಲ ನಾಯಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕೆ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next