ಹಾವೇರಿ: “ಎಂಟು ತಿಂಗಳ ಹಿಂದೆ ರಾಣಿಬೆನ್ನೂರು ತಾಲೂಕು ಮಾಗೋಡದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸಂಭವಿಸಿದ್ದು ಅಗ್ನಿ ದುರಂತವಲ್ಲ; ಡೀಸೆಲ್ ಮಾಫಿಯಾದ ಕುಕೃತ್ಯವೂ ಅಲ್ಲ. ಅದೊಂದು ವ್ಯವಸ್ಥಿತ ಕೊಲೆ ಪ್ರಕರಣ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಕೆ. ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಜ. 1ರಂದು ಬೆಂಕಿಗಾಹುತಿಯಾದ ಬಸ್
ನಲ್ಲಿ ಸಿಕ್ಕ ಕರಕಲಾದ ಶವ ಚನ್ನಪ್ಪ ಬೆಳಗುತ್ತಿ (40) ಎಂಬಾತನದು. ಈವರೆಗೆ ಸತ್ತಿದ್ದಾನೆಂದು ಭಾವಿಸಲಾಗಿದ್ದ ಲಿಂಗರಾಜ ಬೆಳಗುತ್ತಿ ತನ್ನ ಚಿಕ್ಕಪ್ಪನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಲಿಂಗರಾಜನ ದಾಯಾದಿ ಚಿಕ್ಕಪ್ಪನಾಗಿರುವ ಚನ್ನಪ್ಪ ಬಸವೆಣ್ಣೆಪ್ಪ ಬೆಳಗುತ್ತಿಯು ಲಿಂಗರಾಜನ ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಜತೆಗೆ, ಲಿಂಗರಾಜನ ಪತ್ನಿಯೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಆಕ್ರೋಶಗೊಂಡ ಲಿಂಗರಾಜ ಡಿ. 31ರಂದು ಹರಿಹರದಲ್ಲಿ ಚನ್ನಪ್ಪನಿಗೆ ಮದ್ಯಪಾನ ಮಾಡಿಸಿ, ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗೆ ರಾತ್ರಿ ಕರೆ ತಂದಿದ್ದಾನೆ. ಅಲ್ಲಿ ಆತನ ಮೇಲೆ ಹಲ್ಲೆ ಮಾಡಿ ಕೊಲೆಗೈದು, ಬಸ್‌ನಲ್ಲಿ ಹಾಕಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲಿಂದ ಆತ ಪರಾರಿಯಾಗಿ ಹುಬ್ಬಳ್ಳಿ, ಗೋವಾ, ಮುಂಬೈ ಮುಂತಾದೆಡೆ ತಲೆಮರೆಸಿಕೊಂಡಿದ್ದ. ಎಂಟು ತಿಂಗಳ ಬಳಿಕ ಆತನಿಗೆ ಪತ್ನಿ, ಮಗು ನೆನಪಾಗಿ ಪೊಲೀಸರ ಎದುರು ಶರಣಾಗಿದ್ದಾನೆ ಎಂದು ತಿಳಿಸಿದರು. ಲಿಂಗರಾಜನ ವಿರುದಟಛಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ತಾಯಿ, ಪತ್ನಿ ಸೇರಿ ಸಾಕ್ಷಿಯಾಗಬಹುದಾದವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಲಾಗುವುದು ಎಂದರು.