Advertisement

ಸಾಯ್‌-ಜಿಮ್ನಾಸ್ಟಿಕ್‌ ಸಂಸ್ಥೆ ನಡುವೆ ಬಿಕ್ಕಟ್ಟು

02:18 AM May 09, 2019 | Team Udayavani |

ನವದೆಹಲಿ: ಭಾರತದ ಕ್ರೀಡಾವಲಯದಲ್ಲಿ ಪ್ರತೀಬಾರಿಯೂ ಏನಾದರೊಂದು ವಿವಾದ ಇದ್ದೇ ಇರುತ್ತದೆ. ಇನ್ನೂ ವೃತ್ತಿಪರತೆ, ಸಂಪೂರ್ಣ ಶಿಸ್ತಿನ ವಾತಾವರಣ ಇಲ್ಲದಿರುವುದರಿಂದ ಆಗಾಗ ಭಾರೀ ಘರ್ಷಣೆಗಳು ಸಂಭವಿಸುತ್ತಿರುತ್ತವೆ. ಈ ಬಾರಿ ಅಂತಹದ್ದೇ ಅಶಿಸ್ತಿನ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಕ್ರೀಡಾಪ್ರಾಧಿಕಾರ (ಸಾಯ್‌) ಮತ್ತು ಭಾರತ ಜಿಮ್ನಾಸ್ಟಿಕ್‌ ಒಕ್ಕೂಟದ (ಜಿಎಫ್ಐ) ನಡುವೆ ಒಳಜಗಳ ತೀವ್ರಗೊಂಡಿದೆ.

Advertisement

ಜೂ.19ರಿಂದ 23ರವರೆಗೆ ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ಏಷ್ಯಾ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌ ನಡೆಯಲಿದೆ. ಅದಕ್ಕೆ ಅರ್ಹ ಸ್ಪರ್ಧಿಗಳನ್ನು ಕಳುಹಿಸಲು ಸಾಯ್‌ ಸ್ವತಃ ಅರ್ಹತಾ ಶಿಬಿರ ನಡೆಸಿದೆ. ಆದರೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಹೆಸರು ಕಳುಹಿಸಲು ಮೇ 17 ಅಂತಿಮ ದಿನಾಂಕ ಎಂದು ಏ.24ರಂದೇ ಜಿಎಫ್ಐ, ಸಾಯ್‌ಗೆ ತಿಳಿಸಿದೆ. ಇನ್ನೂ ಸಾಯ್‌ ಮೌನವಾಗಿರುವುದರಿಂದ ಸ್ಪರ್ಧಿಗಳು ಆತಂಕಕ್ಕೊಳಗಾಗಿದ್ದಾರೆ. ಮತ್ತೂಂದು ಕಡೆ ಜಿಎಫ್ಐ ಕೂಡ ಗೊಂದಲಗೊಂಡಿದೆ.

ಈ ಹಿಂದೆ ಇಂತಹದ್ದೇ ಗೊಂದಲ ಸಂಭವಿಸಿ ಬಾಕು (ಮಾ.14ರಿಂದ 17) ಮತ್ತು ದೋಹಾ (ಮಾ.20ರಿಂದ 23) ವಿಶ್ವಕಪ್‌ಗೆ ಭಾರತದಿಂದ ತಲಾ ಇಬ್ಬರು ಮಾತ್ರ ಸ್ಪರ್ಧಿಗಳು ತಲುಪಿದ್ದರು. ಈಗ ಮತ್ತೆ ಅಂತಹದ್ದೇ ಶೀತಲ ಸಮರ ನಡೆಯುತ್ತಿರುವುದರಿಂದ, ಬಿಗು ವಾತಾವರಣ ನಿರ್ಮಾಣವಾಗಿದೆ. ಸಾಯ್‌ನ ಈ ವಿಳಂಬ ಧೋರಣೆಯಿಂದ ಸಿಟ್ಟಾಗಿರುವ ಜಿಎಫ್ಐ ತಾನೇ ಸ್ವತಃ ಅರ್ಹತಾ ಶಿಬಿರ ನಡೆಸಿ, ಆಟಗಾರರನ್ನು ಆಯ್ಕೆ ಮಾಡಲು ಮುಂದಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಒಂದು ತೊಡಕಿದೆ. ಸ್ಪರ್ಧಿಗಳ ವಯೋಮಿತಿ ನಿಯಮವನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಸರ್ಕಾರ 2012ರಲ್ಲಿ ಜಿಎಫ್ಐ ಮಾನ್ಯತೆಯನ್ನು ರದ್ದುಗೊಳಿಸಿದೆ. ಆದರೆ ಜಾಗತಿಕ ಜಿಮ್ನಾಸ್ಟಿಕ್‌ ಸಂಸ್ಥೆಯ ಮಾನ್ಯತೆ ಜಿಎಫ್ಐಗಿದೆ. ಆದ್ದರಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರ ಜಿಎಫ್ಐನದ್ದೇ ಆಗಿದೆ. ಆದರೆ ಸರ್ಕಾರ ಬೆಂಬಲವಿಲ್ಲದಿದ್ದರೆ, ಜಿಎಫ್ಐಗೆ ಭಾರೀ ಆರ್ಥಿಕ ಹೊರೆ ಬೀಳಲಿದೆ.

ಸದ್ಯ ಸಾಯ್‌ ತನ್ನ ಪಟ್ಟಿಯನ್ನು ಬೇಗ ಬಿಡುಗಡೆ ಮಾಡದ ಪಕ್ಷದಲ್ಲಿ, ಆಟಗಾರರು ಸ್ವತಃ 2 ಲಕ್ಷ ರೂ. ಹಣ ಹಾಕಿ ಮಂಗೋಲಿಯಾ ಕೂಟಕ್ಕೆ ತೆರಳಬೇಕಾಗುತ್ತದೆ. ಇದಕ್ಕೆ ತಾನು ಸಿದ್ಧನಿದ್ದೇನೆ ಎಂದು ಭಾರತದ ಅಗ್ರ ಜಿಮ್ನಾಸ್ಟ್‌ ಯೋಗೇಶ್ವರ್‌ ಸಿಂಗ್‌ ತಿಳಿಸಿದ್ದಾರೆ. ಮತ್ತೂಂದು ಕಡೆ ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಇಲಾಖೆ ಕಾರ್ಯದರ್ಶಿ ರಾಧೇಶ್ಯಾಮ್‌, ಕೆಲವು ಕ್ರೀಡಾ ಸಂಸ್ಥೆಗಳು ಸರಿಯಾದ ಪ್ರಕ್ರಿಯೆ ಪಾಲಿಸುವುದಿಲ್ಲ. ಅದೇ ಕಾರಣಕ್ಕೆ ತಡವಾಗುತ್ತದೆ. ತಂಡಗಳನ್ನು ನಿರ್ಧರಿಸುವುದು ಅರ್ಹತೆ ಆಧಾರದಲ್ಲಿ. ನಾವು ಆಟಗಾರರ ಪ್ರಸ್ತುತ ಲಯವನ್ನು ಪರಿಗಣಿಸುತ್ತೇವೆಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next