Advertisement

ಸಮನ್ವಯದ ಸಮರ: ಸಮನ್ವಯ ಸಮಿತಿ ಸಭೆಗೆ ನಿಗದಿಯಾಗದ ಮುಹೂರ್ತ

06:00 AM Aug 22, 2018 | |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯುತ್ತಿಲ್ಲ ಎಂದು ಹೇಳಲಾಗಿದೆ. ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಯಬೇಕು ಎಂದು ತೀರ್ಮಾನಿಸಲಾಗಿತ್ತಾದರೂ ಮೂರು ತಿಂಗಳು ಕಳೆದರೂ ಎರಡು ಬಾರಿಯಷ್ಟೇ ಸಭೆ ನಡೆದಿದೆ. ಜುಲೈ 28 ಕ್ಕೆ ಸಮನ್ವಯ ಸಮಿತಿ ನಿಗದಿಯಾಗಿತ್ತಾದರೂ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಪ್ರವಾಸದಲ್ಲಿದ್ದ ಕಾರಣ ಸಿದ್ದರಾಮಯ್ಯ ಅವರು ಬಾದಾಮಿ ಪ್ರವಾಸ ಕೈಗೊಂಡರು. ಆ ನಂತರ ಸಮನ್ವಯ ಸಮಿತಿಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. 

Advertisement

ಸಮ್ಮಿಶ್ರ ಸರ್ಕಾರ ಹೊಸದಾಗಿ ಬಜೆಟ್‌ ಮಂಡಿಸಬೇಕೇಬೇಡವೇ ಎಂಬ ವಿಚಾರ ವಿವಾದದ ಸ್ವರೂಪ ಪಡೆದಿದ್ದರಿಂದ ಆಗ ಸಮನ್ವಯ ಸಮಿತಿ ಸಭೆ ನಡೆದಿತ್ತು. ನಂತರ ಇದುವರೆಗೂ ಒಮ್ಮೆಯೂ ಸಮನ್ವಯ ಸಮಿತಿ ಸಭೆ ಸೇರಿಲ್ಲ. ಸಭೆಗೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದರೂ, ಸಿಎಂ ಕುಮಾರಸ್ವಾಮಿ ಸಮಯದ ಅಭಾವದ ಹೆಸರಿನಲ್ಲಿ ಸಭೆ ನಡೆಸಲು ಸಮಯ ನೀಡುತ್ತಿಲ್ಲ . ಅದಕ್ಕೆ ಪೂರಕ ಎನ್ನುವಂತೆ ಡಿಸಿಎಂ ಪರಮೇಶ್ವರ್‌ ಕೂಡ ಸಭೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮಾನ್ಯತೆರೆಯುತ್ತಿಲ್ಲ. ಜೆಡಿಎಸ್‌ ಸಚಿವರು ಕಾಂಗ್ರೆಸ್‌ ಶಾಸಕರ ಶಿಫಾರಸ್ಸುಗಳಿಗೆ ಕಿಮ್ಮತ್ತು ನೀಡುತಿಲ್ಲವೆಂದು ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ. 

ವರ್ಗಾವಣೆಯಲ್ಲಿ ಕಾಂಗ್ರೆಸ್‌ ಶಾಸಕರು ನೀಡಿರುವ ಶಿಫಾರಸ್ಸಿನ ಬದಲಿಗೆ ಅವರ ಕ್ಷೇತ್ರಗಳಲ್ಲಿ ಸೋತಿರುವ ಜೆಡಿಎಸ್‌ ಅಭ್ಯರ್ಥಿಗಳು ನೀಡುವ ಶಿಫಾರಸ್ಸುಗಳನ್ನು ಪರಿಗಣಿಸಲಾಗುತ್ತಿದೆ. ಸಚಿವ ರೇವಣ್ಣ ಅವರು ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ದೂರುಗಳು ಬಂದಿವೆ. ಇದೆಲ್ಲವನ್ನೂ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲು ಸಿದ್ದರಾಮಯ್ಯ ಕಾಯುತ್ತಿದ್ದಾರೆ. ಆದರೆ, ಸಭೆಗೆ ಸಮಯ ಮಾತ್ರ ನಿಗದಿಯಾಗುತ್ತಿಲ್ಲ. ಆದರೆ, ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪರಿಹಾರ ಕಾರ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದರಿಂದ ಸಮನ್ವಯ ಸಮಿತಿ ಸಭೆ ನಡೆಸಲು ಆಗುತ್ತಿಲ್ಲ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕೂಡ ತಮ್ಮರಾಜ್ಯದ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ, ಸಭೆಗೆ ಸಮಯ ನಿಗದಿಯಾಗಿಲ್ಲ ಎಂದೂ ಹೇಳಲಾಗುತ್ತಿದೆ.

ಮಾಸಾಂತ್ಯಕ್ಕೆ ಸಾಧ್ಯತೆ: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೆಪ್ಟಂಬರ್‌ 2 ರಿಂದ ಹನ್ನೆರಡು ದಿನಗಳ ಕಾಲ ಯೂರೋಪ್‌ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಅದಕ್ಕೂ ಮೊದಲೇ ಸಮನ್ವಯ ಸಮಿತಿ ಸಭೆ ನಡೆಯಬೇಕಿದೆ. ಆಗಸ್ಟ್‌ 23 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ವಾಪಸ್‌ ಆದ ನಂತರ ತಿಂಗಳಾಂತ್ಯದಲ್ಲಿ ಸಮನ್ವಯ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಆಪ್ತ ಮೂಲಗಳು ತಿಳಿಸಿವೆ. ಆದರೆ, ಸದ್ಯದ ಸ್ಥಿತಿ ಗಮನಿಸಿದರೆ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೂ ಮೊದಲು ಸಮನ್ವಯ ಸಮಿತಿ ಸಭೆ ನಡೆಯುವುದು ಅನುಮಾನ ಎನ್ನಲಾಗಿದೆ.
ಈ ಹಿಂದೆ ಎರಡೂ ಪಕ್ಷಗಳ ಅಧ್ಯಕ್ಷರು ಸರ್ಕಾರದ ಭಾಗವಾಗಿದ್ದರಿಂದ ಐದು ಜನರ ಸಮಿತಿ ರಚಿಸಲಾಗಿತ್ತು. ಈಗ ಎರಡೂ ಪಕ್ಷಗಳಲ್ಲಿ ಅಧ್ಯಕ್ಷರು ಹೊಸದಾಗಿ ನೇಮಕಗೊಂಡಿರುವುದರಿಂದ ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ ಅಧ್ಯಕ್ಷರನ್ನು ಸೇರಿಸಿಕೊಳ್ಳುವ ಕುರಿತಂತೆಯೂ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next