ಮುಂಬಯಿ: ದೇಶದ ಅರ್ಥ ವ್ಯವಸ್ಥೆ ಮತ್ತು ಜಿಡಿಪಿ ಪ್ರಮಾಣ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ 2023-24ನೇ ಸಾಲಿನಲ್ಲಿ ಏರಿಕೆಯ ಹಂತದಲ್ಲಿಯೇ ಸಾಗಲಿದೆ. ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಏರಿಳಿತಗಳು ಇದ್ದ ಹೊರತಾಗಿಯೂ ಪ್ರಸಕ್ತ ವರ್ಷ ದೇಶದ ಅರ್ಥ ವ್ಯವಸ್ಥೆ ಶೇ.7ರ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ. ಜತೆಗೆ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಪ್ರಮಾಣ ಶೇ.6.5ನ್ನು ಕಾಯ್ದುಕೊಳ್ಳಲಿದೆ ಎಂದು ಆರ್‌ಬಿಐನ 2022-23ನೇ ಸಾಲಿನ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಹಣದುಬ್ಬರ ಪ್ರಮಾಣವೂ ಕಡಿಮೆಯಾಗಿರುವುದು ಅರ್ಥ ವ್ಯವಸ್ಥೆಯಲ್ಲಿ ಬೆಳ ವಣಿಗೆ ಸಾಧಿಸಲು, ಜಿಡಿಪಿ ಪ್ರಮಾಣ ಕಾಯ್ದು ಕೊಳ್ಳಲು ನೆರವಾಗಲಿದೆ ಎಂದು ವಾರ್ಷಿಕ ವರದಿ ಅಭಿಪ್ರಾಯಪಟ್ಟಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಿಲ್ಲದ ಸಂಘರ್ಷ ಮತ್ತು ಇತರ ರಾಜಕೀಯ ತಲ್ಲಣ ಗಳು ಜಗತ್ತಿನ ವಿತ್ತೀಯ ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡುವ ಆತಂಕವೂ ಇದೆ ಎಂದು 311 ಪುಟಗಳ ವಾರ್ಷಿಕ ವರದಿ ಯಲ್ಲಿ ಸಣ್ಣ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ನೋಟುಗಳ ಪ್ರಮಾಣ ಏರಿಕೆ: ಕಳೆದ ವಿತ್ತೀಯ ವರ್ಷದಲ್ಲಿ ನೋಟುಗಳ ಪ್ರಸರಣ ಮತ್ತು ಪ್ರಮಾಣ ಏರಿಕೆಯಾಗಿದೆ ಎಂದಿರುವ ಆರ್‌ಬಿಐ, ಅದು ಕ್ರಮವಾಗಿ ಶೇ. 7.8 ಮತ್ತು ಶೇ.4.4 ಆಗಿದೆ ಎಂದು ಪ್ರತಿಪಾದಿಸಿದೆ. 500 ರೂ. ಮತ್ತು 2 ಸಾವಿರ ರೂ. ನೋಟುಗಳನ್ನು ಒಟ್ಟಾಗಿ ಸೇರಿಸಿ 2023 ಮಾ.31ಕ್ಕೆ ಮುಕ್ತಾ ಯವಾದಂತೆ ಕರೆನ್ಸಿ ಪ್ರಸರಣ ಮೌಲ್ಯ ಪ್ರಮಾಣ ಶೇ.87.9 ಆಗಿದೆ ಎಂದು ಅದು ಹೇಳಿದೆ. ಮಾ.31ರ ಮುಕ್ತಾಯಕ್ಕೆ 4,55, 468 2 ಸಾವಿರ ರೂ. ನೋಟುಗಳು ಪ್ರಸ ರಣದಲ್ಲಿದ್ದವು. ಅದರ ಮೌಲ್ಯ 3,62, 220 ಕೋಟಿ ರೂ. ಆಗಿತ್ತು. 2 ಸಾವಿರ ರೂ. ನೋಟು ಗಳ ಪ್ರಸರಣ ಶೇ.1.3 ಇಳಿಕೆಯೂ ಆಗಿದೆ.
ತುರ್ತು ಸ್ಥಿತಿಗೆ “ಬಂಕರ್’ ಪಾವತಿ
ಹೊಸ ಮಾದರಿಯ ಹಗುರ ಪಾವತಿ ವ್ಯವಸ್ಥೆ (ಎಲ್‌ಪಿಎಸ್‌ಎಸ್) ಜಾರಿಗೊಳಿಸಲು ಆರ್‌ಬಿಐ ನಿರ್ಧರಿಸಿದೆ. ಅದಕ್ಕೆ “ಬಂಕರ್’ ಎಂದು ಹೆಸರಿಡಲಾಗಿದೆ. ಪ್ರವಾಹ, ಪ್ರಾಕೃತಿಕ ವಿಪತ್ತು, ಯುದ್ಧದ ಮಾದರಿಯ ಅತ್ಯಂತ ಪ್ರತೀಕೂಲ ಪರಿಸ್ಥಿತಿಗಳಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಬಳಕೆ ಮಾಡುವ ಉದ್ದೇಶವಿದೆ. ಇದು ಸಾಮಾನ್ಯ ಜನರ ಉಪಯೋಗಕ್ಕೆ ಸಿಗಲಾರದು. ಹಾಲಿ ಪಾವತಿ ತಂತ್ರಜ್ಞಾನಗಳಾಗಿರುವ ಯುಪಿಐ, ನೆಫ್ಟ್, ಆರ್‌ಟಿಜಿಎಸ್ ಅನ್ನು ನೆಚ್ಚಿಕೊಳ್ಳದೆ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಿದೆ. ಇದನ್ನು ಸುಲಭ ವಾಗಿ ತೆಗೆದುಕೊಂಡು ಹೋಗಲೂ ಸಾಧ್ಯವಾಗಲಿದೆ. ಜತೆಗೆ ನಿರ್ವಹಣೆಗೆ ಕನಿಷ್ಠ ಸಿಬಂದಿಯೂ ಸಾಕು. ಯಾವಾಗಿನಿಂದ ಈ ವ್ಯವಸ್ಥೆ ಬರಲಿದೆ ಎಂಬುದರ ಬಗ್ಗೆ ಆರ್‌ಬಿಐ ಹೇಳಿಲ್ಲ.