Advertisement

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

11:52 PM Jun 02, 2023 | Team Udayavani |

ಚುನಾವಣ ಪೂರ್ವದಲ್ಲಿ ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕೃತವಾಗಿ ಮುದ್ರೆ ಒತ್ತಿದೆ. ಕಳೆದ 15 ದಿನಗಳಿಂದ ನಡೆದ ಸಾಕಷ್ಟು ಕಸರತ್ತು ಹಾಗೂ ಸಿದ್ಧತೆಗಳ ಬಳಿಕ ಗ್ಯಾರಂಟಿಗಳ ಜಾರಿಗೆ ಟೈಮ್‌ಲೈನ್‌ ಫಿಕ್ಸ್‌ ಮಾಡುವ ಮೂಲಕ ಜನರಿಗೆ ನೀಡಿದ್ದ ವಾಗ್ಧಾನ ಈಡೇರಿಸುವತ್ತ ಹೆಜ್ಜೆ ಹಾಕಿದೆ. ಅಷ್ಟೇ ಅಲ್ಲ ವಿಪಕ್ಷ ಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗಳು ಈ ಬಗ್ಗೆ ವ್ಯಕ್ತಪಡಿಸಿದ್ದ ಹಲವು ಅನುಮಾನಗಳು, ಟೀಕೆಗಳು ಹಾಗೂ ಆಕ್ಷೇಪಗಳಿಗೂ ಸರಕಾರ ಒಂದೇ ಕಂತಿನಲ್ಲಿ ಉತ್ತರ ಕೊಟ್ಟಿದೆ.

Advertisement

ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವ “ಶಕ್ತಿ’ ಯೋಜನೆ ಜೂನ್‌ 11ರಿಂದ ಜಾರಿಗೆ ಬರಲಿದೆ. ಜುಲೈ 1ರಿಂದ ಬಿಪಿಎಲ್‌ ಮತ್ತು ಅಂತ್ಯೋ ದಯ ಅನ್ನ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡ ಲಿದೆ. ಜುಲೈ 1ರಿಂದ ಆಗಸ್ಟ್‌ವರೆಗಿನ ವಿದ್ಯುತ್‌ ಬಳಕೆಗೆ ಅನ್ವಯ ವಾಗುವಂತೆ 200 ಯೂನಿಟ್‌ ಉಚಿತ ವಿದ್ಯುತ್‌ ಕಲ್ಪಿಸುವ “ಗೃಹ ಜ್ಯೋತಿ’ ಯೋಜನೆ, ರಾಜ್ಯದಲ್ಲಿರುವ ಎಲ್ಲ ಕುಟುಂಬದ ಯಜ ಮಾನಿಯ ಖಾತೆಗೆ ಮಾಸಿಕ 2 ಸಾವಿರ ರೂ. ವರ್ಗಾವಣೆ ಮಾಡುವ “ಗೃಹ ಲಕ್ಷ್ಮಿ’ ಯೋಜನೆ ಹಾಗೂ 2022- 23ರಲ್ಲಿ ತೇರ್ಗಡೆಯಾದ ವೃತ್ತಿ ಶಿಕ್ಷಣವೂ ಸೇರಿ ಎಲ್ಲ ಪದವೀಧರರಿಗೆ 24 ತಿಂಗಳು ನೆರವು ನೀಡುವ “ಯುವ ನಿಧಿ’ ಯೋಜನೆ ಜಾರಿಗೆ ಸಂಪುಟ ಸಭೆ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಈ ಯೋಜನೆಗಳಿಗೆ ರಾಜ್ಯ ಸರಕಾರ ತನ್ನ ಬೊಕ್ಕಸದಿಂದ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಜನ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿ ಕೊಳ್ಳಬಾರದು. ವಿಶೇಷವಾಗಿ ಬಸ್‌ ಪ್ರಯಾಣ ಅನಿವಾರ್ಯ ಹಾಗೂ ಅಗತ್ಯವಿದ್ದ ಸಂದರ್ಭಗಳಲ್ಲಿ ಮಾತ್ರ ಇರಬೇಕೇ ಹೊರತು ಉಚಿತ ವೆಂದು ನಿತ್ಯವೂ ಅನಗತ್ಯ ಸುತ್ತಾಟ ಸರಿಯಲ್ಲ. ಅದೇ ರೀತಿ ಸರಕಾರ ಕೊಡುವ ಅಕ್ಕಿಯೂ ದುರ್ಬಳಕೆ ಆಗ ಕೂಡದು. ನ್ಯಾಯಬೆಲೆ ಅಂಗಡಿ ಗಳಿಂದ ತಂದ ಅಕ್ಕಿಯೂ ಊಟ- ತಿಂಡಿಗೆ ಬಳಕೆಯಾಗಬೇಕೇ ಹೊರತು ಆ ಅಕ್ಕಿಯನ್ನು ಮಾರಿಕೊಳ್ಳುವ ಚಟ ಬೆಳೆಸಿಕೊಳ್ಳಬಾರದು.

ಈ ಬಗ್ಗೆ ಆಹಾರ ಇಲಾಖೆ ನಿಗಾವಹಿಸಬೇಕಿದೆ. ಉಚಿತ 200 ಯೂನಿಟ್‌ ವಿದ್ಯುತ್‌ ಬಳಕೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ತುಸು ಗೊಂದಲವಿದ್ದು, ಅದನ್ನು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಬೇಕಿದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳ ಬೇಕಿದ್ದು, ಅಲ್ಲಿಯವರಿಗೆ ಯಜಮಾನಿಯರು ಸಹಕರಿಸಬೇಕಿದೆ. ಅನುಷ್ಠಾನದ ಹಂತದಲ್ಲಿ ಕೆಲವು ಅಡೆತಡೆಗಳು, ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಫ‌ಲಾನುಭವಿಗಳು ಯೋಜನೆ ಗಳಿಂದ ವಂಚಿತರಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆನ್‌ಲೈನ್‌ ಪೇಮೆಂಟ್‌ ರೂಪಿಸಲು ಸಮಯ ಬೇಕಿದ್ದು ಅಲ್ಲಿವರೆಗೂ ತಾಳ್ಮೆಯಿಂದ ಸಹಕರಿಸಬೇಕು. ಗ್ಯಾರಂಟಿಗಳ ಜಾರಿಗೆ ಸರಕಾರ ಬದ್ಧತೆ ತೋರಿದೆ. ಆದರೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬ ಗುಟ್ಟನ್ನು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಟ್ಟಿಲ್ಲ. ಅದೇನೇ ಇರಲಿ ಗ್ಯಾರಂಟಿಗಳ ಜಾರಿ ನೆಪದಲ್ಲಿ ಆರೋಗ್ಯ, ಶಿಕ್ಷಣವೂ ಸಹಿತ ಅಭಿವೃದ್ಧಿ ಇಲಾಖೆಗಳಿಗೆ ಅನುದಾನ ಕಡಿತಗೊಳ್ಳಬಾರದು, ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳಬಾರದು.

Advertisement

Udayavani is now on Telegram. Click here to join our channel and stay updated with the latest news.

Next