Advertisement
ಮಂಗಳವಾರ ವರದಪುರದ ಶ್ರೀಧರಾಶ್ರಮದ ಆವರಣದಲ್ಲಿ ಒಂದು ಮಂಗ ಸಾವನ್ನಪ್ಪಿದೆ. ಪ್ರತಿ ದಿನವೂ ಸಾವಿರಾರು ಜನ ದರ್ಶನಕ್ಕೆ ಬರುವ ಶ್ರೀಧರ ಸ್ವಾಮಿಗಳ ಸಮಾಧಿ ಸ್ಥಳದಲ್ಲಿಯೇ ಸೋಮವಾರ ಈ ಅಸ್ವಸ್ಥ ಸ್ಥಿತಿಯಲ್ಲಿದ್ದ ಮಂಗ ಕಾಣಿಸಿತ್ತು. ಆರೋಗ್ಯ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರಾದರೂ ಮಂಪರು ಸ್ಥಿತಿಯಲ್ಲಿದ್ದ ಮಂಗದ ಹತ್ತಿರ ಸುಳಿದಿರಲಿಲ್ಲ. ಮಂಗವನ್ನು ವಶಕ್ಕೆ ಪಡೆಯುವ ಮುನ್ನ ತೆಗೆದುಕೊಳ್ಳಬೇಕಾದ ಕೈ ಗ್ಲೌಸ್ ಮೊದಲಾದ ಪರಿಕರಗಳನ್ನು ಕೂಡ ಅವರು ಹೊಂದಿರಲಿಲ್ಲ. ಕಾನೂನುಗಳ ಅನ್ವಯ ನಾವು ಸಾಯದಿರುವ ಮಂಗಗಳನ್ನು ಏನೂ ಮಾಡಲಾಗುವುದಿಲ್ಲ ಎಂಬ ತಾಂತ್ರಿಕ ಅಂಶವನ್ನು ಹೇಳಿ ಅವರು ಜಾಗ ಖಾಲಿ ಮಾಡಿದ್ದಾರೆ.
Related Articles
Advertisement
ಕೆಎಫ್‌ಡಿಯಿಂದ ಸಾವನ್ನುಪ್ಪುತ್ತಿರುವ ಜನರ ಸಂಖ್ಯೆ ಕಳೆದ ಕೆಲ ದಿನಗಳಿಂದ ಹೆಚ್ಚಿಲ್ಲ. ಆದರೆ ಲಸಿಕೆ ಕಾರ್ಯಕ್ರಮ ನಡೆಯದ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳು ಸಾವನ್ನಪ್ಪುತ್ತಿರುವುದು ಮರಣ ಮೃದಂಗದ ಶಬ್ದ ಕಡಿಮೆಯಾಗಿಲ್ಲ ಎನ್ನುವಂತಾಗಿದೆ. ಮಂಗಳವಾರ ಹೆಗ್ಗೋಡು ಭಾಗದ ಅಮಟೆಕೊಪ್ಪದಲ್ಲಿ ಕೊಳೆತ ಸ್ಥಿತಿಯಲ್ಲಿ ಸತ್ತ ಮಂಗವೊಂದು ಪತ್ತೆಯಾಗಿದೆ. ಸೊಪ್ಪಿನಮಲೆಯಲ್ಲೂ ಒಂದು ಮಂಗ ಸತ್ತಿದೆ. ಕಾಗೋಡಿನಲ್ಲಿ ಇಬ್ಬರು ಒಂದೇ ದಿನ ಮೃತಪಟ್ಟಿದ್ದು, ಆ ಭಾಗದ ಜನಕ್ಕೆ ಇದು ಕೆಎಫ್‌ಡಿ ವೈರಸ್ ಕಾರಣವಿರಬಹುದೇ ಎಂಬ ಹಿನ್ನೆಲೆಯಲ್ಲಿ ಭಯ ಮೂಡುವಂತಾಗಿದೆ.
ಕೆಎಫ್‌ಡಿ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ ಡಿ. 24ರಿಂದ ಜ.21ರವರೆಗೆ ಲಭ್ಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 99 ಮಂಗಗಳು ಸಾವನ್ನಪ್ಪಿವೆ. ಅರಳಗೋಡಿನ 37 ಮಂಗ ಸೇರಿದಂತೆ ಸಾಗರ ಒಂದರಲ್ಲೇ 59 ಮಂಗಗಳ ಕಳೇಬರ ಪತ್ತೆಯಾಗಿದೆ. ಆದರೆ ಸತ್ತ ಎಲ್ಲ ಮಂಗಗಳ ಸಾವಿನ ಕಾರಣ ಕೆಎಫ್‌ಡಿ ಎನ್ನುವಂತಿಲ್ಲ. ಸಾಗರದಲ್ಲಿ ಒಟ್ಟು 9 ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪಾಸಿಟಿವ್ ಬಂದಿದೆ. ಈ ನಡುವೆ ಕೆಎಫ್‌ಡಿ ವಿಭಾಗದ ಅಂಕಿಅಂಶ ಸಂಪೂರ್ಣ ನಿಜ ಎನ್ನುವಂತಿಲ್ಲ. ಅವರದೇ ವರದಿ ಪ್ರಕಾರ ಜ. 21ರಂದು ಜಿಲ್ಲೆಯಲ್ಲಿ ಏಳು ಮಂಗಗಳು ಸಾವನ್ನಪ್ಪಿರುವ ಮಾಹಿತಿಯಿದೆ. ಡಿ. 11ರಿಂದ ರಾಜ್ಯದಲ್ಲಿ ಸಂಗ್ರಹಿಸಲಾಗಿರುವ ಮಂಗಗಳ ಸಾವಿನ ದಾಖಲೆ ಪ್ರಕಾರ ನೂರು ದಾಟಿದೆ. ಒಟ್ಟು 127 ಮಂಗ ಸಾವನ್ನಪ್ಪಿವೆ.
ಮೃತರು ಜ್ವರ ಬಾಧಿತರಲ್ಲ ಮಂಗಳವಾರ ಕಾಗೋಡು ಗ್ರಾಮದ ನಾರಾಯಣ (50) ಹಾಗೂ ಪಾರ್ವತಿ (35) ಮೃತಪಟ್ಟಿದ್ದಾರೆ. ಕೃಷಿ ಕೂಲಿ ಕಾರ್ಮಿಕರಾದ ಇವರಿಬ್ಬರೂ ಜ್ವರದಿಂದ ಭಾಧಿತರಾಗಿರಲಿಲ್ಲವಾದ್ದರಿಂದ ಕೆಎಫ್‌ಡಿ ಎಂದು ಪರಿಗಣಿಸಲಾಗದು ಎಂಬುದಾಗಿ ಟಿಎಚ್ಒ ಡಾ|ಮುನಿವೆಂಕಟರಾಜು ಪತ್ರಿಕೆಗೆ ತಿಳಿಸಿದ್ದಾರೆ. ಉಳಿದಂತೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುಪಾಲು ಜನರು ಚೇತರಿಸಿಕೊಳ್ಳುತ್ತಿದ್ದು, ಯಾರೂ ತುರ್ತುನಿಗಾ ಘಟಕದಲ್ಲಿ ಇಲ್ಲ. ಕೆಲವೇ ದಿನಗಳಲ್ಲಿ ಅವರೆಲ್ಲರೂ ಊರಿಗೆ ಮರಳಲಿದ್ದಾರೆ ಎಂದು ಅವರು ತಿಳಿಸಿದರು. ವೈದ್ಯರು ಬೇಕಾಗಿದ್ದಾರೆ!
ಕೆಎಫ್‌ಡಿ ಆತಂಕದ ಹಿನ್ನೆಲೆಯಲ್ಲಿ ಅರಳಗೋಡು ಪಿಎಚ್ಸಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರೂ ವೈದ್ಯರು ಅಲ್ಲಿಗೆ ಹೋಗಲು ಧೈರ್ಯ ಮಾಡುತ್ತಿಲ್ಲ ಎನ್ನಲಾಗಿದೆ. ಸತತವಾಗಿ ಡಾ| ನಿತಿನ್ ಪಾಟೀಲ್, ಡಾ| ಕಿರಣಕುಮಾರ ಹಾಗೂ ಟಿಎಚ್ಒ ಡಾ| ಮುನಿವೆಂಕಟರಾಜು ಮಾತ್ರ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಡಾ| ಕಿರಣಕುಮಾರ ಹಾಗೂ ಡಾ| ಮುನಿವೆಂಕಟರಾಜು ಅವರಿಗೆ ತೀರ್ಥಹಳ್ಳಿಯ ಮತ್ತು ಕಾಗೋಡಿನ ಆಸ್ಪತ್ರೆಗಳ ಜವಾಬ್ದಾರಿ ಸಹ ಇದ್ದು, ಅದನ್ನೂ ಅವರು ನಿಭಾಯಿಸಿಕೊಳ್ಳುತ್ತಿದ್ದಾರೆ. ಡಾ|ಮುನಿವೆಂಕಟರಾಜು ಅವರು ಕಾಗೋಡಿನಲ್ಲಿ ರೋಗಿಗಳನ್ನು ಪರಿಶೀಲಿಸಿ, ಸಾಗರದ ಟಿಎಚ್ಒ ಕರ್ತವ್ಯ ನಿಭಾಯಿಸಿ, ಅರಳಗೋಡಿಗೆ ರಾತ್ರಿ ಪಾಳಿ ಮಾಡಲು ಧಾವಿಸುತ್ತಿದ್ದಾರೆ. ಡಿಎಚ್ಒ, ಟಿಎಚ್ಒ ಕೇಳಿ; ಕೆಎಫ್‌ಡಿ ಡಾಕ್ಟರ್
ಅಸ್ವಸ್ಥ ಸ್ಥಿತಿಯಲ್ಲಿನ ಮಂಗಗಳನ್ನು ನಿರ್ವಹಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಮಂಗನ ಕಾಯಿಲೆ ಹಬ್ಬದಂತೆ ತಡೆಗಟ್ಟಬೇಕಾದ ಹಿನ್ನೆಲೆಯಲ್ಲಿ, ಈ ಕುರಿತು ಸರ್ಕಾರದ ಗಮನ ಸೆಳೆಯುವ ಸ್ಥಾನದಲ್ಲಿರುವ ಕ್ಯಾಸನೂರು ಅರಣ್ಯ ಕಾಯಿಲೆ ಪ್ರತಿಬಂಧಕ ವಿಭಾಗದ ಸಹಾಯಕ ನಿರ್ದೇಶಕ ಡಾ| ರವಿಕುಮಾರ್ ಅವರ ಪ್ರತಿಕ್ರಿಯೆಯನ್ನು ಕೇಳಲು ಪತ್ರಿಕೆ ಮಂಗಳವಾರ ದೂರವಾಣಿ ಮೂಲಕ ಸಂಪರ್ಕಿಸಿತ್ತು. ಯಾವುದೇ ಮಾಹಿತಿ ಬೇಕಿದ್ದರೆ ಡಿಎಚ್ಓ, ಟಿಎಚ್ಓ ಕೇಳಿ. ನನ್ನನ್ನು ಕೇಳಬೇಡಿ ಎಂದು ಹೇಳಿದ ಕೆಎಫ್‌ಡಿ ಡಿಡಿ ಡಾ| ರವಿಕುಮಾರ ದೂರವಾಣಿ ಕರೆ ಕಟ್ ಮಾಡಿದರು.