Advertisement

ಮಾಸಾಶನಕ್ಕಾಗಿ ತಮಟೆ ಕಲಾವಿದರ ನಿರಂತರ ಹೋರಾಟ

05:54 PM Sep 24, 2021 | Team Udayavani |

ಮಧುಗಿರಿ: ನಾದಬ್ರಹ್ಮವೇ ಈ ತಮಟೆ. ಅನಾದಿ ಕಾಲದಿಂದಲೂ ಈ ಶಬ್ದಾಸ್ತ್ರವು ಪುರಾತನ ಯುಗದಿಂದಲೂ ಶಬ್ದ ಮಾಡುತ್ತಲೇ ಇದೆ. ಅದು ಶುಭ ಸಮಾರಂಭವಾಗಲಿ ಅಥವಾ ಅಶುಭ ಸಭೆಯಾಗಲಿ ಈ ತಮಟೆಯೇ ಸದ್ದು ಮಾಡುತ್ತಿತ್ತು. ಆದರೆ, ಇಂದು ಈ ವಾದ್ಯವನ್ನು ನುಡಿಸುವ ಕಲೆ ಕೇವಲ ಒಂದೇ ಜನಾಂಗಕ್ಕೆ ಸೀಮಿತವಾಗಿದ್ದು, ಅ ಸಮುದಾಯ ಆರ್ಥಿಕ, ಸಾಮಾಜಿಕ ಸಮಸ್ಯೆಯಿಂದ ಬಳಲುತ್ತಿದೆ. ಇವರೆ ಮಾದಿಗ ಸಮುದಾಯದ ತಮಟೆ ಕಲಾವಿದರು.

Advertisement

ಇಂದು ತಮಟೆ ವಾದ್ಯ ಈ ಸಮುದಾಯದ ಅವಿಭಾಜ್ಯ ಅಂಗವಾಗಿದೆ. ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿದೆ. ಇಂತಹ ವಾದ್ಯವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ರಾಜ್ಯದಲ್ಲಿ ತುಳಿತಕ್ಕೆ ಒಳಗಾಗಿದ್ದು, ಇವರ ಕೂಗನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನೆರೆಯ ಆಂಧ್ರ ಸರ್ಕಾರ ಈಗಾಗಲೇ ಈ ತಮಟೆ ಕಲಾವಿದರಿಗೆ ತಿಂಗಳಿಗೆ 3 ಸಾವಿರ ರೂ. ಮಾಸಾಶನ ಘೋಷಣೆ ಮಾಡಿದ್ದು, ನಮ್ಮ ರಾಜ್ಯದಲ್ಲೂ ಈ ಯೋಜನೆ ಅನುಷ್ಠಾನವಾಗಬೇಕಿದೆ.

ತಮಟೆಯ ವಿಶೇಷತೆ: ಮೃತ ಪ್ರಾಣಿಗಳ ಚರ್ಮದಿಂದ ತಯಾರಿಸಿದ ಈ ವಾದ್ಯವನ್ನು ಪುರಾತನ ಕಾಲದಿಂದ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗಿದೆ. ಎಲ್ಲಾ ಸಭೆ ಸಮಾರಂಭದಲ್ಲಿ ಇದಕ್ಕೆ ಆದ್ಯತೆ ನೀಡಲಾಗುತ್ತಿದೆ. ಬದಲಾದ ಕಾಲಮಾನ ಹಾಗೂ ಆಧುನಿಕತೆ ನೆರಳಲ್ಲಿ ಈ ವಾದ್ಯವನ್ನು ಕಡೆಗಣಿಸಲಾಗುತ್ತಿದ್ದು, ಇದನ್ನೇ ನಂಬಿ ಬದುಕುತ್ತಿರುವ ಮಾದಿಗ ಸಮುದಾಯದ ಲಕ್ಷಾಂತರ ಜನತೆಗೆ ಸಂಸಾರ ಸಾಗಿಸಲು ಸಹ ಕಷ್ಟಪಡುವಂತಾಗಿದೆ. ಇಂದಿನ ಬೆಲೆ ಏರಿಕೆ ಹಾಗೂ ಲಾಕ್‌ಡೌನ್‌ ಸಮಯದಲ್ಲೂ ಯಾವುದೇ ಸಭೆಗಳು, ಜಾತ್ರೆಗಳು ನಡೆಯದೆ ವಾದ್ಯದ ಘಮಲು ಬಾಡುತ್ತಿದ್ದು, ಯಾವುದೇ ಭೂಮಿ, ಆಧಾರ ಹಾಗೂ ಆರ್ಥಿಕ ಚೈತನ್ಯವಿಲ್ಲದ ಕಲಾವಿದರ ಮನೆಯ ಅನ್ನದ ಮಡಿಕೆ ಬರಿದಾಗಿದೆ.

ಇದನ್ನೂ ಓದಿ:ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ರಾಜ್ಯಾದ್ಯಂತ ನಡೆದ ಹೋರಾಟಗಳು: ಮಧುಗಿರಿಯ ಚಳವಳಿ ಶ್ರೀನಿವಾಸ್‌ ನೇತೃತ್ವದಲ್ಲಿ ಮಾತಂಗಿ ಕಲಾ ಮತ್ತು ಸಾಂಸ್ಕೃತಿಕ ಬಳಗ ಎಂಬ ವೇದಿಕೆಯ ಮೂಲಕ ರಾಜ್ಯದ ಎಲ್ಲೆಡೆ ಹೋರಾಟ ಹಮ್ಮಿಕೊಂಡಿದ್ದು, ಹತ್ತಾರು ಹೋರಾಟಗಳು ನಡೆದಿದ್ದವು. ರಾಜ್ಯದ ವಿವಿಧೆಡೆಯ ಸರಿಸುಮಾರು ಲಕ್ಷದಷ್ಟಿರುವ ಈ ತಮಟೆ ಕಲಾವಿದರು, ಮಧುಗಿರಿಯಲ್ಲಿ 4 ಸಾವಿರದಷ್ಟಿದ್ದು, ಹಲವು ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಆದರೆ, ಸಮಿತಿಯ ರಾಜ್ಯಾಧ್ಯಕ್ಷ ಚಳವಳಿ ಶ್ರೀನಿವಾಸ್‌ ಸಾವಿನಿಂದ ಈ ಹೋರಾಟದ ಜೀವಕ್ಕೆ ಬರಸಿಡಿಲು ಬಡಿದಂತಾಗಿದ್ದು, ಸಾವಿರಾರು ತಮಟೆ ಕಲಾವಿದರ ಸಂಸಾರ ಹಾಗೂ ಸಮಸ್ಯೆಗೆ ಮುಕ್ತಿ ಸಿಗದಂತಾಗಿದ್ದು, ದಾರಿ ಕಾಣದಾಗಿದೆ.

Advertisement

ತಮಟೆ ಕಲಾವಿದರ ಬೇಡಿಕೆಗಳು: ಪ್ರತಿ ತಮಟೆ ಕಲಾವಿದನಿಗೆ 3 ಸಾವಿರ ಮಾಸಾಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯ, ರಾಜ್ಯ ಸರ್ಕಾರದ ವಿವಿಧ ಕ್ಷೇತ್ರದ ಪ್ರಶಸ್ತಿಗೆ ತಮಟೆ ಕಲಾವಿದರನ್ನು ಪರಿಗಣಿಸುವುದು, ಜಾನಪದ ಸಾಹಿತ್ಯ ಅಕಾಡಮಿಯ ಸ್ಥಾನಮಾನ ಕಲ್ಪಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಹತ್ತಾರು ವರ್ಷದಿಂದ ಮಾಡುತ್ತಿದ್ದ ಹೋರಾಟ, ಶ್ರೀನಿವಾಸ್‌ ಸಾವಿನಿಂದ ಮೂಲೆಗೆ ಸೇರಿದ್ದು, ಸರ್ಕಾರ ಈ ಬಡ ನೊಂದ ಜೀವಗಳ ಕೈಹಿಡಬೇಕೆಂದು ರಾಜ್ಯಾದ್ಯಂತ ಮಾದಿಗ ಸಮುದಾಯದ ಒತ್ತಾಯವಾಗಿದೆ. ಆದರೆ, ಸರ್ಕಾರದ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

ನಮ್ಮ ಕಲೆ, ಸಂಸ್ಕೃತಿಗೆ ಸರ್ಕಾರಗಳು ಬೆಲೆ ನೀಡಿಲ್ಲ. ಈ ಸರ್ಕಾರವಾದರೂ ನಮ್ಮ ಕೂಗಿಗೆ ಸ್ಪಂದಿಸಿದರೆ, ಸಾವಿರಾರು ತಮಟೆ ಕಲಾವಿದರ ಬದುಕು ಬೀದಿಗೆ ಬೀಳದೆ ತುತ್ತು ಅನ್ನ ತಿಂದು ಬದುಕುತ್ತಾರೆ.
-ಐಡಿಹಳ್ಳಿ ಬಾಲಕೃಷ್ಣ, ರಾಜ್ಯ
ಕಾರ್ಯದರ್ಶಿ, ತಮಟೆ ಕಲಾವಿದರ ಸಂಘ

ನನ್ನ ಮತಕ್ಷೇತ್ರದಲ್ಲಿ 4ರಿಂದ 5 ಸಾವಿರದಷ್ಟು ತಮಟೆ ಕಲಾವಿದರಿದ್ದಾರೆ. ಈ ಕಲೆ ಧರ್ಮದ ಜೊತೆ ಹುಟ್ಟಿದ್ದು, ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಇದನ್ನೇ ನಂಬಿರುವ ಈ ಸಮುದಾಯದ ಕೈಹಿಡಿಯುವುದು ಸರ್ಕಾರದ ಕರ್ತವ್ಯ. ಸರ್ಕಾರ ಕೂಡಲೇ ಈ ಕಲಾವಿದರಿಗೆ ಮಾಸಾಶನ ನೀಡಲು ಮುಂದಾಗಬೇಕು. ಈ ವಿಚಾರವಾಗಿ ಅವಕಾಶ ಸಿಕ್ಕರೆ ಸದನದಲ್ಲಿ ಧ್ವನಿಯಾಗುತ್ತೇನೆ.
 -ಎಂ.ವಿ.ವೀರಭದ್ರಯ್ಯ, ಶಾಸಕ, ಮಧುಗಿರಿ

– ಮಧುಗಿರಿ ಸತೀಶ್‌

 

Advertisement

Udayavani is now on Telegram. Click here to join our channel and stay updated with the latest news.

Next