ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಆ ಮೂಲಕ ಪ್ರಜ್ಞಾವಂತ ನಾಗರಿಕರಲ್ಲಿ ದೇಶಾಭಿಮಾನ ಮೂಡಿಸುವುದು; ಅದರಲ್ಲೂ ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವತ್ತ ಪ್ರೇರಣೆ ನೀಡುವುದು ಉದಯವಾಣಿಯ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯದ ಭವಿಷ್ಯ’ ಎಂಬ ಪರಿಕಲ್ಪನೆಯಡಿ ಸಂವಾದವನ್ನು ಕೊಡಿಯಾಲ್‌ಬೈಲ್‌ನ ಕುದ್ರೋಳಿ ಭಗವತಿ ಕ್ಷೇತ್ರದ “ಕೂಟಕಳ’ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. “ಸ್ವಾತಂತ್ರ್ಯದ ಭವಿಷ್ಯ’- ಅದು ಇಂದಿನ ಮಕ್ಕಳ ಕೈಯಲ್ಲಿ ಅಡಗಿದ್ದು, ಅಂಥವರನ್ನು ದೇಶದ ಉಜ್ವಲ ಭವಿಷ್ಯದತ್ತ ಚಿಂತಿಸುವಂತೆ ಮಾಡುವುದು ಈ ಸಂವಾದದ ಉದ್ದೇಶ.
ಆರು ಪ್ರೌಢಶಾಲೆಗಳಿಂದ ಒಟ್ಟು ಆರು ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಅವರ ಪೈಕಿ ತಲಾ ಮೂವರು ಬಾಲಕಿಯರು ಮತ್ತು ಬಾಲಕರು. ಹಳೇ ಬೇರು ಹಾಗೂ ಹೊಸ ಚಿಗುರನ್ನು ಒಂದೆಡೆ ಸೇರಿಸಿ ದೇಶದ ಸ್ವಾತಂತ್ರ್ಯಕ್ಕೆ ಪೂರಕವಾದ ವಿಚಾರಗಳನ್ನು ಮಂಥನ ಮಾಡುವ ವೇದಿಕೆ ಅದಾಗಿತ್ತು.
ಹೊಸ ಚಿಗುರಿನ ಸ್ವರೂಪದಲ್ಲಿ 10ನೇ ತರಗತಿಯ ಅನಿಶಾ ಮಿಶೆಲ್ ಸಿಕ್ವೇರಾ (ಸೈಂಟ್ ಆ್ಯಗ್ನೆಸ್), ಪ್ರತೀಕ್ಷಾ ಬಿ. (ಅಶೋಕ ವಿದ್ಯಾಲಯ, ಅಶೋಕನಗರ), ಹೃತ್ವಿ (ಕೆನರಾ ಗರ್ಲ್ಸ್ ಹೈಸ್ಕೂಲ್), ರಾಹುಲ್ ಆರ್. ನಾಯಕ್ (ಸ್ವರೂಪ ಅಧ್ಯಯನ ಕೇಂದ್ರ), ಶ್ರವಣ್ ಎ. (ಕೆನರಾ ಹೈಸ್ಕೂಲ್ ಉರ್ವ)ಮತ್ತು ಆರಿÌನ್ ಮೊಂತೇರೋ (ಪಾದುವಾ ಹೈಸ್ಕೂಲ್) ಭಾಗವಹಿಸಿದ್ದರು.
ಇನ್ನೊಂದೆಡೆ, ಸ್ವಾತಂತ್ರ್ಯದ ಭವಿಷ್ಯದ ಬಗ್ಗೆ ಮಕ್ಕಳಿಗೆ ಸ್ಫೂರ್ತಿ ತುಂಬಲು, ಅವರ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಕುತೂಹಲದ ಪ್ರಶ್ನೆಗಳಿಗೆ ಉತ್ತ ರಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ಗಡಿ ಭದ್ರತಾ ಪಡೆಯಲ್ಲಿ 34 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾದ ಮಂಗಳೂರು ಮೂಲದ ಸಂಜೀವ ಕುಲಾಲ್, ದೇಶದ ಮೊದಲ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಭಾಗವಹಿಸಿದ್ದ, ಎಂಜಿನಿಯರಿಂಗ್ ಕ್ಷೇತ್ರದ ಸಾಧಕ ಪ್ರೊ | ಜಿ.ಆರ್.ರೈ ಹಾಗೂ ಗಾಂಧಿ ಪ್ರತಿಷ್ಠಾನ ಹಾಗೂ ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪ್ರಭಾಕರ ಶ್ರೀಯಾನ್ ಭಾಗವಹಿಸಿದ್ದರು.
Related Articles
ಈ ಕಾರ್ಯಕ್ರಮ ಒಂದು ದುಂಡು ಮೇಜಿನ ಸಭೆಯ ರೀತಿ ಇತ್ತು. ಪ್ರೇಕ್ಷಕರಾಗಿ ನಾನಾ ಶಾಲೆಗಳಿಂದ ಸುಮಾರು 40 ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಬಂದಿದ್ದರು. ಸೇನೆಯಲ್ಲಿ ಹಲವು ದಶಕಗಳ ಕಾಲ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ, ಶ್ರೀಲಂಕಾದಲ್ಲಿ ನಡೆದಿದ್ದ ಎಲ್‌ಟಿಟಿ ಉಗ್ರಗಾಮಿಯೊಂದಿಗಿನ ಸಮರದಲ್ಲಿ ಭಾಗವಹಿಸಿ ಸಾವು-ಬದುಕಿನ ನಡುವೆ ಹೋರಾಡಿ ಸಾವನ್ನೇ ಗೆದ್ದುಬಂದ ಬ್ರಿ. ಐ.ಎನ್.ರೈ ತಮ್ಮ ಅನುಭವ ಹಂಚಿಕೊಂಡರು.
ರಜೆಗಾಗಿ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಸಂಜೀವ ಕುಲಾಲ್ ವಿಶ್ರಾಂತಿಯನ್ನೂ ಪಡೆಯದೇ ನೇರವಾಗಿ ಸಂವಾದಕ್ಕೆ ಬಂದು ಮಕ್ಕಳ ಜತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಆ ಬಳಿಕ, ಪ್ರೊ| ಜಿ.ಆರ್. ರೈ ಅವರು ದೇಶದ ಮೊದಲ ಸ್ವಾತಂತ್ರ್ಯ ಸಂಭ್ರಮಾಚರಣೆ ಮಂಗಳೂರಿನ ನೆಹರೂ ಮೈದಾನದಲ್ಲಿ ಯಾವ ರೀತಿ ನಡೆದಿತ್ತು ಎಂಬುದನ್ನು ವಿವರಿಸಿದರು. ಬಳಿಕ, ಗಾಂಧೀವಾದಿ ಪ್ರಭಾಕರ ಶ್ರೀಯಾನ್ ಅವರು ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜದ ಮಹತ್ವವನ್ನು ಬೋಧಿಸಿದರು. ಸಂಪನ್ಮೂಲ ವ್ಯಕ್ತಿಗಳ ಅನುಭವ ಹಂಚಿಕೆ ಕೊನೆಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳಿಂದ ದೇಶ ಭಕ್ತಿ, ಗಡಿಯಲ್ಲಿ ಯೋಧರ ಹೋರಾಟ, ಯುದ್ಧವೂ ಒಳಗೊಂಡಂತೆ ವಿವಿಧ ವಿಷಯಗಳ ಕುರಿತು ಪ್ರಶ್ನೆಗಳ ಸುರಿಮಳೆಯಾಯಿತು. ಮಕ್ಕಳ ಎಲ್ಲ ರೀತಿಯ ಕುತೂಹಲದ ಪ್ರಶ್ನೆಗಳಿಗೂ ಅತಿಥಿಗಳು ಉತ್ತರಿಸಿದರು. ರಾಷ್ಟ್ರಗೀತೆಯೊಂದಿಗೆ ಸಂವಾದಕ್ಕೆ ಅಂತ್ಯ ಹಾಡಲಾಯಿತು. ಆರು ಮಂದಿ ವಿದ್ಯಾರ್ಥಿಗಳು, ದೇಶದ 71ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ದೇಶದ ಭವಿಷ್ಯದ ಕುರಿತಂತೆ ತಮ್ಮ ಸಹಪಾಠಿಗಳು ಸಹಿತ ಇಡೀ ವಿದ್ಯಾರ್ಥಿ ಸಮೂಹಕ್ಕೊಂದು ಸಂದೇಶವನ್ನು ಬರೆದು ಕೊಟ್ಟಿದ್ದಾರೆ. ಕಾರ್ಯಕ್ರಮದ ಬಳಿಕವೂ ಮಕ್ಕಳು ಮಾತ್ರ ದೇಶ ಸೇವಕರು ಹಾಗೂ ಅತಿಥಿಗಳ ಆಟೋಗ್ರಾಫ್ ಪಡೆಯುತ್ತಾ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಭಾವುಕರಾಗಿದ್ದರು.
ಅತಿಥಿಗಳ ಮೆಚ್ಚುಗೆ ಮಾತು:
“ಭವಿಷ್ಯದ ಪ್ರಜೆಗಳಲ್ಲಿ ದೇಶಪ್ರೇಮ ಮೂಡಿಸಲು ಈ ವಿನೂತನ ಪ್ರಯತ್ನ ಶ್ಲಾಘನೀಯ
– ಬ್ರಿ. ಐ. ಎನ್. ರೈ.
ಹೊಸ ಪರಿಕಲ್ಪನೆಯ ಸಂವಾದ ಈ ಮಹತ್ವದ ದಿನವನ್ನು ಸ್ಮರಣೀಯ ವಾಗಿಸಿತು
– ಪ್ರಭಾಕರ ಶ್ರೀಯಾನ್
ಒಬ್ಬ ದೇಶ ಸೇವಕನಾಗಿ ಇಂಥದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಕ್ಕೆ ಹೆಮ್ಮೆ-ಖುಷಿ ತಂದಿದೆ
-ಸಂಜೀವ್ ಕುಲಾಲ್
“ದೇಶ ಸೇವಕರು-ಮಕ್ಕಳ ಸಮಾಗಮ ಖುಷಿ ತಂದಿದೆ. ಮುಂಬರುವ ವರ್ಷಗಳಲ್ಲೂ ಇದು ನಿರಂತರವಿರಲಿ’
– ಪ್ರೊ| ಜಿ. ಆರ್. ರೈ
News Related Videos:
1. ಬ್ರಿಗೇಡಿಯರ್ I.N. Rai ಅವರ ಅನುಭವ…: //bit.ly/2vXJF6T
2. Special Discussion : Part 1: //bit.ly/2fItDHw
3. Special Discussion : Part 2: //bit.ly/2vAaYn7
4. Special Discussion : Part 3: //bit.ly/2vzTwz4
5. Special Discussion : Part 4: //bit.ly/2wM2zvp
6. Special Discussion : Part 5: //bit.ly/2uENePQ
7. Special Discussion : Part 6: //bit.ly/2uFmQoW