ಗಂಗೊಳ್ಳಿ: ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ದೇಶದ ರಕ್ಷಣೆಗೆ ಮಾರಕವಾಗುವ ಮತ್ತು ಭಯೋತ್ಪಾದಕ ರಿಗೆ ರಕ್ಷಣೆ ನೀಡುವ ಬಗ್ಗೆ ಹಲವು ಉಲ್ಲೇಖಗಳಿವೆ. ಇದು ಎಷ್ಟರ ಮಟ್ಟಿಗೆ ಸರಿ? ಸದ್ಯ ದೇಶಕ್ಕೆ ಸಮರ್ಥ ನಾಯಕತ್ವ ಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದು ವರ್ಷಗಳಿಂದ ಸಮರ್ಥ, ದಕ್ಷ, ಪಾರದರ್ಶಕ ಆಡಳಿತ ನೀಡುತ್ತಿದ್ದು, ನಮ್ಮ ದೇಶ ವಿಶ್ವದಲ್ಲೇ ಪ್ರಬಲ ಬಲಿಷ್ಠ ದೇಶವಾಗಿ ಬೆಳೆಯುತ್ತಿದೆ ಎಂದು ಬಿಜೆಪಿ ನಾಯಕಿ, ನಟಿ ತಾರಾ ಹೇಳಿದರು.
ಅವರು ಶುಕ್ರವಾರ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಮತಯಾಚಿಸಿ, ಮಾತನಾಡಿದರು.
ನರೇಂದ್ರ ಮೋದಿ ನಮ್ಮ ನಾಯಕ. ಈ ದೇಶವನ್ನು ಸದೃಢವಾಗಿ ಕಟ್ಟಿ ಸಮರ್ಥವಾಗಿ ಮುನ್ನಡೆಸುತ್ತಿರುವ ವಿಶ್ವದ ಅಗ್ರಗಣ್ಯ ನಾಯಕ. ಇಂತವರ ಹೆಸರನ್ನು ಹೇಳಿಕೊಳ್ಳಲು ನಮಗೆ ಯಾವುದೇ ಭಯ, ಸಂಕೋಚ ಇಲ್ಲ. 2019ರಲ್ಲಿ ಕೂಡ ನರೇಂದ್ರ ಮೋದಿಯವರು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು ಎಂದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್, ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿದರು.
ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೇಖರ ದೇವಾಡಿಗ, ಬೈಂದೂರು ಕ್ಷೇತ್ರ ಪ್ರಭಾರಿ ಪ್ರವೀಣ್ ಶೆಟ್ಟಿ ಗುರ್ಮೆ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಎಸ್. ಪೂಜಾರಿ, ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಉಮೇಶ ಎಲ್.ಮೇಸ್ತ, ವಿನೋದ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನುಕುದ್ರು ಸ್ವಾಗತಿಸಿ, ಪ್ರ. ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ವಂದಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.