Advertisement

ಸೈಟ್‌ ಕೊಡಿಸುವುದಾಗಿ ವಂಚಿಸಿದ ಮೂವರ ಬಂಧನ

12:00 PM Nov 13, 2018 | Team Udayavani |

ಬೆಂಗಳೂರು: ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹೇಳಿ 6 ಲಕ್ಷ ರೂ. ವಂಚಿಸಿದ್ದ ಅಪ್ಪ-ಮಗ ಸೇರಿ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಂದೂರು ನಿವಾಸಿ ಷಣ್ಮುಗ (64), ಪುತ್ರ ದಿಲೀಪ್‌ (32), ಆಪ್ತ ನಾಗರಾಜ್‌ (44) ಬಂಧಿತರು. ಆರೋಪಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಬಸವನಗುಡಿ ನಿವಾಸಿ ಸತ್ಯನಾರಾಯಣ ಎಂಬುವವರಿಗೆ ನಿವೇಶನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.

Advertisement

ಕೆಲ ತಿಂಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಸತ್ಯನಾರಾಯಣ್‌ ಅವರನ್ನು ಆರೋಪಿ ಷಣ್ಮುಗ ಪರಿಚಯಿಸಿಕೊಂಡಿದ್ದು, ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿದ್ದ. ಇತ್ತೀಚೆಗೆ ಆರೋಪಿ ಷಣ್ಮುಗ ಸರ್ಜಾಪುರ ರಸ್ತೆಯಲ್ಲಿರುವ ಗೋಪಿ ಎಂಬುವರ ನಿವೇಶನ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ಸತ್ಯನಾರಾಯಣ್‌ಗೆ ಹೇಳಿದ್ದ. ಇದನ್ನು ನಂಬಿದ ಸತ್ಯನಾರಾಯಣ್‌ ಹಂತ-ಹಂತವಾಗಿ ಷಣ್ಮುಗ, ಇವರ ಮಗ ದಿಲೀಪ್‌ ಮತ್ತು ಆಪ್ತ ನಾಗರಾಜ್‌ಗೆ ಹಂತ-ಹಂತವಾಗಿ 6 ಲಕ್ಷ ರೂ. ಸಂದಾಯ ಮಾಡಿದ್ದಾರೆ.

ಹಣ ಪಡೆದು ಬಹಳ ದಿನಗಳಾದರೂ ಆರೋಪಿಗಳು ನಿವೇಶನ ಕೊಡಿಸುವ ಬಗ್ಗೆ ಮಾತನಾಡಿಲ್ಲ. ಅನುಮಾನಗೊಂಡ ಸತ್ಯನಾರಾಯಣ್‌ ಆರೋಪಿಗಳನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಆತಂಕಗೊಂಡ ಸತ್ಯನಾರಾಯಣ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next