Advertisement

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಸ್ಮರಣೀಯ

04:25 PM Aug 16, 2017 | |

ಮಸ್ಕಿ: ಅನೇಕ ಹೋರಾಟಗಾರರ ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯಲಭಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಕೊಡುಗೆ ಮರೆಯುವಂತಿಲ್ಲ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು. ತಾಲೂಕು ಆಡಳಿತದಿಂದ ಇಲ್ಲಿನ ಸರ್ಕಾರಿ ಕೇಂದ್ರ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಸುಭಾಸಚಂದ್ರ ಬೋಸ್‌, ಜವಾಹಾರಲಾಲ್‌ ನೆಹರು ಮುಂತಾದ ಮಹನೀಯರ ಕೊಡುಗೆ ಮರೆಯುವಂತಿಲ್ಲ. ಮುಂದಿನ ಪೀಳಿಗೆಯವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿವಳಿಕೆ ನೀಡುವ ಜೊತೆಗೆ ಹಾಗೂ ದೇಶಭಕ್ತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು. ಸತತ ಮೂರು ವರ್ಷಗಳಿಂದ ಭೀಕರ ಬರಗಾಲ ಎದುರಾಗಿದ್ದು, ರೈತರು ಸೇರಿದಂತೆ ಬಹುತೇಕ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಮಾತ್ರ ತುಂಬಿದ್ದು, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಸರಕಾರಕ್ಕೆ ಇದು ಸವಾಲಾಗಿ ನಿಲ್ಲಲಿದೆ. ಆದರೂ ಎಲ್ಲರೂ ಕೂಡಿ ಇದನ್ನು ಎದುರಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು. ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ
ಇರುವುದರಿಂದ ಆ.13ರಂದು ನಡೆದ ಐಸಿಸಿ ಸಭೆಯಲ್ಲಿ ಕೇವಲ ಕುಡಿಯುವುದಕ್ಕೆ ಮಾತ್ರ ನೀರು ಬಿಡಲು ಚರ್ಚಿಸಲಾಗಿದೆ. ಒಂದು ವೇಳೆ ಮಳೆಯಾಗಿ ನೀರು ಸಂಗ್ರಹವಾದಲ್ಲಿ ಬೆಳೆಗಳಿಗೆ ನೀರು ಬಿಡಲು ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ, ಪಿಎಸ್‌ಐ ಅಮರೇಶ ಹುಬ್ಬಳ್ಳಿ, ಕೆ. ವೀರನಗೌಡ, ಮಹಾದೇವಪ್ಪಗೌಡ, ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಎಚ್‌.ಬಿ. ಮುರಾರಿ, ಡಾ| ಶಿವಶರಣಪ್ಪ ಇತ್ಲಿ, ಡಾ| ಬಿ.ಎಸ್‌.ದಿವಟರ, ಯಲ್ಲೋಜಿರಾವ್‌ ಕೋರೆಕರ್‌, ಮಂಜುನಾಥ ಪಾಟೀಲ, ಬಸನಗೌಡ ಪೊಲೀಸ್‌ ಪಾಟೀಲ, ದೊಡ್ಡಪ್ಪ ಕಡಬೂರು, ಬಸಪ್ಪ ಬ್ಯಾಳಿ, ಪುರಸಭೆ ಸದಸ್ಯರಾದ ಸುರೇಶ ಹರಸೂರ, ಎಂ.ಅಮರೇಶ, ರೇಣುಕಾ ಆನಂದ ವೀರಾಪುರ ಸೇರಿದಂತೆ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ: ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧೆಡೆ ಆಚರಣೆ: ಶಾಸಕರ ಕಾರ್ಯಾಲಯ, ಪುರಸಭೆ, ತಹಶೀಲ್ದಾರ ಕಚೇರಿ, ಪೊಲೀಸ್‌ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ರೈತ ಸೇವಾ ಸಹಕಾರಿ ಸಂಘ, ದೈವದ ಕಟ್ಟೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next