ಬೆಂಗಳೂರು: ಚಿಂತಕ ಪ್ರೊ ಕೆ.ಎಸ್.ಭಗವಾನ್ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 730 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಆರೋಪಿಗಳಾದ ಮದ್ದೂರಿನ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಶಿಕಾರಿಪುರದ ಪ್ರವೀಣ್ ಕುಮಾರ್, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಹಾಗೂ ವಿಜಯಪುರದ ಮನೋಹರ್ ಯಡವೆ, ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದು, ಈ ಕುರಿತು ನವೀನ್ ಕುಮಾರ್, ಶ್ರೀರಂಗಪಟ್ಟಣದ ಅನಿಲ್ ಕುಮಾರ್ ಸೇರಿ 160 ಸಾಕ್ಷಿಗಳ ಹೇಳಿಕೆ ಹಾಗೂ ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದ ವರದಿ ಸೇರಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಫೆ.18ರಂದು ಮೆಜೆಸ್ಟಿಕ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದ ಮೇಲೆ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಇತರೆ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಐಡೆಂಟಿಫಿಕೇಷನ್ ಪರೇಡ್’: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂ ಪರ ಸಂಘಟನೆ ಮುಖಂಡ ಮೋಹನ್ ನಾಯಕ್‌ನನ್ನು ಶನಿವಾರ ಸಂಜೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದು, “ಐಡೆಂಟಿಫಿಕೇಷನ್ ಪರೇಡ್’ ನಡೆಸಲಾಗಿದೆ.
ಈಗಾಗಲೇ ಪ್ರಕರಣದಲ್ಲಿ ಬಂಧಿತರಾಗಿರುವ ನವೀನ್ ಕುಮಾರ್, ಪ್ರವೀಣ್ ಕುಮಾರ್, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಮನೋಹರ್ ಯಡವೆ ಹಾಗೂ ಶೂಟರ್ ಪರಶುರಾಮ್ ವಾಗ್ಮೋರೆಯನ್ನು ಸಾಲಾಗಿ ನಿಲ್ಲಿಸಿ ಪರೇಡ್ ಮಾಡಲಾಗಿದೆ. ಈ ವೇಳೆ ಪ್ರವೀಣ್ ಕುಮಾರ್ ಹಾಗೂ ನವೀನ್ ಕುಮಾರ್‌ನನ್ನು ಮೋಹನ್ ನಾಯಕ್ ಗುರುತಿಸಿದ್ದಾನೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಹಂತಕರು ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಮೋಹನ್ ನಾಯಕ್‌ನನ್ನು ಗುರುವಾರ ಬಂಧಿಸಲಾಗಿತ್ತು.