ಗುರುಮಠಕಲ್: ಬಿಡುವಿಲ್ಲದೇ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆ ಎತ್ತಿ ಹಿಡಿಯುವುದಕ್ಕಾಗಿ ಪೌರ ಕಾರ್ಮಿಕರ ದಿನ ಆಚರಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪರಿಸರ ಸ್ವತ್ಛತೆಯೊಂದಿಗೆ ಜನರ ಮನೋಭಾವ ಬದಲಾಯಿಸುವುದು ಸ್ವತ್ಛ ಭಾರತದ ಪರಿಕಲ್ಪನೆ. ಸ್ವಚ್ಛತೆ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು. ಜನರ ಮನಸ್ಥಿತಿ ಪರಿವರ್ತನೆ ಆಗಬೇಕು. ಪರಿಸರ ಸ್ವತ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ದೊಡ್ಡದು ಎಂದರು.
ರೋಗ-ರುಜಿನುಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡಲು ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಜನರು ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ಪೌರ ಕಾರ್ಮಿಕರನ್ನು ಪುರಸಭೆ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕಿಡಿ, ಉಪ ತಹಶೀಲ್ದಾರ್ ನರಸಿಂಹ ಸ್ವಾಮಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ ನೀರೆಟಿ, ಪುರಸಭೆ ಸದಸ್ಯರಾದ ಅಶೋಕ ಕಲಾಲ್, ಬಾಬುತಲಾರಿ, ನರಸಪ್ಪ ಗಡ್ಡಲ್, ಕೃಷ್ಣ ಮೇದ, ಸೀರಜ್ ಚಿಂತಕುಂಟಿ, ಸಯ್ಯದ್ ಅನ್ವರ್, ನವಿತ, ಪವಿತ್ರಾ ಮನ್ನೆ, ರವೀಂದ್ರರೆಡ್ಡಿ ಗವಿನೋಳ, ಅಂಬದಾಸ ಜೀತ್ರೆ, ಫಯಾಜ್, ಪುರಸಭೆ ಸಿಬ್ಬಂದಿ ಆಂಜನೇಯಲು, ಹಣಮಂತು ಇದ್ದರು.