ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣ ಮಟ್ಟ ಹಾಕಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯ ಪಡೆ ರಚನೆ ಮತ್ತು ಡ್ರಗ್ಸ್ ಪೆಡ್ಲರ್‌ಗಳಿಗೆ 10 ವರ್ಷದಿಂದ ಜೀವಾವಧಿಯವರೆಗೂ ಶಿಕ್ಷೆ ವಿಧಿಸುವ ಸಂಬಂಧ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಭವಿಷ್ಯದ ಪೀಳಿಗೆಯ ಆರೋಗ್ಯದ ಹಿನ್ನೆಲೆಯಲ್ಲಿ ಇದೊಂದು ಸಮಯೋಚಿತ ನಿರ್ಧಾರವಾಗಿದೆ.
ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸುವ ಕಾರ್ಯದ ಸಂಪೂರ್ಣ ಮೇಲುಸ್ತುವಾರಿಯನ್ನು ಈ ಕಾರ್ಯಪಡೆ ನಿರ್ವಹಿಸಲಿದೆ. ಪೊಲೀಸ್ ವ್ಯವಸ್ಥೆಯು ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡಬೇಕಿದೆ. ಮಾದಕ ವಸ್ತುಗಳ ಹಾವಳಿ ಹೆಚ್ಚಿರುವ ಸೂಕ್ಷ್ಮ ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ಗುರುತಿಸಿ, ಅಂತಹ ಕಡೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಲೆ, ಕಾಲೇಜುಗಳು, ವಸತಿ ಶಾಲೆಗಳಲ್ಲಿ ಈ ಕುರಿತು ಹೆಚ್ಚಿನ ನಿಗಾ ವಹಿಸಲು ಸ್ಟೂಡೆಂಟ್ ಪೊಲೀಸಿಂಗ್ ವ್ಯವಸ್ಥೆ, ಔಷಧ ಮಳಿಗೆಗಳಲ್ಲಿ ಅನಧಿಕೃತ ಸಿಂಥೆಟಿಕ್ ಡ್ರಗ್ಸ್ ಮಾರಾಟ ನಿರ್ಬಂಧ ಸೇರಿ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿರುವುದು ಸ್ವಾಗತಾರ್ಹವಾಗಿದೆ.
ಮಾದಕ ದ್ರವ್ಯ ವ್ಯಸನವು ಇಂದು ಪ್ರತೀ ಮನೆಯ ಬಾಗಿಲಿಗೆ ಬಂದು ನಿಂತಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ನಗರಗಳಲ್ಲಿ ಗಾಂಜಾ, ಅಫೀಮು, ಹಷೀಶ್, ಎಂಡಿಎಂಎ, ಎಲ್‌ಎಸ್‌ಡಿ ಸೇರಿ ವಿವಿಧ ನಮೂನೆಯ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತದೆ. ವಿಶೇಷವಾಗಿ ಶಾಲಾ, ಕಾಲೇಜುಗಳ ಆಸುಪಾಸಿನಲ್ಲೇ ಈ ವ್ಯವಹಾರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮಾದಕ ಪದಾರ್ಥಗಳ ಸೇವನೆ, ಮಾರಾಟ ಪ್ರಕರಣಗಳು ಬಯಲಾದಾಗಲೆಲ್ಲ ಈ ದಂಧೆಯ ಕರಾಳತೆಯ ನೈಜ ಮುಖ ಅನಾವರಣಗೊಳ್ಳುತ್ತಲೇ ಬರುತ್ತಿದೆ. ಒಂದಿಷ್ಟು ಪೆಡ್ಲರ್‌ಗಳನ್ನು ಬಂಧಿಸಲಾಗುತ್ತದೆ. ಆಮೇಲೇನಾಗುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ನಿರಂತರ ನಿಗಾವಹಿಸುವುದು ಅತ್ಯಗತ್ಯವಾಗಿದೆ.
ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 2022ರಲ್ಲಿ 6,046 ಪ್ರಕರಣಗಳು ದಾಖಲಾಗಿದ್ದರೆ, ಈ ಪೈಕಿ ಬೆಂಗಳೂರಲ್ಲೇ 4,027 ಕೇಸ್‌ಗಳಿವೆ. ಸರಕಾರ ಒದಗಿಸಿರುವ ಮಾಹಿತಿಯ ಪ್ರಕಾರ, ಅನಂತರದ ವರ್ಷಗಳಲ್ಲೂ ಬೆಂಗಳೂರು ಅನಂತರ ಮಂಗಳೂರಲ್ಲಿ ಅತೀ ಹೆಚ್ಚು ಪ್ರಕರಣಗಳು ನಡೆದಿವೆ. ಕಳೆದ ಎರಡೂ ವರ್ಷದಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ ದಾಖಲಾಗದ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇಲ್ಲ. ಇದೆಲ್ಲವೂ ರಾಜ್ಯದಲ್ಲಿ ಮಾದಕ ದ್ರವ್ಯದ ಕರಾಳಮುಖವನ್ನು ಪರಿಚಯಿಸುತ್ತವೆ.
ಮಾದಕ ದ್ರವ್ಯ ಹಾವಳಿಯನ್ನು ಕಾನೂನು ಮೂಲಕ ತಡೆಯುವುದು ಒಂದು ಮಾರ್ಗವಾದರೆ, ಜನ ಜಾಗೃತಿಯು ಮತ್ತೂಂದು ಹಾದಿಯಾಗಿದೆ. ಸರಕಾರವು ಈ ನಿಟ್ಟಿನಲ್ಲೂ ಕಾರ್ಯ ಪ್ರವೃತ್ತರಾಗಬೇಕು. ವಿಶೇಷವಾಗಿ ಶಾಲಾ, ಕಾಲೇಜುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಡಿ ಇಡಬೇಕು. ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸೇರಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಈ ಅಭಿಯಾನಗಳನ್ನು ಇನ್ನಷ್ಟು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಜತೆಗೆ ಮಾದಕ ದ್ರವ್ಯ ಹಾವಳಿ ತಡೆಗೆ ಇರುವ ಜಿಲ್ಲಾ ಸಮಿತಿಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು. ಕಾನೂನು ಜಾರಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ದಕ್ಷವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಂಡರೆ, ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ಕಾಣುವುದು ತೀರಾ ದುರ್ಲಬದ ಮಾತಲ್ಲ.