Advertisement

ಕೆರೆಯಲ್ಲಿ ಮುಳುಗಿ 3 ಮಕ್ಕಳ ಸಾವು

08:48 AM Feb 19, 2017 | |

ಬದಿಯಡ್ಕ: ಸ್ನಾನ ಮಾಡಲೆಂದು ಕೆರೆಗಿಳಿದ ಒಂದೇ ಕುಟುಂಬದ ಮೂವರು ಬಾಲಕಿಯರು ಮೃತಪಟ್ಟ ಘಟನೆ ಶನಿವಾರ ಅಪರಾಹ್ನ ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಅಡ್ಯನಡ್ಕ ಕೊಂಬರಬೆಟ್ಟಿನಲ್ಲಿ ಸಂಭವಿಸಿದೆ.

Advertisement

ಕೊಂಬರಬೆಟ್ಟು ನಿವಾಸಿ ಆಸ್ಮ-ಖಾಸಿಂ ದಂಪತಿಯ ಪುತ್ರಿ ಮುಮ್ತಾಝ್ (10), ಆಸ್ಮಾ ಅವರ ಸಹೋದರಿ ಝಹ್ರ – ಅಸೀಂ ದಂಪತಿ ಪುತ್ರಿಯರಾದ ಫಾತಿಮತ್‌ ಫಸಿಲ (11) ಮತ್ತು ಫಿದಾಅಮಿನ (7) ಅವರು ಮೃತಪಟ್ಟ ಮಕ್ಕಳು. ಮುಮ್ತಾಜ್‌ ಕಾಟುಕುಕ್ಕೆ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಫಾತಿಮತ್‌ ಫಸಿಲ ಮತ್ತು ಫಿದಾಅಮಿನ ಅಡ್ಯನಡ್ಕ ಜನತಾ ಶಾಲೆಯ 6ನೇ ಮತ್ತು 2ನೇ ತರಗತಿಯ ವಿದ್ಯಾರ್ಥಿನಿಯರು.

ಶನಿವಾರ ಅಪರಾಹ್ನ ಸುಮಾರು 3 ಗಂಟೆ ವೇಳೆಗೆ ಈ ದುರಂತ ಸಂಭವಿಸಿದೆ. ಮನೆಯ ಸಮೀಪದಲ್ಲೇ ಇರುವ ಕೆರೆಯಲ್ಲಿ ಸ್ನಾನ ಮಾಡಲೆಂದು ಈ ಮಕ್ಕಳು ಹೋಗಿದ್ದರು. ಮುಮ್ತಾಝ್ಳ ತಂಗಿ ಫಸ್ನಾ (7) ಕೂಡ ಸಹೋದರಿಯರೊಂದಿಗೆ ಸ್ನಾನಕ್ಕೆಂದು ಹೋಗಿ
ದ್ದಳು. ಮೂವರು ಸಹೋದರಿಯರು ನೀರಿನಲ್ಲಿ ಒದ್ದಾಡು ತ್ತಿರುವುದನ್ನು ಕಂಡ ಫಸ್ನಾ ಮನೆಗೋಡಿ ಬಂದು ಮಾಹಿತಿ ನೀಡಿದಳು. ತತ್‌ಕ್ಷಣ ಮನೆಯವರು ಮತ್ತು ಸ್ಥಳೀಯರು ಧಾವಿಸಿ ನೀರಿನಲ್ಲಿ ಮುಳುಗೇಳುತ್ತಿದ್ದ ಮೂವರು ಮಕ್ಕಳನ್ನು ಮೇಲಕ್ಕೆತ್ತಿದ್ದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಮಾಹಿತಿ ಪಡೆದ ಬದಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಶವ ಮಹಜರಿಗಾಗಿ ಮೃತದೇಹಗಳನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಕೊಂಡೊಯ್ದು ಶವಾಗಾರದಲ್ಲಿರಿಸಲಾಗಿದೆ.

ತೀರಾ ಬಡ ಕುಟುಂಬ
ಮಕ್ಕಳನ್ನು ಕಳೆದುಕೊಂಡಿರುವ ಎರಡೂ ಕುಟುಂಬಗಳು ತೀರಾ ಬಡತನದಿಂದ ಕೂಡಿದ್ದು, ಕೂಲಿ ಮಾಡಿ, ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಆಸ್ಮ-ಖಾಸಿಂ ದಂಪತಿಗೆ ಇಬ್ಬರು ಮಕ್ಕಳು.ಇಬ್ಬರೂ ಇಂದು ಕೆರೆಯತ್ತ ಹೋಗಿದ್ದರು. ಆದರೆ ಕಿರಿಯಾಕೆ ಫ‌ಸ್ನಾ ಕೆರೆಯ ಬದಿಯ ಲ್ಲಿದ್ದು, ಇತರರು ಮುಳುಗವುದನ್ನು ಕಂಡು ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಳು.  ಝಹ್ರ-ಅಸೀಂ ದಂಪತಿಗೆ ಮೂವರು ಮಕ್ಕಳಿದ್ದು, ಒಂದು ಮಗು ಮನೆಯಲ್ಲಿಯೇ ಇತ್ತು. ಇತರ ಇಬ್ಬರು ಕೆರೆಗೆ ಸ್ನಾನ ಮಾಡಲು ಹೋಗಿದ್ದರು. ಮನೆಯ ಹತ್ತಿರಲ್ಲಿಯೇ ಇರುವ ಕೆರೆಗೆ ಈ ಮಕ್ಕಳು ಸಾಮಾನ್ಯವಾಗಿ ಸ್ನಾನಕ್ಕೆ ಹೋಗಿ ಬರುತ್ತಿದ್ದರು. ಇಂದೂ ಅದರಂತೆಯೇ ಹೋಗಿದ್ದರಿಂದ ಮನೆಯವರು ಅತ್ತ ಹೆಚ್ಚಿನ ಗಮನ ಹರಿಸಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next