Advertisement

ದಂಡ ಇಳಿಸುವ ಆದೇಶ ಇನ್ನೂ ಬಂದಿಲ್ಲ

01:04 AM Sep 15, 2019 | Lakshmi GovindaRaju |

ಬೆಂಗಳೂರು: ಸಂಚಾರ ನಿಯಮ ಕುರಿತು ಹೆಚ್ಚಳವಾಗಿರುವ ಪರಿಷ್ಕೃತ ದಂಡ ಕಡಿಮೆ ಮಾಡುವ ಕುರಿತು ಸರ್ಕಾರದಿಂದ ಯಾವುದೇ ಅಧಿಸೂಚನೆ ಬಂದಿಲ್ಲ. ಅದುವರೆಗೂ ಸೆ.3ರಂದು ಜಾರಿಗೆ ಬಂದಿರುವ ಪರಿಷ್ಕೃತ ದಂಡದ ಮೊತ್ತವನ್ನೇ ಸಂಗ್ರಹ ಮಾಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಅನ್ವಯ ಸೆ.3ರಂದು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ದಂಡದ ಅಧಿಸೂಚನೆ ಅನ್ವಯ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಂದು ವೇಳೆ ಸರ್ಕಾರ ಈ ಬಗ್ಗೆ ಹೊಸ ಆದೇಶ ಹೊರಡಿಸಿದರೆ ಅದನ್ನೇ ಪಾಲನೆ ಮಾಡುತ್ತೇವೆ. ಇತರೆ ಯಾವುದೇ ಚರ್ಚೆ ಅಥವಾ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಆದರೆ, ವಾಹನ ಸವಾರರ ಜತೆ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಅದನ್ನು ನಮ್ಮ ಸಿಬ್ಬಂದಿಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ಆವರಣ ಸ್ವಚ್ಛ: ಈಗಾಗಲೇ ನಗರದ ಪೊಲೀಸ್‌ ಠಾಣೆಗಳಿಗೆ ದಿಢೀರ್‌ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪ್ರಶ್ನಿಸುತ್ತಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಶನಿವಾರ ಸಿಬ್ಬಂದಿ ಜತೆ ಸೇರಿ ತಮ್ಮ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದರು.

ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ನಗರದಲ್ಲಿ ಪ್ರತಿಭಟನೆ, ಮೆರವಣಿಗೆಯಿಂದಾಗಿ ಸಂಚಾರಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಸಭೆ ಮತ್ತು ಮೆರವಣಿಗೆ ಅನುಮತಿ ಹಾಗೂ ನಿಯಂತ್ರಣ ಆದೇಶ ಕಟ್ಟುನಿಟ್ಟಾಗಿ ಪಾಲನೆಗೆ ನಗರ ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದಾರೆ. ಸಭೆ ಮತ್ತು ಮೆರವಣಿಗೆಯನ್ನು ಆಯೋಜಿಸುವ ಸಂಘಟನಾಕಾರರು ಅಥವಾ ಕಾರ್ಯಕ್ರಮವನ್ನು ಆಯೋಜಿಸುವ ಪೂರ್ವದಲ್ಲಿ ಮತ್ತು ಕಾರ್ಯಕ್ರಮ ಜರಗುವ ವೇಳೆ ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

Advertisement

ರಸ್ತೇಲಿ ಶಾಲೆ ವಾಹನ ನಿಲ್ಲಿಸಿದರೆ ಕ್ರಮ: ಖಾಸಗಿ ಶಾಲೆ ವಾಹನಗಳನ್ನು ತಮ್ಮ ಆವರಣದಲ್ಲೇ ನಿಲ್ಲಿಸಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಆದರೆ, ಅದನ್ನು ವಿರೋಧಿಸಿ ಕೆಲವರು ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದು ಹೇಗೆ ಹೋರಾಟ ಮಾಡುತ್ತಾರೆ ಎಂದು ಪ್ರಶ್ನಿಸಿದ ನಗರ ಪೊಲೀಸ್‌ ಆಯುಕ್ತರು, “ರಸ್ತೆ ಶಾಲೆಯ ಜಾಗವಲ್ಲ, ಅದು ಸಾರ್ವಜನಿಕ ಸ್ಥಳ. ಕೆಲ ಹೈಫೈ ಶಾಲೆಗಳ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರ ಐಷಾರಾಮಿ ಕಾರುಗಳು ರಸ್ತೆ ಬದಿಯೇ ನಿಂತಿರುತ್ತವೆ. ಈ ಬಗ್ಗೆ ಎಲ್ಲ ಶಾಲೆ ಆಡಳಿತ ಮಂಡಳಿಗೂ ಮೌಖೀಕವಾಗಿ ಸೂಚನೆ ನೀಡಲಾಗಿದ್ದು, ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಆಯುಕ್ತ ಭಾಸ್ಕರ್‌ ರಾವ್‌ ಎಚ್ಚರಿಕೆ ನೀಡಿದರು.

ಒಂದೇ ದಿನ 38 ಲಕ್ಷ ರೂ. ಸಂಗ್ರಹ: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರಿಗೆ ಸಂಚಾರ ಪೊಲೀಸರ ಬಿಸಿ ತುಸು ಜೋರಾಗಿಯೇ ತಾಗುತ್ತಿದೆ. ನಿಯಮ ಉಲ್ಲಂಘನೆ ಸಂಬಂಧ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಶನಿವಾರ ಬೆಳಗ್ಗೆ 10 ಗಂಟೆವರೆಗೆ ನಗರದಲ್ಲಿ 10,974 ಪ್ರಕರಣ ದಾಖಲಿಸಿಕೊಂಡು, ಬರೋಬ್ಬರಿ 38,12,200 ರೂ. ಸಂಗ್ರಹ ಮಾಡಿದ್ದಾರೆ. ಈ ಮೂಲಕ ಕೇವಲ 11 ದಿನದಲ್ಲಿ ಎರಡೂವರೆ ಕೋಟಿಗೂ ಅಧಿಕ ದಂಡ ಸಂಗ್ರಹ ಮಾಡಿದ್ದಾರೆ. ಹೆಲ್ಮೆಟ್‌ ಧರಿಸದಿರುವುದು, ಸೀಟ್‌ ಬೆಲ್ಟ್ ಧರಿಸದಿರುವುದು, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ವಿವಿಧ 61 ಸಂಚಾರ ನಿಯಮ ಉಲ್ಲಂಘನೆಗಳ ಸೆಕ್ಷನ್‌ಗಳಡಿ ದಂಡ ವಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next