Advertisement

ಸ್ಮಾರ್ಟ್‌ ಪಾರ್ಕಿಂಗ್‌ಗೆ ಗುತ್ತಿಗೆದಾರರ ನಿಗದಿ

11:23 AM Oct 26, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿರುವ ಪಾರ್ಕಿಂಗ್‌ ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ನಗರದ 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌  ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದು, ಇದರಿಂದಾಗಿ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ವರಮಾನ ಬರಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.

Advertisement

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಲುಗಡೆ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದನ್ನು
ಲಾಭವಾಗಿಸಿಕೊಂಡಿರುವ ಕೆಲ ಖಾಸಗಿ ಯವರು ಅನಧಿಕೃತವಾಗಿ ಸವಾರರಿಂದ ಪಾರ್ಕಿಂಗ್‌ ಶುಲ್ಕ ಸಂಗ್ರಹ ಮಾಡುತ್ತಿದ್ದು, ಪಾಲಿಕೆಗೆ ನಷ್ಟ ಉಂಟಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ನೂತನ ಪಾರ್ಕಿಂಗ್‌ ನೀತಿ ಜಾರಿಗೊಳಿಸಿರುವ ಬಿಬಿಎಂಪಿ ಯೋಜನೆ ಅನುಷ್ಠಾನಗೊಳಿಸಲು ಗುತ್ತಿಗೆದಾರರನ್ನು ಗುರುತಿಸಿದೆ.

ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಪೇ ಅಂಡ್‌ ಪಾರ್ಕ್‌ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಮುಂದಾಗಿದ್ದು, ಯೋಜನೆ ಜಾರಿಗೆ ಮೊದಲ ಹಂತದಲ್ಲಿ ನಗರದ 85 ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಾಹನ ಸವಾರರು ಪಾರ್ಕಿಂಗ್‌ ಶುಲ್ಕವನ್ನು ನಗದು ಬದಲಿಗೆ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕವೇ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ವಾಹನಗಳು ಒಳ ಬರಲು ಹಾಗೂ ಹೊರ ಹೋಗುವ ಮಾಹಿತಿ ತಿಳಿಯಲು ಸೆನ್ಸಾರ್‌ ವ್ಯವಸ್ಥೆ ಅಳವಡಿಸಲಿದೆ. 

ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನು ಬಿಲ್ಡಿಂಗ್‌ ಕಂಟ್ರೋಲ್‌ ಸಲ್ಯೂಷನ್ಸ್‌ ಇಂಡಿಯಾ ಪ್ರೈವೇಟ್‌ ಲಿ. ಸಂಸ್ಥೆಗೆ
ನೀಡಲಾಗಿದ್ದು, ಸಂಸ್ಥೆಯು 10 ವರ್ಷಗಳ ಕಾಲ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಣೆ ಮಾಡಲಿದ್ದು, ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ.ಗಳಂತೆ 10 ವರ್ಷಕ್ಕೆ 315.60 ಕೋಟಿ ಪಾವತಿಸಲಿದ್ದಾರೆ. 

ನಗರದ ಎರಡು ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಶುಲ್ಕ ಸಂಗ್ರಹ ಹಾಗೂ ಪಾರ್ಕಿಂಗ್‌ ಟಿಕೇಟ್‌ ನೀಡುವ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಸೆನ್ಸಾರ್‌ಗಳನ್ನು ಅಳವಡಿಸುವುದರಿಂದಾಗಿ ವಾಹನ ನಿಲುಗಡೆಗೆ ಗುರುತಿಸಿರುವ ಸ್ಥಳಕ್ಕೆ ಬಂದ ಕೂಡಲೇ ಟಿಕೆಟ್‌ ಬರಲಿದೆ. 

Advertisement

ಏಳು ಸಾವಿರಕ್ಕೂ ಅಧಿಕ ವಾಹನಗಳ ಪಾರ್ಕಿಂಗ್‌ ಬಿಬಿಎಂಪಿ ಅಧಿಕಾರಿಗಳು 85 ರಸ್ತೆಗಳನ್ನು ಎ (ಪ್ರೀಮಿಯಂ),  (ವಾಣಿಜ್ಯ) ಹಾಗೂ ಸಿ (ಸಾಮಾನ್ಯ) ಎಂದು ಮೂರು ಭಾಗಗಳಾಗಿ ಮಾಡಲಾಗಿದ್ದು, ಅದಕ್ಕನುಗುಣವಾಗಿ ಪಾರ್ಕಿಂಗ್‌ ಶುಲ್ಕ ನಿಗದಿಪಡಿಸಲಾಗಿದೆ. ಅದರಂತೆ ಎ ವರ್ಗದಲ್ಲಿ 14 ರಸ್ತೆಗಳು, ಬಿ ವರ್ಗದಲ್ಲಿ 46 ಮತ್ತು ಸಿ ವರ್ಗದಲ್ಲಿ 25 ರಸ್ತೆಗಳಿದ್ದು, ಒಟ್ಟು 85 ರಸ್ತೆಗಳಲ್ಲಿ ಸುಮಾರು 2,500 ಕಾರು ಹಾಗೂ 5 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗಳಿಗೆ ಅವಕಾಶ ನೀಡಲಾಗುತ್ತಿದೆ. 

ಮಹಿಳೆಯರಿಗೆ ಪಾರ್ಕಿಂಗ್‌ನಲ್ಲಿ ಶೇ.20ರಷ್ಟು ಮೀಸಲಾತಿ ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಜಾರಿಗೊಳಿಸುತ್ತಿರುವ ಸ್ಮಾರ್ಟ್‌ಪಾರ್ಕಿಂಗ್‌ ನಲ್ಲಿ ಸುರಕ್ಷತಾ ದೃಷ್ಟಿಯಿಂದ ಮಹಿಳೆಯರಿಗೆ ಶೇ.20ರಷ್ಟು ಮೀಸಲಾತಿ ನೀಡಲಾಗುವುದು. ಪ್ರಾಯೋಗಿಕವಾಗಿ ಚರ್ಚ್‌ಸ್ಟ್ರೀಟ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next