ಧಾರವಾಡ: ರಸ್ತೆಗಳಲ್ಲಿ ಅಪಘಾತ ಸಂಭವಿಸಿದಾಗ ಪ್ರತಿಯೊಬ್ಬರು ಸಂತ್ರಸ್ತರ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯುವ ಸಂಸ್ಕೃತಿ ಬೆಳೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ಡಾ|ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್‌ನಿಂದ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ|ನಾಗರಾಜ ಜಮಖಂಡಿ ಅವರ 2ನೇ ಪುಣ್ಯಸ್ಮರಣೆ ಮತ್ತು ಅಪಘಾತಗಳ ಬಗ್ಗೆ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ರೂಪಕ, ರಕ್ತದಾನ ಶಿಬಿರ ಹಾಗೂ ಮಹದಾಯಿ ಮುಂದೇನು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ರಸ್ತೆಗಳಲ್ಲಿ ವಾಹನಗಳೇ ಇರಲಿಲ್ಲ. ಆದರೆ ಇಂದು ಲಕ್ಷ ಲಕ್ಷ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಆದರೆ ಅದಕ್ಕೆ ತಕ್ಕಂತೆ ರಸ್ತೆಗಳ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಆದರೆ ದುರಂತ ಎಂದರೆ ಅಪಘಾತಗಳು ನಡೆದಾಗ ಅಪಘಾತಕ್ಕೀಡಾದವರಿಗೆ ನೆರವು ನೀಡಬೇಕು.
ಹೀಗೆ ನೆರವು ನೀಡಿದವರಿಗೆ ಪೊಲೀಸರು ಯಾವುದೇ ತೊಂದರೆ ನೀಡಬಾರದು ಎಂದು ಕಾನೂನು ರೂಪಿಸಲಾಗಿದೆ. ಅಪಘಾತಗಳಿಂದ ಹಲವು ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದರು. ಡಾ|ನಾಗರಾಜ ಜಮಖಂಡಿ ಅವರು ಸಾಧನೆ ಮಾಡುವಲ್ಲಿ ಧೈರ್ಯಶಾಲಿಯಾಗಿದ್ದರು.
ಇತರರನ್ನು ಪ್ರೋತ್ಸಾಹಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉತ್ತಮ ಸಾಧನೆ ಮಾಡಲು ಪ್ರಯತ್ನಿಸಿದ್ದ ಅವರು ಉತ್ತಮ ಗುರಿ-ಉದ್ದೇಶಗಳನ್ನು ಹೊಂದಿದ್ದರು ಎಂದರು. ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ಕೊಲೆ ಪ್ರಕರಣಗಳಿಗಿಂತ ಆಕಸ್ಮಿಕವಾಗಿ ಸಂಭವಿಸುವ ಅಪಘಾತಗಳ ಪ್ರಕರಣಗಳು ಹೆಚ್ಚು ದಾಖಲಾಗುತ್ತದೆ.
ರಸ್ತೆ ನಿಯಮಗಳನ್ನು ಪಾಲಿಸದಿರುವುದರಿಂದ ಅಪಘಾತಗಳು ಹೆಚ್ಚಾಗುತ್ತವೆ. ಅಪಘಾತ ಮಾಡಿ ಓಡಿ ಹೋದಾಗ ಸಂತ್ರಸ್ತರಿಗೆ ಪರಿಹಾರ ದೊರಕುವುದು ಕಷ್ಟ. ಅಂತಹವರು ಮಾನವೀಯತೆ ಅರಿಯಬೇಕು. ಚಾಲಕರ ಪರವಾನಗಿ ನೀಡಲು ಕಠಿಣ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆ.
ಈ ಬಗ್ಗೆ ವಿದೇಶಗಳಲ್ಲಿ ಇರುವಂತೆ ಕಠಿಣ ಕಾನೂನು ಜಾರಿಯಾಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ “ಅಪಘಾತಗಳ ಬಗ್ಗೆ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ರೂಪಕ ಪ್ರದರ್ಶನ ಮಾಡಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಡಾ|ಸುಜಾತಾ ಗಿರಿಯನ್, ಗಿರಿಜಾ ತಮಿನಾಳ, ಮಂಗಳಾ ಜಮಖಂಡಿ, ಇತರರು ಉಪಸ್ಥಿತರಿದ್ದರು.