Advertisement

ಕರ್ನಾಟಕವನ್ನು ಕಾಶ್ಮೀರನ್ನಾಗಿಸಿದ ಕಾಂಗ್ರೆಸ್‌

04:23 PM Mar 02, 2018 | Team Udayavani |

ರಾಯಚೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ದುರಾಡಳಿತದಿಂದ ಕರ್ನಾಟಕದಲ್ಲಿ ಕಾಶ್ಮೀರದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಆರೋಪಿಸಿದರು.

Advertisement

ನಗರದ ಹೊರ ವಲಯದಲ್ಲಿರುವ ಹರ್ಷಿತಾ ಗಾರ್ಡ್‌ನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ಹಾಗೂ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ಗೆ ದೇಶದ ಹಿತರಕ್ಷಣೆ ಬೇಕಿಲ್ಲ. ಕೇವಲ ವೋಟ್‌ಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆದರೂ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯನವರು ಹೋದಲೆಲ್ಲ ರಾಜ್ಯ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳುತ್ತಾರೆ. ಆದರೆ, ಗೂಂಡಾಗಿರಿ, ಭ್ರಷ್ಟಾಚಾರ, ರೈತರ ಆತ್ಮಹತ್ಯೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಾ.13ರಂದು ರಾಯಚೂರು ನಗರಕ್ಕೆ ಆಗಮಿಸಲಿದ್ದು, ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಈ ವೇಳೆ ರಾಜ್ಯ ಬಿಜೆಪಿಯ ಶಕ್ತಿ ಪ್ರದರ್ಶಿಸಬೇಕಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಬೇಕು. ಆ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದರು.

ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕಿದೆ. ಹಿಂದುಳಿದ ವರ್ಗಗಳ 36 ಸಮಾಜಗಳಿಗೆ ನೀಡಿರುವ 96 ಕೋಟಿ ಅನುದಾನ ಬಗ್ಗೆ ಪ್ರತಿಯೊಬ್ಬರಿಗೆ ತಿಳಿಸುವ ಕೆಲಸ ಪಕ್ಷದ ಕಾರ್ಯಕರ್ತರಿಂದ ನಡೆಯಬೇಕು ಎಂದರು. 

Advertisement

ಹಿಂದುಳಿದ ವರ್ಗಗಳ ಪ್ರಗತಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮಾವೇಶಗಳನ್ನು ಆಯೋಜಿಸುತ್ತಿದ್ದು, ಮೋರ್ಚಾದ ಮುಖಂಡರು ಸಮಾವೇಶದ  ಯಶಸ್ವಿಗೆ ಶ್ರಮಿಸಬೇಕು ಎಂದರು.

ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಜನರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಬಡವರಿಗೆ, ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸ ಇನ್ನೂ ಮಾಡಿಲ್ಲ. ತಾಂತ್ರಿಕ ತೊಂದರೆ ಎಂದು ಹೇಳಿಕೊಂಡೆ ಐದು ವರ್ಷ ಕಳೆದಿದ್ದಾರೆ. ಬಗರ್‌ ಹುಕುಂ ಸಾಗುವಳಿ ಭೂಮಿಗೆ ಹಕ್ಕು ನೀಡಲು ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಶಾಸಕರು ಸಭೆಯನ್ನೆ ನಡೆಸಿಲ್ಲ ಎಂದು ಕಂದಾಯ ಸಚಿವರು ವಿಧಾನ ಮಂಡಲದಲ್ಲಿ ಹೇಳಿದ್ದಾರೆ. ಇಂಥ ಸರ್ಕಾರವನ್ನು ಹಿಂದುಳಿದ ವರ್ಗದವರು ಹೇಗೆ ನಂಬಲು ಸಾಧ್ಯ ಎಂದರು.

ಮೋರ್ಚಾದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ, ಹಿರಿಯ ಮುಖಂಡರಾದ ಎನ್‌.ಶಂಕ್ರಪ್ಪ, ಎ. ಪಾಪಾರೆಡ್ಡಿ, ರಘುನಾಥ ಮಲ್ಕಾಪುರೆ, ಕೋಟಶ್ರೀನಿವಾಸ ಪೂಜಾರಿ, ದೊಡ್ಡ ಬಸವರಾಜ ಸೋಮಣ್ಣ, ಲಕ್ಷ್ಮಣ, ರಾಮರಾವ್‌, ಕಿರಣ ಕುಮಾರ, ವಿರುಪಾಕ್ಷಪ್ಪ, ಆದಿಮನಿ ವೀರಲಕ್ಷ್ಮೀ, ಶಂಕರರೆಡ್ಡಿ, ಎ. ಚಂದ್ರಶೇಖರ ಇತರರು ಪಾಲ್ಗೊಂಡಿದ್ದರು.

ರಾಜಕಾರಣ ಮಾಡಲುಬಂದಿದ್ದು ಮಂಡಕ್ಕಿ ತಿನ್ನಕ್ಕಲ್ಲ
ರಾಯಚೂರು: ಪಕ್ಷ ಹಾಗೂ ರಾಷ್ಟ್ರ ನಿಷ್ಠೆ ಹೊಂದಿದವರನ್ನು ಗಮನಿಸಿ ಟಿಕೆಟ್‌ ನೀಡಲಾಗುವುದು. ನಾವೂ ರಾಜಕಾರಣ ಮಾಡಲು ಬಂದಿದ್ದೇವೆ ಹೊರತು ಮಂಡಕ್ಕಿ ತಿನ್ನಲಿಕ್ಕಲ್ಲ ಎಂದು ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೆ.ಎಸ್‌ ಈಶ್ವರಪ ಪ್ರತಿಪಕ್ಷಗಳಿಗೆ ಟಾಂಗ್‌ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಾತಿ ಆಧಾರದ ಮೇಲೆ ಟಿಕೆಟ್‌ ನೀಡಲ್ಲ. ಜಾತಿ ಆಧಾರದ ಮೇಲೆ ಸ್ಥಾನಮಾನ ನೀಡಿಲ್ಲ. ರಾಷ್ಟ್ರ ಹಾಗೂ ಪಕ್ಷ ನಿಷ್ಠೆ ಗಮನಿಸುತ್ತಿದೆ. ಈ ಮಾನದಂಡದಲ್ಲಿ ಎಲ್ಲ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಸಿಗಲಿದೆ ಎಂದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಹಿಂದುಳಿದ ವರ್ಗಗಳ ಮತಗಳನ್ನು ಪಡೆಯಿತೇ ವಿನಃ ಆ ಸಮುದಾಯಗಳ ಪ್ರಗತಿಗೆ ಶ್ರಮಿಸಲಿಲ್ಲ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದರು. ಜಾತಿ ಸಮೀಕ್ಷೆ ಬಿಡುಗಡೆಗೊಳಿಸಿಲ್ಲ. ಹಿಂದುಳಿದ ವರ್ಗಗಳ ವಾಸಿಸುವ ನಿವೇಶನಗಳ ಹಾಗೂ ಬಗರ್‌ ಹುಕ್ಕಂ ಸಾಗುವಳಿದಾರರಿಗೆ ಪತ್ರ ನೀಡಲು ಸಾಧ್ಯವಾಗಿಲ್ಲ. ಆದರೆ ಹಿಂದುಳಿದ ವರ್ಗಗಳ ಮಂದಿರ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರ್ಕಾರದ ಅವ ಧಿಯಲ್ಲಿ ಅನುದಾನ ನೀಡಲಾಗಿತ್ತು. ಹಿಂದುಳಿದ ವರ್ಗಗಳ ಪ್ರದೇಶಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿತ್ತು ಎಂದರು. ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಸೂಚಿಸಿದ್ದು, ಮಾ.10ರಂದು ಕೂಡಲಸಂಗಮ ಹಾಗೂ 25ರಂದು ಕಾಗಿನೆಲೆಯಲ್ಲಿ ಹಿಂದುಳಿದ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶಕ್ಕೆ ಅಮಿತ್‌ ಶಾ ಚಾಲನೆ ನೀಡುವರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next