Advertisement

ಕಳಸ ಭಾಗದಲ್ಲಿ ಮೂರು ಮಂಗಗಳ ಸಾವು

11:31 AM Feb 08, 2019 | Team Udayavani |

ಮೂಡಿಗೆರೆ: ಕಳೆದ ಎರಡು ದಿನಗಳಲ್ಲಿ ಕಳಸ ಪಟ್ಟಣದ ಹೃದಯ ಭಾಗದಲ್ಲಿ ಮೂರು ಮಂಗಗಳು ಮೃತಪಟ್ಟಿವೆ. ಬುಧವಾರ ಪಟ್ಟಣದ ಹೃದಯ ಭಾಗದಲ್ಲಿರುವ ಧನಲಕ್ಷ್ಮೀ ನಿಲಯದ ಹಿಂಭಾಗ ಅನಂತ ಕಾಮತ್‌ ಅವರ ತೋಟದಲ್ಲಿ ಎರಡು ಮಂಗಗಳು ಮೃತಪಟ್ಟಿದ್ದರೆ, ಗುರುವಾರ ಕಳಸ ದೇವಸ್ಥಾನ ಸಮೀಪ ಒಂದು ಮಂಗ ಸತ್ತಿದೆ.

Advertisement

ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ವೈದ್ಯರು ಮಂಗಗಳ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಿ ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಬಳಿಕ ಆ ಪ್ರದೇಶಕ್ಕೆ ಔಷಧ ಸಿಂಪಡಿಸಿ ಮಂಗಗಳ ಕಳೆಬರಹ ಸುಟ್ಟು ಹಾಕಲಾಗಿದೆ. ಮಂಗಗಳು ಯಾವ ಕಾರಣದಿಂದ ಮೃತಪಟ್ಟಿವೆ ಎಂಬ ಖಚಿತ ಮಾಹಿತಿ ಪ್ರಯೋಗಾಲಯದಿಂದ ವರದಿ ಬಂದ ಬಳಿಕವೇ ತಿಳಿಯಲಿದೆ.

ಮಂಗನ ಕಾಯಿಲೆ ಈಗಾಗಲೇ ಮಲೆನಾಡಿನಲ್ಲಿ ಹಲವರ ಜೀವ ಬಲಿ ಪಡೆದ ಬೆನ್ನಲ್ಲೇ ಪಟ್ಟಣದಲ್ಲಿ ಮಂಗಗಳು ಸತ್ತು ಹೋಗಿರುವುದರಿಂದ ಹೋಬಳಿಗೂ ಮಂಗನ ಕಾಯಿಲೆ ಕಾಲಿಟ್ಟಿರಬಹುದೇ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಮಂಗನಕಾಯಿಲೆ ಇದೀಗ ಕಳಸ ಹೋಬಳಿಗೂ ಕಾಲಿಟ್ಟಿರಬಹುದೆಂಬ ಆತಂಕ ಎದುರಾಗಿದೆ.

ಕಳಸ ಹೋಬಳಿ ಭಾಗದಲ್ಲಿ ಹಿಂಡುಗಟ್ಟಲೇ ಮಂಗಗಳಿದ್ದು, ಪ್ರತಿ ನಿತ್ಯ ಪಟ್ಟಣ, ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ. ಮೂರು ವರ್ಷಗಳ ಹಿಂದೊಮ್ಮೆ ಪಟ್ಟಣದಲ್ಲಿ ಮಂಗಗಳು ಭಾರೀ ತೊಂದರೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಂಗಗಳನ್ನು ಹಿಡಿದು ಕುದುರೆಮುಖ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಈಗ ಮತ್ತೆ ಮಂಗಗಳ ಉಟಪಳ ಆರಂಭವಾಗಿದೆ. ಆದರೆ, ಕಳೆದೆರೆಡು ದಿನಗಳಿಂದ ಮಂಗಗಳ ಸರಣಿ ಸಾವು ಸಂಭವಿಸುತ್ತಿದ್ದು, ಮಂಗಗಳು ವೈರಾಣುವಿನಿಂದ ಮೃತಪಟ್ಟಿವೆಯೇ ಅಥವಾ ಮಂಗಗಳ ಉಪಟಳಕ್ಕೆ ಯಾರಾದರೂ ವಿಷವಿಕ್ಕಿದ್ದಾರೆಯೇ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next