Advertisement

ಆಲ್ದೂರು ಸುತ್ತಮುತ್ತ ತಂಪೆರೆದ ಭರಣಿ ಮಳೆ

05:11 PM Apr 30, 2019 | pallavi |

ಆಲ್ದೂರು: ಆಲ್ದೂರು ಸುತ್ತಮುತ್ತ ಸೋಮವಾರ ಸಂಜೆ ಸುರಿದ ಮಳೆ ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆಗೆ ತಂಪೆರೆದಿದೆ.

Advertisement

ಮಧ್ಯಾಹ್ನ 4 ಗಂಟೆಗೆ ಗುಡುಗು ಮಿಂಚಿನೊಂದಿಗೆ ಆರಂಭಗೊಂಡ ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಗಾಳಿಯ ಆರ್ಭಟ ಅಷ್ಟಾಗಿ ಕಂಡುಬಂದಿಲ್ಲ.

ಈ ಬಾರಿ ಬಿಸಿಲ ಝಳಕ್ಕೆ ಜನತೆ ತತ್ತರಿಸಿ ಹೋಗಿದ್ದರು. ಹೀಗಾಗಿ ಇಂದು ಸುರಿದ ಮಳೆಯಿಂದ ಜನ ಹರ್ಷಚಿತ್ತರಾಗಿದ್ದಾರೆ. ತೋಟಗಾರಿಕಾ ಬೆಳೆಗಳಿಗೂ ಈ ಮಳೆ ಅನುಕೂಲಕರವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಹಾನಿ ಆದ ವರದಿಯಾಗಿಲ್ಲ.

ಸಾಧಾರಣ ಮಳೆ

ತರೀಕೆರೆ: ತಾಲೂಕಿನ ಕೆಲವು ಭಾಗಗಳಲ್ಲಿ ಸೋಮವಾರ ಸಂಜೆ ವೇಳೆಗೆ ಭರಣಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಗೆಂಟ್ಟಿದ್ದ ಜನರಿಗೆ ಗಾಳಿ ಮಳೆಯಿಂದಾಗಿ ಜನರಲ್ಲಿ ಮಂದಹಾಸ ಮೂಡಿದೆ. ತಾಲೂಕಿನ ಕುಡ್ಲೂರು, ಕೊರಟಿಕೆರೆ ಗ್ರಾಮದಲ್ಲಿ ಜೋರಾದ ಮಳೆಯಾಗಿದೆ. ಸಿದ್ದರಹಳ್ಳಿ, ಸೀತಾಪುರ, ದುಗ್ಲಾಪುರ, ಎಲುಗೆರೆ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದೆ. ಪಿರುಮೇನಹಳ್ಳಿ, ಇಟ್ಟಿಗೆ, ಬೇಲೇನಹಳ್ಳಿ ಮತ್ತು ಎಂ.ಸಿ.ಹಳ್ಳಿ ಗ್ರಾಮಗಳಲ್ಲಿ ಜೋರಾಗಿ ಮಳೆ ಸುರಿದಿದೆ. ತಾಲೂಕಿನಲ್ಲಿ ಮಳೆಯಿಂದ ಯಾವುದೇ ಹಾನಿ ಆದ ಬಗ್ಗೆ ವರದಿಯಾಗಿಲ್ಲ.
ಮೂಡಿಗೆರೆಯಲ್ಲಿ ಮಳೆ: ಜನರಲ್ಲಿ ಸಂತಸ
ಮೂಡಿಗೆರೆ: ಪಟ್ಟಣ ಮತ್ತು ಸುತ್ತಮುತ್ತ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಮಲೆನಾಡಿನಲ್ಲಿ ಹಿಂದೆಂದೂ ಕಾಣದ ಬೇಸಿಗೆಯ ಬಿಸಿಲಿನ ತಾಪಕ್ಕೆ ಜನರು ಹೈರಾಣಾರಾಗಿದ್ದರು. ಈಗ ಒಂದು ವಾರದಿಂದೀಚೆಗೆ ಪ್ರತಿದಿನವೂ ಮೋಡ ಕವಿದ ವಾತಾವರಣ ಇರುತ್ತಿತ್ತು. ಜನರು ಸಹ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಬಂದಿರಲಿಲ್ಲ. ಸೋಮವಾರ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಮಳೆಯ ನಿರೀಕ್ಷೆಯಿಲ್ಲದಿರುವುದರಿಂದ ಪಟ್ಟಣಕ್ಕೆ ಆಗಮಿಸಿದ್ದ ಜನರು ಛತ್ರಿಯನ್ನು ತರದೇ ಬಂದಿದ್ದರಿಂದ ಕೆಲಕಾಲ ಪರದಾಡಬೇಕಾಯಿತು.

Advertisement

ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತ ಬಣಕಲ್, ಗೋಣೀಬೀಡು, ಮಾಕೋನಹಳ್ಳಿ ಮೊದಲಾದ ಭಾಗಗಳಲ್ಲೂ ಮಳೆ ಸುರಿದಿದ್ದು, ರೈತಾಪಿ ಜನರಿಗೂ ಮಳೆ ಸಂತಸ ತಂದಿದೆ. ತಮ್ಮ ತೋಟಗಳಿಗೆ ನೀರುಹಾಯಿಸುವ ಕೆಲಸವನ್ನು ಕಡಿಮೆ ಮಾಡಿದೆ.


Advertisement

Udayavani is now on Telegram. Click here to join our channel and stay updated with the latest news.

Next