ಕನಕಪುರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಭಾನುವಾರ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ವ್ಯಕ್ತಿಯೊಬ್ಬ ಮೊಸಳೆಗಳಿಗೆ ಆಹುತಿಯಾಗಿದ್ದಾನೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮೋಟಗಾನಹಳ್ಳಿ ಗ್ರಾಮದ ವೆಂಕಟೇಶ್ (52)ಮೃತ ದುರ್ದೈವಿ. ಮೋಟಗಾನಹಳ್ಳಿಯ ಜಯಣ್ಣ ಎಂಬುವರು ತಮ್ಮ ಮನೆಯ ದೇವರಾದ ಮುತ್ತತ್ತಿಯ ಮುತ್ತತ್ತಿ ರಾಯಸ್ವಾಮಿಗೆ ಸೇವೆ ಸಲ್ಲಿಸಲು ಶನಿವಾರ ಸಂಜೆ ಇಲ್ಲಿಗೆ ಬಂದಿದ್ದರು.
450ಕ್ಕೂ ಹೆಚ್ಚು ಮಂದಿ ವಿವಿಧ ವಾಹನದಲ್ಲಿ ಆಗಮಿಸಿದ್ದರು. ಭಾನುವಾರ ಬೆಳಗ್ಗೆ ದೇವರ ಸೇವೆಗೆ ಸಿದ್ಧತೆ ನಡೆದಿತ್ತು. ಬೆಳಗ್ಗೆ 8 ಗಂಟೆ ವೇಳೆಗೆ, ವೆಂಕಟೇಶ್ ಅವರು ದೇವಾಲಯದ ಸಮೀಪ ಇರುವ ಕಾವೇರಿ ನದಿ ನೀರಿನಲ್ಲಿ ಈಜಾಡುತ್ತಿದ್ದರು. ಏಕಾಏಕಿ 3 ಮೊಸಳೆಗಳು ಕಾಣಿಸಿಕೊಂಡು, ವೆಂಕಟೇಶ್‌ನನ್ನು ಒಂದು ದಡದಿಂದ ಮತ್ತೂಂದು ದಡಕ್ಕೆ ಎಳೆದುಕೊಂಡು ಹೋದವು. ಇದನ್ನು ಕಂಡು ಮೋಟಗಾನಹಳ್ಳಿ ಗ್ರಾಮಸ್ಥರು ಹಾಗೂ ಸ್ಥಳದಲ್ಲಿದ್ದವರು ಕೂಗಾಡತೊಡಗಿದರು.
ಆಗ ಮೊಸಳೆಗಳು ವೆಂಕಟೇಶ್‌ನನ್ನು ನೀರಿನ ಒಳಗೆ ಎಳೆದುಕೊಂಡು ಹೋದವು. ಮುತ್ತತ್ತಿಯಲ್ಲಿ ಇದ್ದ ಸ್ಥಳೀಯ ಈಜುಗಾರರು ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿಗಳು ಸೇರಿ ನಾಡದೋಣಿಯಲ್ಲಿ ವೆಂಕಟೇಶ್‌ನನ್ನು ಹುಡುಕಲಾರಂಭಿಸಿದರು. ನದಿಯ ಬಲದಂಡೆಯ ಬಳಿ ಅವರ ದೇಹ ಕಾಣಿಸಿತು. ಮೊಸಳೆಗಳಿಂದ ಬಿಡಿಸಿ, ವೆಂಕಟೇಶ್‌ನನ್ನು ನೀರಿನಿಂದ ಹೊರತರುವಷ್ಟರಲ್ಲಿ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು. ಮೊಸಳೆಗಳು ಅವರ ಎಡಗಾಲಿನ ಪಾದ ತಿಂದಿದ್ದು, ಬಲಗೈ ಮೂಳೆ ಮುರಿದು ಹಾಕಿವೆ.
ಹಲಗೂರು ಪೊಲೀಸರು ಮೃತ ವ್ಯಕ್ತಿಯ ಪತ್ನಿ, ಗಂಗಮ್ಮನವರಿಂದ ದೂರು ದಾಖಲಿಸಿಕೊಂಡು,ಮಳವಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ರಾತ್ರಿ 7.30ಕ್ಕೆ ಮೃತನ ಸ್ವಗ್ರಾಮವಾದ ಮೋಟಗಾನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.