ಭೋಪಾಲ:ಕೃತಕ ಹಾಲು ತಯಾರಿಸಿ ಅದನ್ನು ಆರು ರಾಜ್ಯಗಳಿಗೆ ವಿತರಿಸುವ ಮೂರು ಪ್ರತ್ಯೇಕ ಕರಾಳ ಜಾಲ ಮಧ್ಯ ಪ್ರದೇಶದಲ್ಲಿ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 57 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊರೇನಾ ಜಿಲ್ಲೆಯ ಅಂಬಾ, ಭಿಂಡ್ ಜಿಲ್ಲೆಯ ಲಾಹರ್‌ಗಳಲ್ಲಿ ಈ ಜಾಲ ಕಾರ್ಯಾಚರಣೆ ನಡೆಸುತ್ತಿತ್ತು. ವಿಶೇಷ ತನಿಖಾ ತಂಡದ ಹಿರಿಯ ಅಧಿಕಾರಿ ರಾಜೇಶ್ ಭದೋರಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿ, ಮಹಾರಾಷ್ಟ್ರಗಳಲ್ಲಿ ಮಾರಾಟ ವಾಗುವ ಜನಪ್ರಿಯ ಹಾಲು ಬ್ರಾಂಡ್‌ಗಳ ಜತೆಗೆ ಈ ವಿಷಕಾರಿ ಕೃತಕ ಹಾಲನ್ನು ಸೇರಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಶುಕ್ರವಾರ ಈ ಕಾರ್ಯಾಚರಣೆ ನಡೆಸಲಾಗಿದ್ದು, 10 ಸಾವಿರ ಲೀಟರ್ ಕೃತಕ ಹಾಲು, 500 ಕೆಜಿ ಖೋಯಾ, 200 ಕೆಜಿ ಕೃತಕ ಪನೀರ್, ಒಟ್ಟು 20 ಟ್ಯಾಂಕರ್‌ಗಳು, 11 ಪಿಕ್‌ಅಪ್ ವ್ಯಾನ್‌ಗಳಲ್ಲಿ ಇದ್ದ ಹಾಲು, ಬಟ್ಟೆ ತೊಳೆಯಲು ಉಪಯೋಗಿಸುವ ದ್ರವೀಕೃತ ಡಿಟರ್ಜೆಂಟ್, ಗ್ಲುಕೋಸ್ ಪೌಡರ್, ರಿಫೈನ್ಡ್ ಆಯಿಲ್ ಅನ್ನೂ ಮೂರು ಘಟಕಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂರೂ ಘಟಕಗಳಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದ ಪ್ರತಿ ಲೀಟರ್ ಹಾಲಿನಲ್ಲಿ ಶೇ.30ರಷ್ಟು ಪ್ರಮಾಣದಲ್ಲಿ ರಿಫೈನ್ಡ್ ಆಯಿಲ್, ಬಟ್ಟೆ ಒಗೆಯಲು ಉಪಯೋಗಿಸುವ ದ್ರವೀಕೃತ ಡಿಟರ್ಜೆಂಟ್, ಬಿಳಿ ಬಣ್ಣದ ಪೆಯಿಂಟ್ ಮತ್ತು ಗ್ಲುಕೋಸ್ ಇದ್ದದ್ದು ಪತ್ತೆಯಾಗಿದೆ. ಇದೇ ಮಾದರಿ ಉಪಯೋಗಿಸಿಕೊಂಡು ಮನೆಯಲ್ಲಿಯೇ ತುಪ್ಪ ತಯಾರಿಸಿ ಉತ್ತರ, ಕೇಂದ್ರ ಮತ್ತು ಪಶ್ಚಿಮ ಭಾರತದ ಮಾರುಕಟ್ಟೆಗಳಲ್ಲಿ ಮಾರಲಾಗುತ್ತಿತ್ತು ಎಂದಿದ್ದಾರೆ ರಾಜೇಶ್ ಭದೋರಿಯಾ.
ಕೇವಲ ಐದು ರೂ.: ಈ ವಿಷಕಾರಿ ಹಾಲನ್ನು ಕೇವಲ 5 ರೂ.ಗಳಿಗೆ ಸಿದ್ಧಪಡಿಸಲಾಗುತ್ತಿತ್ತು. ಅದನ್ನು ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್‌ಗೆ 45 ರೂ.ಗಳಿಂದ 50 ರೂ. ವರೆಗೆ ಮಾರಲಾಗುತ್ತಿತ್ತು. ಮನೆಯಲ್ಲಿಯೇ ತಯಾರಿಸಲಾಗುವ ತುಪ್ಪವನ್ನು ಪ್ರತಿ ಕೆಜಿಗೆ 100 ರೂ.ಗಳಿಂದ 150 ರೂ.ಗೆ ಮಾರಲಾಗುತ್ತಿತ್ತು ಎಂದು ಭದೋರಿಯಾ ಹೇಳಿದ್ದಾರೆ. ಮೂರು ಘಟಕಗಳಲ್ಲಿ 24 ಗಂಟೆಗಳ ಕಾಲ 2 ಲಕ್ಷ ಲೀಟರ್ ಹಾಲು ಸಿದ್ಧಪಡಿಸಲಾಗುತ್ತಿತ್ತು. ಈ ಜಾಲದಲ್ಲಿ ಆಹಾರ ಇಲಾಖೆಯ ಕೆಲ ಇನ್ಸ್ಪೆಕ್ಟರ್‌ಗಳೂ ಸೇರಿದ್ದಾರೆ ಎಂದು ಎಸ್‌ಟಿಎಫ್ ಕಂಡುಕೊಂಡಿದೆ ಎಂದು ಅವರು ಹೇಳಿದ್ದಾರೆ.