Advertisement

ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ

04:15 PM Mar 28, 2020 | Suhan S |

ಬೆಳಗಾವಿ: ನಗರ ಸೇರಿದಂತೆ ಇಡೀ ಜಿಲ್ಲೆ ಕೋವಿಡ್ 19 ಭೀತಿ ಮಧ್ಯೆ ಪೊಲೀಸ್‌ಕಣ್ಗಾವಲಿನಲ್ಲಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆ ಬಿಟ್ಟು ಯಾರೂ ಹೊರ ಬಾರದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಹಾಗೂ ಖರೀದಿಗೆ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

Advertisement

ಕೋವಿಡ್ 19  ಸೋಂಕು ನಿಯಂತ್ರಿಸಲು ಕೆಲವು ದಿನಗಳಿಂದ ಲಾಕ್‌ಡೌನ್‌ ಆಗಿದ್ದ ಎಪಿಎಂಸಿ ಮಾರುಕಟ್ಟೆ ಶುಕ್ರವಾರ ಮುಕ್ತವಾಗಿತ್ತು. ರೈತರು ತರಕಾರಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ವಾಹನಗಳಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ಬಂದಿದ್ದರು. ಮಾರುಕಟ್ಟೆಯ ದರದಂತೆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅಷ್ಟೇ ಪ್ರಮಾಣದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರೂ ಆಗಮಿಸಿದ್ದರು. ಬೆಳ್ಳಂಬೆಳಗ್ಗೆ ಇಡೀ ಮಾರುಕಟ್ಟೆ ತುಂಬ ಜನಜಂಗುಳಿ ಕೂಡಿತ್ತು.

ಕೋವಿಡ್ 19  ಭೀತಿಯ ನಡುವೆ ಇಡೀ ಬೆಳಗಾವಿ ಜಿಲ್ಲೆ ಸ್ತಬ್ಧವಾಗಿದೆ. ವ್ಯಾಪಾರವಹಿವಾಟು, ಜನ ಸಂಚಾರ, ವಾಹನ ಸಂಚಾರ ಇಲ್ಲದೇ ಬೆಳಗಾವಿ ನಿಶ್ಯಬ್ದವಾಗಿದೆ. ಎಪಿಎಂಸಿ ಆವರಣದಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ವಾಹನಗಳಲ್ಲಿ ಬಂದಿದ್ದ ನೂರಾರು ರೈತರು ಕೆಲವೇ ಹೊತ್ತಿನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ತಮ್ಮೂರಿಗೆ ತೆರಳಿದರು.

ದಲ್ಲಾಳಿಗಳು ಮಳಿಗೆಗಳನ್ನು ತೆರೆದು ತರಕಾರಿ ಖರೀದಿಸಿದರು. ಅಲ್ಲಿಯೇ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಮಾರಾಟ ಮಾಡಿದರು. 2-3 ತಾಸಿನಲ್ಲಿ ಇಡೀ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಎಲ್ಲವೂ ಮಾರಾಟವಾಗಿತ್ತು. ಗ್ರಾಹಕರು ತಮ್ಮ ಬಡಾವಣೆಗಳಿಂದ, ಗಲ್ಲಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬಂದಿದ್ದು, ಮಾರುಕಟ್ಟೆಗೆ ನೇರವಾಗಿ ಬಂದು ತರಕಾರಿ ಖರೀದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next