Advertisement

Paris ಒಲಿಂಪಿಕ್ಸ್‌ನಲ್ಲಿ ಕನ್ನಡತಿಯ ಸಾಂಸ್ಕೃತಿಕ ಸೊಬಗು

01:36 AM Jul 20, 2024 | Team Udayavani |

ಬೆಂಗಳೂರು: ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬವಾದ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿದೆ. ಜಗತ್ತಿನ ಸಾವಿರಾರು ಕ್ರೀಡಾಪಟುಗಳು ಈ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ. ಕರ್ನಾಟಕದಿಂದ 9 ಮಂದಿ ಕ್ರೀಡಾಪಟುಗಳು ಕೂಡ ಇದರಲ್ಲಿರು
ವುದು ಒಂದು ಹೆಮ್ಮೆಯಾದರೆ, ಕನ್ನಡತಿಯೊಬ್ಬರ ನೇತೃತ್ವದಲ್ಲಿ ಪ್ಯಾರಿಸ್‌ನಲ್ಲಿ ಸಾಂಸ್ಕೃತಿಕ ಸೊಬಗು ತೆರೆದುಕೊಳ್ಳುತ್ತಿರುವುದು ಮತ್ತೊಂದು ಗರಿಮೆಯಾಗಿದೆ.

Advertisement

ದೂರದ ಫ್ರಾನ್ಸ್‌ ನಲ್ಲಿ 9 ವರ್ಷಗಳಿಂದ ಭಾರತದ ಸಂಸ್ಕೃತಿಯ ಘಮವನ್ನು ಹರಡುತ್ತಿರುವ ಭಾವನಾ ಪ್ರದ್ಯುಮ್ನ ಅವರ ಕನ್ಸರ್ವೇಟರಿ ಆಫ್ ಪ್ಯಾರಿಸ್‌ ಸಂಸ್ಥೆ ಈ ಬಾರಿ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ನಡೆಯುವ 24 ದಿನಗಳ ಕಾಲ ಭಾರತದ ಸಂಸ್ಕೃತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.

ಭಾರತದ ಕಲೆಗಳಿಗೆ ಪ್ರಾಶಸ್ತ್ಯ
ಒಲಿಂಪಿಕ್ಸ್‌ ವೇಳೆ ನಡೆಯುವ ಈ ಸಾಂಸ್ಕೃತಿಕ ಸೊಬಗಿನ ಕಾರ್ಯ ಕ್ರಮಗಳಲ್ಲಿ ಭಾರತದ ಕಲೆಗಳಿಗಷ್ಟೇ ಪ್ರಾಮುಖ್ಯ ನೀಡಲಾಗಿದೆ. ಶಾಸ್ತ್ರೀಯ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸ್ವತಃ ಭಾವನಾ ಅವರೇ ಜು. 27ರಂದು ಶಾಸ್ತ್ರೀಯ ಸಂಗೀತ ಕಚೇರಿ ನಡೆಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರತೀ ದಿನ ಬೆಳಗ್ಗೆ ಯೋಗ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಸಂಜೆ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭರತನಾಟ್ಯ, ಕೂಡಿಯಾಟ್ಟಂ, ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ರಂಗೋಲಿ, ಮೆಹಂದಿ ಕಾರ್ಯಾಗಾರ
ರಂಗೋಲಿ ಹಾಗೂ ಮೆಹಂದಿ ಕಲೆಗಳನ್ನು ಪರಿಚಯಿಸಲು ಕಾರ್ಯಾಗಾರಗಳನ್ನು ಕೂಡ ನಡೆಸಲಾಗುತ್ತದೆ. ಫ್ಯಾನ್‌ ಝೋನ್‌ಗಳಿಗೆ ಭೇಟಿ ನೀಡುವ ಮಕ್ಕಳಿಗಾಗಿ ಪಂಚತಂತ್ರ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ.

ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿನ ಎದುರು ತೆರೆದಿಡುವುದು ನಮ್ಮ ಉದ್ದೇಶ. ಈ ಮೂಲಕ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದೇವೆ.
-ಭಾವನಾ ಪ್ರದ್ಯುಮ್ನ, ಕನ್ಸರ್ವೇಟರಿ
ಆಫ್ ಪ್ಯಾರಿಸ್‌ ಸಂಸ್ಥೆಯ ಸಂಸ್ಥಾಪಕಿ

Advertisement

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next