Advertisement

ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು…

12:20 AM Jun 25, 2022 | Team Udayavani |

ಕಾಂಗ್ರೆಸ್‌ ಸರಕಾರ 1975 ಜೂನ್‌ 25ರಂದು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿತು. ಅಂಥ ಘೋಷಣೆಯ ಹಿಂದೆ ಇದ್ದದ್ದು ಕಾಂಗ್ರೆಸ್‌ನ ಅಧಿಕಾರ ದಾಹ ಮತ್ತು ಸ್ವಾರ್ಥ.ತುರ್ತುಪರಿಸ್ಥಿತಿ ದೇಶದ ಸಂವಿಧಾನ, ಕಾನೂನು ವ್ಯವಸ್ಥೆಯನ್ನೇ ಒಮ್ಮೆ ಅಲುಗಾಡಿಸುವುದರ ಮೂಲಕ ರಾಜಕೀಯವಾಗಿ ಹೊಸ ಬೆಳವಣಿಗೆಗೆ ಕಾರಣವಾಯಿತು.

Advertisement

ಸ್ವತಂತ್ರ ಭಾರತದ ಶಕ್ತಿ ಸಂವಿಧಾನ. ಪ್ರಜಾಪ್ರಭುತ್ವ ಅತೀ ಗೌರವದಿಂದ ನೋಡುವುದು ನ್ಯಾಯಾಂಗ.
ಅಂಥ ನ್ಯಾಯಾಂಗದ ಘನತೆಗೆ ಧಕ್ಕೆ ತಂದ, ಸಂವಿಧಾನಕ್ಕೆ ಅಗೌರವ ತೋರಿದ ಭಾರತದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್‌. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರ 1975 ಜೂನ್‌ 25ರಂದು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿತು. ಅಂಥ ಘೋಷಣೆಯ ಹಿಂದೆ ಇದ್ದದ್ದು ಅವರ ಅಧಿಕಾರ ದಾಹ ಮತ್ತು ಸ್ವಾರ್ಥ. ಅಧಿಕಾರದ ಹಪಾಹಪಿಗಾಗಿ ದೇಶವನ್ನೇ ಬಲಿಕೊಟ್ಟರು, ವ್ಯವಸ್ಥೆಯನ್ನೇ ಬಲಹೀನಗೊಳಿಸಿದ ಕೆಟ್ಟ ಕೀರ್ತಿ ಅಂದಿನ ಪ್ರಧಾನಿಗೆೆ ಸಲ್ಲಬೇಕು.

1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ರಾಯ್‌ ಬರೇಲಿಯಿಂದ ಗೆದ್ದಿದ್ದರು. ಆ ಗೆಲುವು ಅಕ್ರಮ ಗೆಲುವಾಗಿತ್ತು. ಚುನಾವಣಾ ಪ್ರಚಾರಕ್ಕೆ ಸರಕಾರಿ ಅಧಿಕಾರಿ ಗಳನ್ನು ಏಜೆಂಟರಂತೆ ಬಳಸಲಾಯಿತು. ಈ ಬಗ್ಗೆ ಪ್ರತಿಸ್ಪರ್ಧಿ ರಾಜ್‌ ನಾರಾಯಣ್‌ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋದರು. ಆರೋಪಗಳು ಸಾಬೀತಾಗಿ ಇಂದಿರಾ ಅವರ ಗೆಲುವೇ ಅಸಿಂಧು ಎಂದು ಘೋಷಿಸಿ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಲಾಯಿತು. ಆದರೆ ಮೇಲ್ಮನವಿ ಕಾರಣ ತೀರ್ಪು ಜಾರಿಗೆ ತಡೆ ಕೋರಿ ಇಂದಿರಾ ಪರ ವಕೀಲರಾದ ನಾನಾಭಾಯ್‌ ಫಾಲ್ಕಿವಾಲಾ ಮನವಿ ಮಾಡಿದ್ದರು. ನ್ಯಾಯಾಲಯದಿಂದ ವಾಪಸ್‌ ಬಂದ ಇಂದಿರಾ ತುರ್ತು ಪರಿಸ್ಥಿತಿ ಘೋಷಿಸಿಯೇ ಬಿಟ್ಟರು. ಮೇಲ್ಮನವಿಗೆ ಹೋಗುವುದಾಗಿ ನ್ಯಾಯಾಲಯಕ್ಕೆ ಅಗೌರವ ತೋರಿದ್ದೂ ಅಲ್ಲದೆ ತನ್ನ ಪರ ವಾದ ಮಾಡಿದ ವಕೀಲರನ್ನೂ ಏಕಕಾಲದಲ್ಲಿ ಅವರು ವಂಚಿಸಿದರು. ಹಾಗಾಗಿ ಮರುದಿನವೇ ಇಂದಿರಾ ಗಾಂಧಿಯವರ ಪರ ವಕೀಲನ ಸ್ಥಾನದಿಂದ ಫಾಲ್ಕಿವಾಲಾ ಹೊರನಡೆದರು.

ಭಾರತದ ಮಾಧ್ಯಮ ವಲಯ ಈಗಂತೂ ಸ್ವತಂತ್ರ ಮತ್ತು ಅತೀ ಶಕ್ತಿಯುತ. ಆದರೆ ಆವತ್ತಿಗೆ ಪ್ರಕಟವಾಗುವ
ಪ್ರತಿ ಸುದ್ದಿಯ ಪ್ರತಿ ಸಾಲನ್ನೂ ಇಂದಿರಾ ಅವರ ಕಾಲಾಳುಗಳು ಓದಿ ಪ್ರಕಟನೆಗೆ ಅನುಮತಿ ಕೊಡಬೇಕಿತ್ತು. ದೇಶಪ್ರೇಮಿ ನಾಯಕರನ್ನು ರಾತೋರಾತ್ರಿ ಬಂಧಿಸಲಾ ಯಿತು. ಮೀಸಾ ಕಾಯ್ದೆ ಪೊಲೀಸರಿಗೆ ಅಂದಾದುಂಧಿ ನಡೆಸಲು ಅಧಿಕಾರ ಕೊಟ್ಟಿತು. ಎಲ್ಲಿ ಯಾರನ್ನು ಬೇಕಾದರೂ ಹೇಳದೇ ಕೇಳದೆ ಠಾಣೆಗೆ ಕೊಂಡೊಯ್ದು ವಾರಗಟ್ಟಲೆ ವಿಚಾರಣೆ ನಡೆಸುವ ಅಧಿಕಾರವನ್ನು ಇಂದಿರಾ ನೀಡಿದರು. ಇಡೀ ದೇಶದ ಪೊಲೀಸ್‌ ಪಡೆಯನ್ನು ಖಾಸಗಿ ಪಡೆ ಯನ್ನಾಗಿ ಬಳಸಿಕೊಂಡರು. ಪ್ರಮುಖ ನಾಯಕರನ್ನು ಜೈಲಿಗೆ ತಳ್ಳಲಾಯಿತು. ಸುಮಾರು ಒಂದೂವರೆ ಲಕ್ಷ ಜನರನ್ನು ಯಾವುದೇ ಸಾಂವಿಧಾನಿಕ ವಿಚಾರಣೆ ಇಲ್ಲದೆ ಬಂಧಿಸಿದ್ದು ಅಧಿಕೃತ ಲೆಕ್ಕ. ಆದರೆ ಊರೂರು, ಹಳ್ಳಿ ಹಳ್ಳಿಗಳಿಗೆ ನುಗ್ಗಿದ ಪೊಲೀಸರು ಪಡೆ ದೌರ್ಜನ್ಯದಿಂದ ನಡೆದುಕೊಂಡಿತು. ಮಾನವ ಹಕ್ಕು ಎಂಬ ಪದವೇ ಅರ್ಥ ಕಳೆದುಕೊಂಡ ಕಾಲ ಅದು.

ಇಂದಿರಾಗಿದ್ದ ಉದ್ದೇಶ ಸರಿಯಿರಲಿಲ್ಲ. ಅದರ ಈಡೇರಿಕೆಗೆ ಆಯ್ಕೆ ಮಾಡಿಕೊಂಡ ಮಾರ್ಗವೂ ಸರಿ ಇರಲಿಲ್ಲ. ಅವರ ಕಾರ್ಯಕ್ಕೆ ಕೈ ಜೋಡಿಸುವವರು ಹಾಗೂ ದೇಶ ಉಳಿಸಲು ಟೊಂಕ ಕಟ್ಟಿ ನಿಲ್ಲುವವರ ಲೆಕ್ಕಾಚಾರ ಅವರಿಗೆ ಕರಾರುವಕ್ಕಾಗಿತ್ತು. ದೇಶದ ಪ್ರಶ್ನೆ ಬಂದಾಗ ರಾಷ್ಟ್ರೀಯ ಸ್ವಯಂ ಸೇವಕ ತಂಡ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಆರ್‌ಎಸ್‌ಎಸ್‌ ಮೇಲೆ ಶುರುವಿಗೇ ನಿಷೇಧ ಹೇರಿದರು. ಆದರೆ ಅವರ ಒಂದು ಲೆಕ್ಕಾಚಾರ ತಪ್ಪಾಗಿತ್ತು. ಸ್ವಯಂ ಸೇವಕರು ಸ್ವಇಚ್ಛೆಯಿಂದ ದೇಶಕ್ಕಾಗಿ ಜೀವಿಸುವವರು ಎಂಬುದು ಅವರಿಗೆ ಗೊತ್ತಿರಲಿಲ್ಲ. ಸಂಘದ ಮೇಲೆ ಏನೇ ನಿಷೇಧ ಹೇರಿದರೂ ಸ್ವಯಂ ಸೇವಕರನ್ನು ತಡೆದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಪ್ರಮುಖವಾಗಿ ಒಂದು ವಿಚಾರವ ನ್ನಂತೂ ಉಲ್ಲೇಖಿಸಬೇಕು. ಆರ್‌ಎಸ್‌ಎಸ್‌ ಈ ದೇಶದಲ್ಲಿ ಇಲ್ಲದಿರುತ್ತಿದ್ದರೆ ಇಂದು ಈ ಭಾರತ ಸ್ವತಂತ್ರವಾಗಿ, ಪ್ರಜಾಪ್ರಭುತ್ವವಾಗಿ ಇರುತ್ತಿರಲಿಲ್ಲ. ದೊಡ್ಡ ಮಾಧ್ಯಮ ಸಂಸ್ಥೆಗಳೆಲ್ಲ ಮೊದಲಿಗೆ ತುರ್ತುಪರಿಸ್ಥಿತಿಯನ್ನು ವಿರೋಧಿ ಸಿದರೂ ಕ್ರಮೇಣ ನಿರ್ಬಂಧಗಳಿಗೆ ಒಗ್ಗಿಕೊಂಡವು. ಅಂಥ ಸಮಯದಲ್ಲಿ ಜನರಿಗೆ ನಿಜ ಸುದ್ದಿ ತಲುಪಿಸಿದ್ದು ಆರ್‌ಎಸ್‌ಎಸ್‌ ಬೆಂಬಲದಿಂದ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಕಹಳೆ, ಪುಂಗವದಂತಹ‌ ಮುದ್ರಿತ ಪತ್ರಿಕೆಗಳು ಮತ್ತು ಇನ್ನು ಕೆಲವು ಕೈ ಅಚ್ಚಿನ ಪತ್ರಿಕೆಗಳು ದೇಶದ ವಾಸ್ತವ ಸ್ಥಿತಿಗತಿ ವರದಿ ಮಾಡುವ ಮೂಲಕ ಜನಜಾಗೃತಿ ಮೂಡಿಸಲು ಸಹಾಯ ಮಾಡಿದವು.

Advertisement

ಇಂದಿರಾ ಅವರ ಪುತ್ರ ಸಂಜಯ್‌ ಗಾಂಧಿ ಆಗ ಮಾಡಿದ್ದ ಅವಾಂತರಗಳಿಗೆ ಮಿತಿಯೇ ಇರಲಿಲ್ಲ. ಸಂಜಯ್‌ ಗಾಂಧಿ ಅವರಿಗೆ ಯಾವುದೇ ಸರಕಾರಿ ಜವಾಬ್ದಾರಿ ಇರಲಿಲ್ಲ. ಆದರೆ ಸಂಜಯ್‌ ಯಾವಾಗ ಬೇಕಾದರೂ ಪೊಲೀಸ್‌ ಪಡೆ ಹಿಡಿದುಕೊಂಡು ಎಲ್ಲಿಗೆ ಬೇಕಾದರೂ ಹೋಗಿ ದಾಳಿ ನಡೆಸುತ್ತಿದ್ದರು. ಕಂಡ ಕಂಡವರನ್ನು ಹಿಡಿದು ಒತ್ತಾಯ ಪೂರ್ವಕವಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದರು ಎಂದು ಅಂದಿನ ವರದಿಗಳೇ ಹೇಳುತ್ತವೆ.
ಅಂತೂ 21 ತಿಂಗಳಿಗಿಂತ ಹೆಚ್ಚು ಕಾಲ ತುರ್ತು ಪರಿಸ್ಥಿತಿ ಮುಂದಕ್ಕೆ ಕೊಂಡೊಯ್ಯಲು ಇಂದಿರಾಗೆ ಸಾಧ್ಯವಾಗಲಿಲ್ಲ. ಅಲ್ಲದೆ ಸತ್ಯದ ಬದಲು ಇಂದಿರಾ ಬಯಸಿದ್ದನ್ನೇ ಹೇಳಿ ಭೇಷ್‌ ಅನಿಸಿಕೊಳ್ಳಲು ಸರದಿಯಲ್ಲಿ ನಿಂತ “ಜೀ ಹುಜೂರ್‌’ ಅಧಿಕಾರಿ ವರ್ಗದ ಲೆಕ್ಕಾಚಾರ ತಪ್ಪಾಗಿತ್ತು.

ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ “ಇಂದಿರಾ ಈಸ್‌ ಇಂಡಿಯಾ, ಇಂಡಿಯಾ ಈಸ್‌ ಇಂದಿರಾ’ ಎಂದು ಹೇಳುವ ಮೂಲಕ ಓಲೈಕೆ ರಾಜಕಾರಣದ ಪರಾಕಾಷ್ಠೆ ಪ್ರದರ್ಶಿಸಿದರು. ಜನರೆಲ್ಲ ತುರ್ತುಪರಿಸ್ಥಿತಿ ಮೆಚ್ಚಿದ್ದಾರೆ, ಚುನಾವಣೆ ನಡೆದರೆ ನೀವೇ ಗೆಲ್ಲುತ್ತೀರಿ ಎಂಬುದನ್ನು ಕೇಳಿ ಉಬ್ಬಿದ ಇಂದಿರಾಗಾಂಧಿ ಚುನಾವಣೆಗೆ ಮುಂದಾದರು.

ತುರ್ತು ಪರಿಸ್ಥಿತಿ ದೇಶದ ಸಂವಿಧಾನ, ಕಾನೂನು ವ್ಯವಸ್ಥೆಯನ್ನೇ ಒಮ್ಮೆ ಅಲುಗಾಡಿಸುವುದರ ಮೂಲಕ ರಾಜಕೀಯವಾಗಿ ಹೊಸ ಬೆಳವಣಿಗೆಗೆ ಕಾರಣವಾಯಿತು. ಜಯಪ್ರಕಾಶ್‌ ನಾರಾಯಣ್‌ ಅವರ ಮುಂದಾಳತ್ವದಲ್ಲಿ ಬಿಹಾರದಿಂದ ಆರಂಭವಾದ ಜೆಪಿ ಚಳವಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸೇರಿದಂತೆ ಹಲವು ಸಂಘಟನೆಗಳ ಬೆಂಬಲ ಸಿಕ್ಕಿ ಅದು ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿತು. ವಿದ್ಯಾರ್ಥಿ ಹೋರಾಟಗಾರರು ತುರ್ತು
ಪರಿಸ್ಥಿತಿ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ತಿರುಗಿಬಿದ್ದರು.

ಇನ್ನೊಂದೆಡೆ ಜಾರ್ಜ್‌ ಫೆರ್ನಾಂಡಿಸ್‌ರಂಥ ಮಹಾನ್‌ ನಾಯಕರು ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದರು. ಒಟ್ಟಾರೆಯಾಗಿ ನಡೆದ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್‌ ಎದುರು ಪ್ರಬಲ ಶಕ್ತಿಯಾಗಿ ಜನತಾ ಪರಿವಾರ ಮೂಡಿ ಬಂತು. ದುರದೃಷ್ಟ ಅಂದರೆ ಕುಟುಂಬ ರಾಜ ಕಾರಣವನ್ನು ವಿರೋಧಿಸಿ, ಏಕ ಚಕ್ರಾಧಿಪತ್ಯದ ವಿರುದ್ಧ ನಿಂತಿದ್ದ ಜನತಾ ಪರಿವಾರ ಕಾಲಕ್ರಮೇಣ ವಿವಿಧ ತುಂಡು ಗಳಾದವು.

ಆ ಪೈಕಿ ಹೆಚ್ಚಿನೆಲ್ಲ ಪಕ್ಷಗಳೂ ಇಂದು ಕುಟುಂಬದ ಪಕ್ಷಗಳಾಗಿರುವುದು ಪ್ರಜಾಪ್ರಭುತ್ವದ ದುರಂತ. ಆಂತರಿಕ ಪ್ರಜಾಪ್ರಭುತ್ವ, ತಳಮಟ್ಟದಿಂದ ಬೆಳೆದು ಬಂದ ನಾಯಕರು, ಜನ ಸಂಪರ್ಕದ ಅನುಭವಿ ಕಾರ್ಯ ಕರ್ತರು ಇರುವ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಮಾತ್ರ ನಿಂತಿದೆ.

21 ತಿಂಗಳ ಕಾಲದ ತುರ್ತುಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಅಧಿಕಾರದ ಮದ, ಹಣದ ಬಲದ ಎದುರು ಅಂತಿಮವಾಗಿ ಗೆಲ್ಲುವುದು ಜನಾಭಿಪ್ರಾ ಯವೇ ಎಂಬುದನ್ನು ಅದು ಸಾಬೀತು ಪಡಿಸಿತು. ಪ್ರಬಲ ನಾಯಕತ್ವ ಕುರುಡು ಅಭಿಮಾನವಾಗಿ ಪರಿವರ್ತನೆ ಆದಾಗ ಏನೆಲ್ಲ ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ಇಂದಿರಾ ಗಾಂಧಿ ಐತಿಹಾಸಿಕ ಸಾಕ್ಷಿ, ಕಾಂಗ್ರೆಸ್‌ ಪಕ್ಷ ಜೀವಂತ ಉದಾ ಹರಣೆ. ದೇಶಾಭಿಮಾನಿ ನಾಯಕತ್ವ, ದೇಶಕ್ಕಾಗಿ ಸ್ವಾರ್ಥ ಬಿಟ್ಟು ನಿರ್ಧಾರ ಕೈಗೊಳ್ಳಲು ಸಮರ್ಥವಾಗಿದ್ದಾಗ ದೇಶ ಹೇಗೆ ಪ್ರಗತಿಯತ್ತ ಸಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಬಿಜೆಪಿ ನಿಂತಿದೆ. ಎರಡೂ ವೈರುಧ್ಯಗಳನ್ನು ಒಂದೇ ಕಾಲ ಘಟ್ಟದಲ್ಲಿ ನೋಡುವ ಅದೃಷ್ಟ ಈ ತಲೆಮಾರಿನದ್ದು.

-ಸಿ.ಟಿ.ರವಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next