ಹಿರೇಕೆರೂರ: ಕುಂಬಾರ ಓಣಿ ನಿವಾಸಿಯಾದ ಚನ್ನೇಶಶಾಸ್ತ್ರಿ-ಜಯಮ್ಮ ಮಠದ ದಂಪತಿ ಕಳೆದ 20 ವರ್ಷಗಳಿಂದ ಅಗರಬತ್ತಿ ತಯಾರಿಸುವ ಕಾಯಕದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಓಂ ಅಗರಬತ್ತಿ ಹೆಸರಿನಲ್ಲಿ ಇವರು ತಯಾರಿಸುವ ಅಗರಬತ್ತಿಗಳು ಹಿರೇಕೆರೂರ, ಚಿಕ್ಕೇರೂರು ಮಾರುಕಟ್ಟೆ ಸೇರಿದಂತೆ ತಾಲೂಕಿನಲ್ಲಿ ಸುವಾಸನೆ ಬೀರುತ್ತಿವೆ.
ಮೊದಲು ಅಗರಬತ್ತಿ ತಯಾರಿಸಲು ಅಕ್ಕಪಕ್ಕದ ಮನೆಗಳ ಆಯ್ದ ಮಹಿಳೆಯರಿಗೆ ಕಚ್ಚಾವಸ್ತುಗಳನ್ನು ನೀಡಿ ಅವರಿಗೆ ಕೂಲಿಯನ್ನು ಕೊಟ್ಟು ಅಗರಬತ್ತಿ ತಯಾರು ಮಾಡಿಸುತ್ತಿದ್ದರು. ಅವುಗಳನ್ನು ಪಟ್ಟಣದಲ್ಲಿ ನಡೆಯುವ ವಾರದ ಸಂತೆ ಹಾಗೂ ಚಿಕ್ಕೇರೂರು ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.
ಉತ್ತಮ ಗುಣಮಟ್ಟದ ಅಗರಬತ್ತಿ ಆಗಿರುವುದರಿಂದ ಹಾಗೂ ಕಡಿಮೆ ಬೆಲೆಯಲ್ಲಿ ಹೆಚ್ಚು ದೊರೆಯುವುದರಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯವಾಯಿತು. ಕೆಜಿ ಲೆಕ್ಕದಲ್ಲಿ ಅಗರಬತ್ತಿ ಮಾರಾಟ ಆರಂಭಿಸಿದ ಮೊದಲಿಗ ನಾನು. ಅಂಗಡಿಗಳಿಗೆ ಮಾರಾಟ ಮಾಡದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ಬೆಲೆಯಲ್ಲಿ ಅಗರಬತ್ತಿ ಗ್ರಾಹಕರಿಗೆ ಸಿಗುವಂತಾಯಿತು. ಈಗ ನಮಗೆ ಕಾಯಂ ಗ್ರಾಹಕರು ಇದ್ದಾರೆ ಎಂದು ಚನ್ನೇಶಶಾಸ್ತ್ರಿ ಹೇಳುತ್ತಾರೆ.
ಜಾಗತೀಕರಣದ ಪರಿಣಾಮ ಮಾರುಕಟ್ಟೆಯಲ್ಲಿ ನಡೆಯುವ ಸ್ಪರ್ಧೆಯಿಂದ ಒಂದಿಷ್ಟು ವ್ಯಾಪಾರ ಕುಂಠಿತಗೊಂಡಿದೆ. ಕಾರ್ಮಿಕರ ಕೊರತೆ ಸಹ ಕಾಡುತ್ತಿದೆ ಎನ್ನುವುದು ಅವರ ಅಭಿಪ್ರಾಯ. ಬದಲಾವಣೆಗೆ ಹೊದಿಕೊಳ್ಳಬೇಕೆಂಬ ಮನೋಭಾವದಿಂದ 3 ವರ್ಷಗಳ ಹಿಂದೆ ಸುಮಾರು 2.50 ಲಕ್ಷ ರೂ. ತೊಡಗಿಸಿ 2 ಅಗರಬತ್ತಿ ತಯಾರಿಸುವ ಯಂತ್ರಗಳನ್ನು ಖರೀದಿಸಿದ್ದಾರೆ. ಪರಿಣಾಮವಾಗಿ ಕಾರ್ಮಿಕರ ಅವಲಂಬನೆ ಇಲ್ಲದೇ ಪತ್ನಿ ಜಯಮ್ಮನ ಜೊತೆಗೆ ಸೇರಿಕೊಂಡು ಇಬ್ಬರೇ ಅಗರಬತ್ತಿ ತಯಾರಿಸುವ ಕಾಯಕವನ್ನು ಮುಂದುವರೆಸಿದ್ದಾರೆ. ಯಂತ್ರದ ಮೂಲಕ ತಯಾರಿಸುವ ಅಗರಬತ್ತಿಗಳು ಕೈಯಿಂದ ತಯಾರಿಸಿದ ಅಗರಬತ್ತಿಗಳಿಗಿಂತ ದಪ್ಪ ಇರುತ್ತವೆ. ಕಾರ್ಮಿಕರ ಕೊರತೆಯಿಂದ ಅನಿವಾರ್ಯವಾಗಿ ಯಂತ್ರಗಳಿಗೆ ಹೊಂದಿಕೊಳ್ಳಬೇಕಾಯಿತು ಎನ್ನುತ್ತಾರೆ ಚನ್ನೇಶಶಾಸ್ತ್ರಿ.
ಕಚ್ಚಾ ವಸ್ತುಗಳನ್ನು ಸಗಟು ಖರೀದಿ ಮೂಲಕ ಬೆಂಗಳೂರಿನಿಂದ ಖರೀದಿಸಿ ತರುವ ಇವರು 5 ಬಗೆಯ ಸುವಾಸನೆಯುಳ್ಳ ಅಗರಬತ್ತಿ ತಯಾರಿಸುತ್ತಾರೆ. ಓಂ ಅಗರಬತ್ತಿ ಹೆಸರಿನಲ್ಲಿ ಇವರು ತಯಾರಿಸುವ ಅಗರಬತ್ತಿಗಳು ತಾಲೂಕಿನಲ್ಲಿ ಸುವಾಸನೆ ಬೀರುತ್ತಿವೆ.
.ಸಿದ್ಧಲಿಂಗಯ್ಯ ಗೌಡರ್