Advertisement

“ಸೂಪರ್‌ ಪವರ್‌ ಭಾರತ’ಕ್ಕೆ ಕರ್ನಾಟಕದ ಕೊಡುಗೆ ಇರುತ್ತೆ

03:45 AM Jan 08, 2017 | |

ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಲಿದ್ದು, ಅದರಲ್ಲಿ ಕರ್ನಾಟಕದ ಕೊಡುಗೆಯೂ ಇರಲಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

Advertisement

ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರದ ಜನತೆಯಲ್ಲಿ ಶೇ.65ರಷ್ಟು ಮಂದಿ 35 ವರ್ಷದ ವಯೋಮಾನದವರಾಗಿದ್ದು , 2025ರ ವೇಳೆಗೆ ವಿಶ್ವದಲ್ಲೇ ಭಾರತವು ಯುವಸಮೂಹದ ದೇಶವಾಗಲಿದೆ. ಕರ್ನಾಟಕವೂ ಅದರಲ್ಲಿ ಭಾಗಿಯಾಗಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ನೀತಿಯನ್ನು ಜಾರಿಗೆ ತಂದಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನಿವಾಸಿ ಭಾರತೀಯರ ಪರವಾಗಿದೆ. ರಾಜ್ಯದಲ್ಲಿ ಉದ್ಯೋಗ, ಸಂಶೋಧನೆ, ಬಂಡವಾಳ ಹೂಡಿಕೆ ಮುಂತಾದ ಎಲ್ಲ ವಲಯದಲ್ಲೂ ವಿಫ‌ುಲ ಅವಕಾಶಗಳಿವೆ ಎಂದು ಹೇಳಿದರು.

ಪ್ರವಾಸಿ ಭಾರತೀಯ ದಿವಸ ಸಮಾವೇಶಕ್ಕೆ ಕರ್ನಾಟಕ ಆತಿಥ್ಯ ವಹಿಸಿದ್ದು ನನಗೆ ಸಂತೋಷ ತಂದಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಿದೆ. ಇಂದು ಜಗತ್ತು ಭಾರತ ಹಾಗೂ ಸಿಲಿಕಾನ್‌ ವ್ಯಾಲಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನತ್ತ ನೋಡುತ್ತಿದೆ. ಹೊರ ದೇಶದಲ್ಲಿ ನೆಲೆಸಿದ್ದ ಸಾಕಷ್ಟು ಭಾರತೀಯರು ಕರ್ನಾಟಕಕ್ಕೆ ಬಂದು ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ಬಂಡವಾಳ ಹೂಡಿಕೆಗೆ ಬೇಕಾದ ಎಲ್ಲ ರೀತಿಯ ಆನುಮತಿ, ನಿರಾಕ್ಷೇಪಣ ಪ್ರಮಾಣ ಪತ್ರ ಸೇರಿ ಅಗತ್ಯ ಸೇವೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಅನಿವಾಸಿ ಭಾರತೀಯರು ಎಲ್ಲೇ ಇರಲಿ ಅವರ ಹೃದಯ ಭಾರತಕ್ಕಾಗಿ ಸದಾ ಮಿಡಿಯುತ್ತದೆ. ಅನಿವಾಸಿ ಭಾರತೀಯರು ನಮ್ಮ ಆಸ್ತಿ ಸಹ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರವೂ ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂದು ಹೇಳಿದರು.

Advertisement

ರಾಜ್ಯ ಸರ್ಕಾರವು ಪ್ರತಿಯೊಬ್ಬರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ. ಅನಿವಾಸಿ ಭಾರತೀಯರನ್ನು ಅತಿಥಿಯಾಗಿ ಅಲ್ಲದೆ ಇಲ್ಲಿನ ನಿವಾಸಿಯಾಗಿಯೇ ಕಾಣುತ್ತದೆ. 21ನೇ ಶತಮಾನ ಭಾರತದ ಶತಮಾನವಾಗಿಸಲು ಎಲ್ಲರೂ ಒಟ್ಟುಗೂಡೋಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next