ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸ್ವತಃ ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾದಸಿದ ಪ್ರಸಂಗ ಗುರುವಾರ ನಡೆಯಿತು.
ಮಂದಿರ, ಮಸೀದಿಗಳನ್ನು ಕಟ್ಟುವುದು ಸರಕಾರದ ಕೆಲಸವಲ್ಲ; ರಾಜ್ಯದ ಜನ ಸುಖವಾಗಿದ್ದರೆ ಅವರೇ ಮಂದಿರ, ಮಸೀದಿಗಳನ್ನು ಕಟ್ಟಿಕೊಳ್ಳುತ್ತಾರೆ. ಹಾಗಾಗಿ ಸರಕಾರದ ಈ ಕಾರ್ಯಕ್ರಮಕ್ಕೆ ನನ್ನ ಸಹಮತ ಇಲ್ಲ ಎಂದು ಬಿಜೆಪಿಯ ಆಯನೂರು ಮಂಜುನಾಥ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಆಯವ್ಯಯದಲ್ಲಿ ರಾಮನಗರದಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಇದಕ್ಕೆ ನನ್ನ ಸಹಮತ ಇಲ್ಲ. ಏಕೆಂದರೆ ಮಂದಿರ, ಮಸೀದಿಗಳನ್ನು ನಿರ್ಮಿಸುವುದು ಸರಕಾರದ ಕೆಲಸವಲ್ಲ. ಜನರನ್ನು ಸುಖವಾಗಿಟ್ಟರೆ ಅವರೇ ಮಂದಿರ ಅಥವಾ ಮಸೀದಿಗಳನ್ನು ಕಟ್ಟಿಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್‌ನ ಪಿ.ಆರ್. ರಮೇಶ್ ಇದಕ್ಕೆ ದನಿಗೂಡಿಸಿ, ಊರುಗಳಲ್ಲಿ ಬೇಕಾದಷ್ಟು ರಾಮ ಮಂದಿರಗಳು, ಭಜನ ಮಂದಿರಗಳಿವೆ. ಸರಕಾರ ಬೇಕಿದ್ದರೆ ಅವುಗಳಿಗೆ ಅನುದಾನ ನೀಡಲಿ. ಇದರಿಂದ ಸೌಲಭ್ಯಗಳು ಹೆಚ್ಚುವುದರ ಜತೆಗೆ ಸ್ಥಳೀಯರಿಗೆ ಅನುಕೂಲ ಆಗುತ್ತದೆ. ಅದುಬಿಟ್ಟು ಯಾವಾಗಲೂ ರಣಹದ್ದುಗಳು ಬೀಡುಬಿಟ್ಟ ರಾಮನಗರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಿಸಲು ಸರಕಾರವೇ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.