Advertisement

ತಾಳಿ ಕಟ್ಟುವ ಮೊದಲೇ ವರ ಸಾವು; ಮದುವೆ ಸಿದ್ಧವಾಗುವಾಗಲೇ ಹೃದಯಾಘಾತ

03:45 AM Feb 06, 2017 | Team Udayavani |

ತುಮಕೂರು: ನವಜೀವನದ ಕನಸು ಕಾಣುತ್ತಾ ಕೆಲವೇ ಕ್ಷಣಗಳಲ್ಲಿ ಹಸಮಣೆ ಏರಬೇಕಿದ್ದ ವರ ಹೃದಯಾಘಾತದಿಂದ ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ಇದರಿಂದ ಮದುವೆ ಮನೆ ಶೋಕ ಸಾಗರದಲ್ಲಿ ಮುಳುಗಿ ಮದುವೆ ಮಂಟಪದಲ್ಲಿ ಸ್ಮಶಾನ ಮೌನ ಆವರಿಸಿತ್ತು.

Advertisement

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ವಸಂತಕುಮಾರ್‌ (30) ಎಂಬಾತನೇ ಮೃತಪಟ್ಟ ದುರ್ದೈವಿ ವರ. ಈತನಿಗೆ ತುಮಕೂರು ತಾಲೂಕು ಹೆಗ್ಗರೆಯ ವಧುವಿನೊಂದಿಗೆ ಮದುವೆ ನಿಶ್ಚಯವಾಗಿತ್ತು. ವಧು ವರರಿಬ್ಬರು ಎಂ.ಟೆಕ್‌ ಪದವೀಧರರು. ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಆಗಿದ್ದೇನು?
ಮದುವೆ ಭಾನುವಾರ ನಿಗದಿಯಾಗಿತ್ತು. ಇದಕ್ಕಾಗಿ ನಗರದ ಹೊರವಲಯದಲ್ಲಿನ ಗವಿರಂಗ ಕಲ್ಯಾಣ ಮಂಟಪ ಕೂಡಾ ಭವ್ಯವಾಗಿಯೇ ಸಿಂಗಾರಗೊಂಡಿತ್ತು. ಶನಿವಾರ ರಾತ್ರಿ ಮದುಮಗ, ಮದುಮಗಳು ಸಂತೋಷವಾಗಿಯೇ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಗೆಳೆಯರು, ಬಂಧುಗಳೊಂದಿಗೆ ಇಡೀ ರಾತ್ರಿ ಸಂತಸ ಸಂಭ್ರಮದಿಂದ ಇಬ್ಬರೂ ಎಲ್ಲರೊಂದಿಗೆ ಫೋಟೋ ವೀಡಿಯೋ ತೆಗೆಸಿಕೊಂಡು ಹರ್ಷದಿಂದಲೇ ರಾತ್ರಿ ಕಳೆದರು.

ಬೆಳಗ್ಗೆ 10ಕ್ಕೆ ವಿವಾಹ ಮುಹೂರ್ತವಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ವರಪೂಜೆಯೂ ಸಡಗರದಿಂದಲೇ ನಡೆದಿತ್ತು. ಬೆಳಗ್ಗೆ 8.30ರ ಸುಮಾರಿಗೆ ವರ ಸ್ನಾನ ಮುಗಿಸಿಕೊಂಡು ಹೊರ ಬಂದ. ಇನ್ನೇನು ಮದುವೆಗಾಗಿ ಸಿದ್ಧಗೊಳ್ಳುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದ. ಇದರಿಂದ ಆತಂಕಕ್ಕೀಡಾದ ಸಂಬಂಧಿಕರು ಕೂಡಲೇ ಆತನನ್ನು ನಗರದ ಟಿ.ಎಚ್‌.ಎಸ್‌.ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸಂಭ್ರಮದಲ್ಲಿದ್ದ ಕಲ್ಯಾಣ ಮಂಟಪದಲ್ಲಿ ಸ್ಮಶಾನ ಮೌನ ಆವರಿಸಿತು.

ಮದುವೆ ಸಂಭ್ರಮಕ್ಕೆ ಬಂದಿದ್ದ ನೆಂಟರಿಷ್ಟರು, ಗೆಳೆಯರು ವರನ ಅಂತ್ಯಸಂಸ್ಕಾರಕ್ಕೆ ಆತನ ಶವದೊಂದಿಗೆ ಗೌರಿಬಿದನೂರಿಗೆ ತೆರಳುವಂತಾಯಿತು. ವಧು ಹಾಗೂ ವರನ ಕಡೆಯ ಕುಟುಂಬಸ್ಥರ ರೋಧನ ಸೇರಿದ್ದವರ ಮನಕಲುವಂತಿತ್ತು. ಸಂತಸದಿಂದ ಇದ್ದ ಮಧುವೆ ಮನೆ ಕೆಲ ಕ್ಷಣದಲ್ಲೇ ಮಸಣವಾದಂತಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next