Advertisement

ಆಡಳಿತ ಸುಧಾರಿಸದಿದ್ದರೆ ಹೊಸ ತಾಲೂಕು ರಚನೆ ನಿಷ್ಪ್ರಯೋಜಕ

03:50 AM Mar 25, 2017 | |

ಹೊಸ ತಾಲೂಕು ರಚನೆಯಾಗಿ, ಅದರ ಕಚೇರಿ ಮನೆಯ ಮಗ್ಗುಲಿನಲ್ಲಿ ಇದ್ದರೂ ಸಿಬ್ಬಂದಿಗಳ ಕೊರತೆ, ಅದಕ್ಷತೆಯಿಂದ ಪ್ರಜೆಯೊಬ್ಬ ಯಾವುದೇ ಸರಕಾರಿ ಕೆಲಸ ಪೂರೈಸಿಕೊಳ್ಳಲು ಅಲ್ಲಿಗೆ ಹತ್ತಾರು ಬಾರಿ ಓಡಾಡಬೇಕಾಗುತ್ತದೆ ಎಂದಾದರೆ ಹೊಸ ತಾಲೂಕು ಅಥವಾ ಜಿಲ್ಲೆ ರಚನೆಯಾಗಿ ಏನು ಪ್ರಯೋಜನ? 

Advertisement

ನಾಗರಿಕರಿಗೆ ಹೆಚ್ಚೆಚ್ಚು ಅನುಕೂಲತೆಗಳನ್ನು ಒದಗಿಸುವ ಉದ್ದೇಶ ಪ್ರಗತಿಪರ ಸರಕಾರ ಹೊಂದಿರಬೇಕೆಂಬುದನ್ನು ಅಲ್ಲಗಳೆಯಲಾಗದು. ಅದು ಸಂವಿಧಾನದ ಆಶಯ. ಆದರೆ ಈ ಉದ್ದೇಶವನ್ನು ಕಾರ್ಯಗತಗೊಳಿಸುವ ಅವಸರದಲ್ಲಿ ಹೊಸ ಆಡಳಿತ ಘಟಕಗಳ ಸೃಷ್ಟಿ ಮೊದಲ ಪ್ರಯತ್ನವಾಗಕೂಡದು. ಅದು ಎಲ್ಲ ಪ್ರಯತ್ನಗಳ ಅನಂತರದ ಸ್ಥಾನ. ಯಾಕೆಂದರೆ, ಆಡಳಿತದಲ್ಲಿ ದಕ್ಷತೆ ಮುಖ್ಯ. ದಕ್ಷತೆ ಇದ್ದರೆ ನಾಗರಿಕರಿಗೆ ಎಲ್ಲ ಅನುಕೂಲತೆಗಳು ಸಕಾಲದಲ್ಲಿ ನ್ಯಾಯಯುತವಾಗಿ ದೊರಕುತ್ತವೆ. ಒಂದು ತಾಲೂಕು ಪ್ರದೇಶವನ್ನು ಒಡೆದು ಎರಡಾಗಿ ವಿಭಜಿಸಿ, ಎರಡು ಪ್ರತ್ಯೇಕ ತಾಲೂಕು ಕಚೇರಿಗಳ ಸ್ಥಾಪನೆಯಾದೊಡನೆ ನಾಗರಿಕರ ಬವಣೆ ನೀಗುತ್ತದೆ ಎಂಬುದು ಅವಸರದ ತೀರ್ಮಾನ. ಉಡುಪಿಯಿಂದ ಹತ್ತು ಕಿ.ಮೀ. ದೂರದ ಕಾಪುವಿನಲ್ಲಿ ಹೊಸ ತಾಲೂಕು ಕಚೇರಿ ಸ್ಥಾಪನೆಯಾಗುವುದು ಮುಖ್ಯವಲ್ಲ. ಅದರ ಮುಖ್ಯ ಠಾಣೆಗೆ ಹೊಂದಿಕೊಂಡಿರುವ ಗ್ರಾಮದ ನಾಗರಿಕ ತನ್ನ ಯಾವುದೇ ಸರಕಾರಿ ಕೆಲಸಕ್ಕೆ ಹತ್ತು ಬಾರಿ ಭೇಟಿ ನೀಡುವ ಪ್ರಮೇಯ ಇರುವುದಾದರೆ ಏನು ಪ್ರಯೋಜನ! ಆಡಳಿತದಲ್ಲಿ ದಕ್ಷತೆಯನ್ನು ಉಳಿಸಿಕೊಳ್ಳಲಾಗದ ಈ ಸ್ಥಿತಿಯಲ್ಲಿ ಹೊಸ ತಾಲೂಕು ಕಚೇರಿಗಳ ಸ್ಥಾಪನೆಯ ಔಚಿತ್ಯದ ಪರಾಮರ್ಶೆ ಅಗತ್ಯ.

ಆಡಳಿತಾತ್ಮಕ ಕಚೇರಿಗಳಾದ ತಾಲೂಕು ಕಛೇರಿ ಅಥವಾ ಜಿಲ್ಲಾ ಕಚೇರಿ ಯಾಕೆ ಅತಿ ಹತ್ತಿರದಲ್ಲಿರಬೇಕು ಎಂಬುದೇ ಮೂಲಭೂತ ಪ್ರಶ್ನೆ. ಶಾಲೆ, ಆಸ್ಪತ್ರೆ ಹಾಗೂ ಪೊಲೀಸ್‌ ಸ್ಟೇಶನ್‌ಗಳಂಥವುಗಳು ಅಲ್ಲಲ್ಲಿ ಹಾಗೂ ಅತೀ ಸಮೀಪದಲ್ಲಿ ಸ್ಥಾಪನೆಯಾದರೆ ಸಾರ್ವಜನಿಕರಿಗೆ ನೇರ ಪ್ರಯೋಜನ ಇದೆ. ಆದರೆ ಹತ್ತತ್ತು ಕಿ.ಮೀ.ಗಳಿಗೊಂದರಂತೆ ತಾಲೂಕು ಆಫೀಸ್‌ ಸ್ಥಾಪನೆ ಮಾಡುವುದರಲ್ಲಿ ಯಾವ ಪುರುಷಾರ್ಥವಿದೆ? ಈ ಕಚೇರಿ ಅವಶ್ಯಕ ಸೇವೆಗಳನ್ನು ನೀಡುವ ಘಟಕಗಳಲ್ಲ. ಅದು ಸಾಮಾಜಿಕ ಅಭಿವೃದ್ಧಿ ಹಾಗೂ ಪೌರನಿಗೆ ಸಂವಿಧಾನದಲ್ಲಿ ಕಲ್ಪಿಸಲಾದ ಪ್ರಜಾಸತ್ತಾತ್ಮಕ ಸೌಲಭ್ಯಗಳನ್ನು ಒದಗಿಸುವ ಕಚೇರಿ. ಇಲ್ಲಿ ನೀಡಲಾಗುವ ಸೇವಾ ಸೌಲಭ್ಯಗಳಿಗೆ ಪೌರನೋರ್ವ ಖುದ್ದಾಗಿ ಭೇಟಿ ನೀಡಲೇಬೇಕಾದ ಅಗತ್ಯವಿಲ್ಲ. ಲಿಖೀತ ಅರ್ಜಿ ಅಥವಾ ಸರಕಾರವೇ ರೂಪಿಸಿದ ಪ್ರಪತ್ರಗಳನ್ನು ಭರ್ತಿ ಮಾಡಿ ಆ ಮನವಿಯನ್ನು ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ.

ಹಾಗೆ ಬರೆದು ಸಲ್ಲಿಸಿದ ಅರ್ಜಿಯಲ್ಲಿ, ಆತ ಬಯಸಿದ ಸೇವೆಗೆ ಅರ್ಹನಾಗಿದ್ದಲ್ಲಿ, ಅಧಿಕಾರಿಗಳು ತಮಗೆ ದತ್ತವಾದ ಅಧಿಕಾರದ ವರ್ಚಸ್ಸಿನಿಂದ ಲಿಖೀತ ಅನುಮೋದನೆ ಅಥವಾ ಮಂಜೂರು ಮಾಡಿದ ಆದೇಶವನ್ನು ಅಂಚೆ ಮೂಲಕ ಆತನಿಗೆ ಕಳುಹಿಸಬಹುದು. ಅಲ್ಲಿಗೆ ಆ ಕೆಲಸ ಮುಗಿಯಿತು. ಆ ಕಚೇರಿಯಲ್ಲಿ ಸಿಗುವ ಸೇವಾ ಸ್ವರೂಪ, ಅದರ ಇತಿಮಿತಿ ಅಷ್ಟೇ. ಅದೇ ಸರಕಾರಿ ಆಸ್ಪತ್ರೆಯಲ್ಲಿ ದೊರೆಯುವ ಸೇವೆಗಾಗಿ ರೋಗಿ ಖುದ್ದಾಗಿ ಹೋಗಬೇಕು. ಆಗ ಆಸ್ಪತ್ರೆ ಹತ್ತಿರವಿದ್ದಷ್ಟು ಒಳ್ಳೆಯದು ಮತ್ತು ಹೆಚ್ಚು ಮೂಲಭೂತ ಸೌಕರ್ಯವಿದ್ದಲ್ಲಿ ಇನ್ನೂ ಉತ್ತಮ. ಅಂಥ ಸೇವಾ ಕೇಂದ್ರಗಳನ್ನು ಹೆಚ್ಚೆಚ್ಚು ಸ್ಥಾಪನೆ ಮಾಡುವುದಾದರೆ ಸರಕಾರಕ್ಕೆ ಜೈ. ಅದಕ್ಕಾಗಿ ಆಡಳಿತ ವಲಯವನ್ನು ಮೇಲ್ದರ್ಜೆಗೇರಿಸುವ ಅಗತ್ಯವಿಲ್ಲ. ಇಲ್ಲಿ ಬೊಟ್ಟು ಮಾಡುವ ವಿಷಯವೇನೆಂದರೆ, ಕಚೇರಿ ದೂರದಲ್ಲಿದ್ದೂ ಸೇವಾರ್ಥಿಗೆ ತಾಲೂಕು ಕಚೇರಿಯಿಂದ ಅತಿ ಕಡಿಮೆ ಶ್ರಮ ಹಾಗೂ ಖರ್ಚಿನಲ್ಲಿ ಸೇವೆ ಒದಗಿಸಬಹುದಾಗಿದೆ. ವಸ್ತುಸ್ಥಿತಿ ಹೀಗಿದ್ದರೂ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಸೇವಾಕಾಂಕ್ಷಿಗಳ ನೂಕುನುಗ್ಗಲು ಏಕೆ? ಅದಕ್ಕೆ ಕಾರಣ ಆಡಳಿತದ ಅದಕ್ಷತೆ ಹೌದು ತಾನೇ? ಈ ಕೃತಕ ಒತ್ತಡ ಹೇಗೆ ಮತ್ತು ಯಾಕೆ ಉಂಟಾಗುತ್ತದೆ ಎಂಬ ಅವಲೋಕನ ಅಗತ್ಯ.

ಕಡಿಮೆ ಸಿಬ್ಬಂದಿ, ಅದಕ್ಷತೆ
ಕರ್ನಾಟಕದಲ್ಲಿ ಸುಮಾರು ಆರೂವರೆ ಲಕ್ಷದಷ್ಟು ಸರಕಾರಿ ಹುದ್ದೆಗಳಿವೆ. ಇವುಗಳಲ್ಲಿ ಒಂದು ಲಕ್ಷದ ನಲವತ್ತು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಅವಶ್ಯಕ ಸೇವೆಗಳಡಿಯಲ್ಲಿ ಬರುವ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆಗಳಲ್ಲಿ ಶೇ.20ಕ್ಕಿಂತಲೂ ಅಧಿಕ ಪ್ರಮಾಣದ ಹುದ್ದೆಗಳು ಖಾಲಿ ಇವೆ ಎಂದು ಸರಕಾರಿ ಅಂಕಿ ಅಂಶಗಳೇ ಸಾರುತ್ತವೆ. ಅದರಲ್ಲಿಯೂ ಜನರಿಗೆ ಅತಿ ಹತ್ತಿರವಿರುವ ಕಂದಾಯ ಇಲಾಖೆಯಲ್ಲಿ ಗಣನೀಯ ಸಂಖ್ಯೆಯ ಹುದ್ದೆಗಳು ಭರ್ತಿಯಾಗಿಲ್ಲ. ಪ್ರತಿ ಗ್ರಾಮಕ್ಕೊಬ್ಬರಂತೆ ಇರಬೇಕಾದ ಗ್ರಾಮ ಕರಣಿಕರ ಹುದ್ದೆಗಳು ಬಹುತೇಕ ಖಾಲಿ ಇದ್ದು, ಓರ್ವ ಕರಣಿಕ ಮೂರು ನಾಲ್ಕು ಗ್ರಾಮಗಳನ್ನು ನೋಡಿಕೊಳ್ಳುವ ಸ್ಥಿತಿಯುಂಟಾಗಿದೆ. ಅವರು ಒಂದೊಂದು ದಿನ ಒಂದೊಂದು ಗ್ರಾಮಕ್ಕೆ ಭೇಟಿ ಮಾಡಿ ಕರ್ತವ್ಯ ನಿರ್ವಹಿಸುತ್ತಾರೆ. ಕೆಲವೊಮ್ಮೆ ಅನ್ಯ ಕಾರ್ಯ ನಿಮಿತ್ತ ಈ ಸರದಿ ತಪ್ಪಿ ಹೋಗುವುದು ಸಾಮಾನ್ಯ. ಆಗ ತಿಂಗಳುಗಳ ಕಾಲ ನಾಗರಿಕರಿಗೆ ಅವರು ಸಂಪರ್ಕ ಸಿಗದಿರುವ ಸಾಧ್ಯತೆಯುಂಟು. ನಿಜ, ಅವರ ಕಚೇರಿ ಸಮೀಪದಲ್ಲಿಯೇ ಇದೆ, ಆದರೆ ಏನು ಪ್ರಯೋಜನ? ಹೀಗಾಗಿ ತಾಲೂಕು ಆಫೀಸ್‌ ಹತ್ತಿರದಲ್ಲಿ ಸ್ಥಾಪನೆಯಾದೊಡನೆ ಎಲ್ಲ ಅನುಕೂಲಗಳು ಒದಗಿಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಕೆಲಸ ಆಗಬೇಕು, ಇಲ್ಲವಾದರೆ ನೂಕುನುಗ್ಗಲು ಮಾತ್ರ. ಈ ನೂಕುನುಗ್ಗಲಿಗೆ ಸಿಬ್ಬಂದಿ ಕೊರತೆಯೂ ಒಂದು ಕಾರಣ. ಇಂಥ ಅನೇಕ ಆಡಳಿತಾತ್ಮಕ ಲೋಪದೋಷಗಳನ್ನು ಸರಿಪಡಿಸಿ ಇರುವ ವ್ಯವಸ್ಥೆಯಲ್ಲಿಯೇ ಸಮರ್ಪಕ ಸೇವೆ ನೀಡಲಾಗದ ಸರಕಾರ ಹೊಸ ತಾಲೂಕು ರಚಿಸಿದಾಗ ಸಮರ್ಪಕ ಸೇವೆ ನೀಡುವ ಗ್ಯಾರಂಟಿಯುಂಟೆ!

Advertisement

ಹೊಸ ತಾಲೂಕು ರಚನೆಯಾಗುತ್ತಲೇ ಆ ಪ್ರದೇಶದ ಎಲ್ಲ ಸರಕಾರಿ ಕಚೇರಿಗಳನ್ನು ತಾಲೂಕು ಮಟ್ಟಕ್ಕೆ ಸಮನಾಗಿ ಮೇಲ್ದರ್ಜೆಗೇರಿಸಬೇಕು. ಈ ಕಚೇರಿಗಳಿಗೆ ಅಧಿಕಾರಿ, ಸಿಬ್ಬಂದಿಯ ಹುದ್ದೆ ಸೃಷ್ಟಿಸಬೇಕು. ಕಟ್ಟಡ ಹಾಗೂ ಇತರ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಹೆಚ್ಚುವರಿ ಹಣ ವ್ಯಯಿಸಬೇಕು. ಅದನ್ನು ಸಾರ್ವಜನಿಕ ನಿಧಿಯಿಂದಲೇ ಭರಿಸಬೇಕಲ್ಲವೇ! ಬರುವ ಲಾಭ ಅಥವಾ ಅನುಕೂಲ ಎಷ್ಟು? ಅದು ಅತ್ಯಲ್ಪ. ಉಡುಪಿ ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ, ಅದು ಕಳೆದ ಎರಡು ದಶಕಗಳಿಂದ ಕಾರ್ಯಾಚರಿಸುತ್ತಿದೆ. ಸಾರ್ವಜನಿಕರಿಗೆ ಎಷ್ಟು ಅನುಕೂಲವಾಗಿದೆ? ರೆವೆನ್ಯೂ ಕಚೇರಿಯಲ್ಲಿ ಅರ್ಹ ಫ‌ಲಾನುಭವಿಗಳಿಗೆ ಮಂಗಳೂರಿಗಿಂತ ಉಡುಪಿಯಲ್ಲಿ ಸರಳ, ಸುಲಭ ಹಾಗೂ ಕ್ಷಿಪ್ರ ಸೇವೆ ದೊರಕುತ್ತಿದೆಯೇ? ಉಡುಪಿ ಜಿಲ್ಲೆಯ ನಾಗರಿಕನಿಗೆ ಉಡುಪಿಯಿಂದ ಮಂಗಳೂರಿಗೆ ಹೋಗುವ ಬಸ್‌ ಚಾರ್ಜ್‌ ಉಳಿತಾಯವಾಗಿರಬಹುದಷ್ಟೇ! ಇಷ್ಟಕ್ಕಾಗಿ ಸಾರ್ವಜನಿಕ ನಿಧಿಯಿಂದ ಅಪಾರ ಹಣ ವ್ಯಯಿಸಿ ಹೊಸ ತಾಲೂಕು ಅಥವಾ ಜಿಲ್ಲೆಯ ರಚನೆ ಅನಿವಾರ್ಯವೇ? ಇದು ಸಾರ್ವಜನಿಕರ ಚಿಂತನೆಗೆ ಗ್ರಾಸ.

ಅನುಷ್ಠಾನ ವೈಫ‌ಲ್ಯದ ದುರಂತ
ನಮ್ಮ ಆಡಳಿತದ ದುರಂತವೇ ಅನುಷ್ಠಾನ ವೈಫ‌ಲ್ಯ. ನೂರಾರು ಕಾನೂನುಗಳು ರೂಪಿಸಲ್ಪಡುತ್ತವೆ. ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆ ನಿಯೋಜಿತವಾಗಿರುತ್ತದೆ. ಇಲಾಖೆಯಲ್ಲಿ ಪರಿಣತ ಅಧಿಕಾರಿ-ನೌಕರರಿದ್ದಾರೆ. ಸಾರ್ವಜನಿಕ ನಿಧಿಯಿಂದ ಹಣ ಬಿಡುಗಡೆಯಾಗುತ್ತದೆ. ಆದರೆ ಕಾನೂನು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹಣ ದುರುಪಯೋಗದ, ಸ್ವಜನ ಪಕ್ಷಪಾತದ ಹಾಗೂ ಅರ್ಹ ಫ‌ಲಾನುಭವಿಗಳಿಗಾದ ವಂಚನೆಯ ದೂರು ಹಾಗೂ ಸಾರ್ವಜನಿಕರ ಪರದಾಟ ಕಂಡುಬರುತ್ತದೆ. ಎತ್ತಿಗೆ ಜ್ವರ ಬಂದರೆ ಕೋಣನಿಗೆ ಚಿಕಿತ್ಸೆ ನೀಡುವಂತೆ ಸರಕಾರ ಈ ಲೋಪ ದೋಷಗಳನ್ನು ಸರಿಪಡಿಸಲು ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕಾನೂನು ತಿದ್ದುಪಡಿ ಮಾಡುವುದರಲ್ಲಿ ನಿರತವಾಗುತ್ತದೆ. ಇದಕ್ಕೆ ಒಂದು ಜ್ವಲಂತ ಉದಾಹರಣೆ ಶಿಕ್ಷಣ ಇಲಾಖೆಯಲ್ಲಿ ಯಾವತ್ತೂ ಕೇಳಿಬರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು. ಕಳೆದ ಐವತ್ತು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದಾಖಲಾಗುತ್ತಿವೆ. ಕನಿಷ್ಟ ಎರಡು ವರ್ಷಗಳಿಗೊಮ್ಮೆ ಅಪರಾಧಕ್ಕೆ ವಿಧಿಸುವ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಾರಿ ಇದು ಐದು ವರ್ಷಗಳ ಕಠಿಣ ಶಿಕ್ಷೆಗೆ ಏರಿಕೆಯಾಗಿದೆ. ಆದರೆ ಈ ತನಕ ಯಾರಿಗೂ ಕಠಿಣ ಶಿಕ್ಷೆ ಜಾರಿಯಾದ ಉದಾಹರಣೆ ಇಲ್ಲ. ಇತ್ತ ಪ್ರತಿವರ್ಷ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಇದು ನಮ್ಮ ಆಡಳಿತದ ವೈಖರಿ.

ಈ ಲೇಖನದ ಉದ್ದೇಶ ಹೊಸ ತಾಲೂಕು ರಚನೆಗೆ ವಿರೋಧ ವ್ಯಕ್ತಪಡಿಸುವುದಲ್ಲ; ಪ್ರಜಾಸತ್ತೆಯಲ್ಲಿ ಸಾರ್ವಜನಿಕರ ಜವಾಬ್ದಾರಿಯನ್ನು ಪ್ರೇರೇಪಿಸುವುದು. ನಮಗೀಗ ನಿಜವಾಗಿ ಬೇಕಾಗಿರುವುದು ದಕ್ಷ ಆಡಳಿತ; ಹೊಸ ತಾಲೂಕು ಅಥವಾ ಜಿಲ್ಲೆಯ ರಚನೆಯಲ್ಲ. ಅದು ಸಾರ್ವಜನಿಕರ ಪ್ರತಿಷ್ಠೆಯ ವಿಷಯವಾಗದಿರಲಿ; ಸರಕಾರದ ಕಾರ್ಯವೈಖರಿ ಸಾರ್ವಜನಿಕರ ಕಣ್ಗಾಪಿನಲ್ಲಿರುವಂತಾಗಲಿ. ಇರುವ ವ್ಯವಸ್ಥೆಯ ಸಮರ್ಪಕ ಹಾಗೂ ಪೂರ್ಣ ಪ್ರಮಾಣದ ಉಪಯೋಗ ಆಗುತ್ತಿದೆಯೇ ಎಂಬ ಪರಾಮರ್ಶೆ ಅಗತ್ಯ. ಎಲ್ಲ ಆಯಾಮಗಳಿಂದ ಪರಿಶೀಲಿಸಿಯೂ ಹಾಲಿ ವ್ಯವಸ್ಥೆ ಪ್ರಗತಿಗೆ ಪೂರಕವಾಗಿಲ್ಲವೆಂಬುದು ಮನವರಿಕೆಯಾದರೆ ಮಾತ್ರ ಹೊಸ ಆಡಳಿತ ವಲಯಗಳ ರಚನೆಗೆ ಮುಂದಾಗುವುದು ಸೂಕ್ತ. ಆದರೆ ಈಗಿನ ವ್ಯವಸ್ಥೆಯ ಪೂರ್ಣ ಉಪಯೋಗ ಆಗುತ್ತಿಲ್ಲ ಎಂಬುದು ಅಷ್ಟೇ ಸತ್ಯ. ಸರಕಾರ ಆ ದೋಷಗಳನ್ನು ಸರಿಪಡಿಸುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಅದು ಬೇಕಾಗಿಲ್ಲ. ಸೇವಾ ಮನೋಭಾವವುಳ್ಳ ಹಾಗೂ ಪ್ರಾಮಾಣಿಕರಾದ ಜನಪ್ರತಿನಿಧಿಗಳ ಆಯ್ಕೆ ಮತದಾರರ ಆದ್ಯತೆಯಾಗಲಿ. ಅಂಥ ಉತ್ತಮ ಜನಪ್ರತಿನಿಧಿಗಳ ಒಕ್ಕೂಟ ನೌಕರಶಾಹಿಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ಇರುವ ವ್ಯವಸ್ಥೆಯಲ್ಲಿಯೇ ಸಕಲ ಪ್ರಜೆಗಳು ಪ್ರಜಾಸತ್ತೆಯ ಸವಿಯನ್ನು ಉಣ್ಣಲು ಶಕ್ತರಾಗುತ್ತಾರೆ.

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next