Advertisement

ಕಲುಷಿತ ನೀರು ಕುಡಿದು ಬಾನಾಡಿಗಳ ಸಾವು

12:30 AM Mar 18, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೊರೊನಾ, ಕಾಲರಾ ಭೀತಿಯ ಜತೆಗೆ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಕಾಗೆ, ಕೊಕ್ಕರೆಗಳು ಅಸುನೀಗಿರುವುದು ಹಕ್ಕಿ ಜ್ವರದ ಆತಂಕಕ್ಕೆ ನಾಂದಿ ಹಾಡಿದೆ. ಮಹಾಲಕ್ಷ್ಮೀಪುರದ ಉದ್ಯಾನವನದ ಬಳಿ 8ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಅಲ್ಲದೆ, ಕಳೆದ 15 ದಿನಗಳಲ್ಲಿ ರಾಜರಾಜೇಶ್ವರಿ ನಗರ, ಗಿರಿನಗರ, ಉತ್ತರಹಳ್ಳಿ, ಬ್ಯಾಟರಾಯನಪುರ, ಮಾಡಿವಾಳ, ವಿದ್ಯಾರಣ್ಯಪುರ, ಸಜ್ಜಾಪುರ ಸೇರಿದಂತೆ ವಿವಿಧೆಡೆ 85ಕ್ಕೂ ಹೆಚ್ಚು ಹಕ್ಕಿ, ಪಕ್ಷಿಗಳು ಏಕಾಏಕಿ ಬಿದ್ದು ಸಾವಿಗೀಡಾಗಿವೆ.

Advertisement

ಮೃತ ಪಕ್ಷಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಆದರೆ, ಹಕ್ಕಿ-ಪಕ್ಷಿಗಳಲ್ಲಿ ಹಕ್ಕಿ ಜ್ವರದ ಸೋಂಕು ಇಲ್ಲ ಎಂದು ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ವರದಿ ನೀಡಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಸಂರಕ್ಷಕ ಪ್ರಸನ್ನ ಕುಮಾರ್‌ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮ: ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಸೋಂಕು ಬಗ್ಗೆ ವರದಿಯಾಗಿರುವುದರಿಂದ ಹಕ್ಕಿ-ಪಕ್ಷಿ ಸತ್ತ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಸದ್ಯ ನಗರದಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿಲ್ಲ. ಹೀಗಾಗಿ, ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಪ್ರಸನ್ನ ಕುಮಾರ್‌ ಹೇಳಿದರು.

ಕಲುಷಿತಗೊಂಡ ನೀರು ಕಾರಣ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಕ್ಕರೆ, ಕಾಗೆ ಹಾಗೂ ಹದ್ದು ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ಸಾವನ್ನಪ್ಪಿವೆ. ಮುಖ್ಯವಾಗಿ ನೀರಿನಲ್ಲೇ ಇರುವ ಹಾಗೂ ಹೆಚ್ಚು ನೀರು ಕುಡಿಯುವ ಪಕ್ಷಿಗಳು ಸಾವನ್ನಪ್ಪುತ್ತಿವೆ. ಬೇಸಿಗೆ ಸಮಯದಲ್ಲಿ ನೀರು ಕಲುಷಿತವಾಗಿರುವುದೇ ಇದಕ್ಕೆ ಕಾರಣ ಎಂದು ಪ್ರಸನ್ನ ಕುಮಾರ್‌ ಅಭಿಪ್ರಾಯಪಟ್ಟರು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುತ್ತದೆ.

ಆದರೆ, ಬೇಸಿಗೆಯಲ್ಲಿ ಕಲುಷಿತ ನೀರು ಒಂದೇ ಜಾಗದಲ್ಲಿ ನಿಲ್ಲುತ್ತಿದ್ದು, ಈ ಕಲುಷಿತ ನೀರನ್ನು ಸೇವಿಸುವ ಪಕ್ಷಿಗಳು ಸಾವನ್ನಪ್ಪುತ್ತಿವೆ. ಬೇಸಿಗೆ ಇರುವುದರಿಂದ ಹಕ್ಕಿ-ಪಕ್ಷಿಗಳಿಗೆ ಕುಡಿಯುವುದಕ್ಕೆ ಶುದ್ಧವಾದ ನೀರು ಸಿಗುತ್ತಿಲ್ಲ. ಇನ್ನು ನಗರದ ಎಲ್ಲ ಕೆರೆಗಳು ಕೊಳಚೆ ನೀರು ಹಾಗೂ ಕಾರ್ಖಾನೆಗಳ ವಿಷಕಾರಿ ರಾಸಾಯನಿ ತ್ಯಾಜ್ಯನೀರಿನಿಂದ ತುಂಬಿಕೊಂಡಿವೆ. ಈ ವಿಷಕಾರಿ ನೀರು ಸೇವೆನೆಯಿಂದ ಪಕ್ಷಿಗಳು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.

Advertisement

ನೀರಿನ ಕುಂಡದ ವ್ಯವಸ್ಥೆಗೆ ಮನವಿ: ಪಾಲಿಕೆ ಈಗಾಗಲೇ ಈಗಾಗಲೇ ಆಯ್ದಾ ಸ್ಥಳದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಕುಂಡಗಳ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರೂ ತಮ್ಮ ಮನೆಯ ಮಹಡಿಯ ಮೇಲೆ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿನ ವ್ಯವಸ್ಥೆ ಮಾಡಿದರೆ ಸಹಕಾರಿಯಾಗಲಿದೆ ಎಂದು ಪ್ರಸನ್ನ ಕುಮಾರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next