Advertisement

ಕಾಂಗ್ರೆಸ್‌ ಮುಗಿಸಲು ಸುಪಾರಿ ಪಡೆದಿರುವ ಸಿಎಂ

11:00 AM Jan 28, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪಾರಿ ಪಡೆದಿದ್ದಾರೆ. ಈ
ಕಾರಣಕ್ಕಾಗಿಯೇ ಅವರು ಮುಗಟಛಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಿಹಾದಿ ಸಂಘಟನೆಗಳ ಕಾರ್ಯಕರ್ತರ ಕೇಸ್‌ಗಳನ್ನು ವಾಪಸ್‌ ಪಡೆದು ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ ಎಂದು ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ವೋಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ಮೊದಲಿನಿಂತಲೂ ಜಿಹಾದಿ ಸಂಘಟನೆಗಳನ್ನು ಕಾಂಗ್ರೆಸ್‌ ಬೆಂಬಲಿಸಿಕೊಂಡು ಬಂದಿದ್ದರಿಂದಲೇ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದ್ದ ಪಕ್ಷ ಇಂದು 44 ಸ್ಥಾನಕ್ಕೆ ಇಳಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತೀಯ ಗಲಭೆಗಳಲ್ಲಿ ಶಾಮೀಲಾಗಿರುವ ಅಲ್ಪಸಂಖ್ಯಾತರ ಕೇಸ್‌ಗಳನ್ನು ಮಾತ್ರ
ವಾಪಸ್‌ ಪಡೆದು ರಾಜ್ಯದಲ್ಲಿ ಕಾಂಗ್ರೆಸ್‌ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಕೊಂಡಿದೆ ಎಂದು ಕಿಡಿಕಾರಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಮು ಗಲಭೆಗಳಲ್ಲಿ ಅಲ್ಪಸಂಖ್ಯಾತರು ಮಾತ್ರವಲ್ಲ ಹಿಂದೂಗಳ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ಎರಡೂ ಕೋಮಿನ 1255 ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಅವರಲ್ಲಿ 578 ಹಿಂದೂಗಳಿದ್ದಾರೆ. ಹೀಗಿರುವಾಗ ಕೇವಲ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮಾತ್ರ ಕೈಬಿಡಲು ಸರ್ಕಾರ ಮುಂದಾಗಿದೆ ಎಂದರೆ ಹಿಂದೂಗಳು ಏನು ತಪ್ಪು ಮಾಡಿದ್ದಾರೆ? ನೀವು ಅಧಿಕಾರಕ್ಕೆ ಬರಲು ಹಿಂದೂಗಳು ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದರು.

2015ರಲ್ಲಿ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ವಾಪಸ್‌ ಪಡೆಯುವ ಕುರಿತು ಅಭಿಪ್ರಾಯ ಕೇಳಿ ಸರ್ಕಾರ ಸುತ್ತೋಲೆ
ಹೊರಡಿಸಿದಾಗ ಬಹುತೇಕ ಎಲ್ಲಾ ಪೊಲೀಸ್‌ ಅಧಿಕಾರಿ ಗಳೂ ಅಂತಹ ನಿರ್ಧಾರ ಕೈಗೊಂಡರೆ ಕೋಮು ಸಂಘರ್ಷ ಹೆಚ್ಚಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತದೆ ಎಂದು ಹೇಳಿದ್ದರು. ಇದೀಗ ಚುನಾವಣೆ
ಸಮೀಪಿಸುತ್ತಿರುವುದರಿಂದ ಮತ್ತೆ ಸುತ್ತೋಲೆ ಯನ್ನು ತುರ್ತು ಎಂದು ಪರಿಗಣಿಸಿ ಪ್ರತಿಕ್ರಿಯಿಸುವಂತೆ ನೆನಪೋಲೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ಅಲ್ಪಸಂಖ್ಯಾತರ ಮೇಲೆ ಪ್ರಕರಣ ದಾಖಲಿಸದಂತೆ ಮೌಖೀಕವಾಗಿ ಪೊಲೀಸರಿಗೆ ಸೂಚಿಸಿದ್ದೀರಿ. ಈಗ ಕೇಸ್‌ ವಾಪಸ್‌ ಬಗ್ಗೆ ಲಿಖೀತವಾಗಿ ಹೇಳಿದ್ದೀರಿ. ಅದರ ಬದಲು ಅಲ್ಪಸಂಖ್ಯಾತರು ಏನೇ ಮಾಡಿದರೂ ಅವರ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಿ. ನಿಮ್ಮ ಬಗ್ಗೆ ಪದೇ ಪದೇ ನಾವು ಆರೋಪ ಮಾಡುವುದು ನಿಲ್ಲುತ್ತದೆ ಎಂದು ಶೋಭಾ ವ್ಯಂಗ್ಯವಾಡಿದರು.

Advertisement

ಬಿಜೆಪಿಯವರು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಎಲ್ಲಾ ಯೋಜನೆಗಳು ಅವರಿಗೆ ತಲುಪಿ ಅವರು ಅಭಿವೃದ್ಧಿಯಾಗಬೇಕು ಎಂದು ಬಯಸುವವರು. ಆದರೆ, ಜಿಹಾದಿ ಶಕ್ತಿಗಳನ್ನು ಮಾತ್ರ ನಾವು ವಿರೋಧಿಸುತ್ತೇವೆ. ಆದರೆ, ನೀವು ಜಿಹಾದಿಗಳ ಜತೆ ರಾಜಕೀಯ ಹೊಂದಾಣಿಕೆಗಾಗಿ ಅಲ್ಪಸಂಖ್ಯಾತರ ಹೆಸರು ಬಳಸಿಕೊಳ್ಳುತ್ತಿದ್ದೀರಿ. ನಿಮ್ಮ “ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮಂತ್ರ ಈಗ “ಹಿಂದ’ ಬಿಟ್ಟು ಕೇವಲ “ಅ’ ಮಂತ್ರ ಮಾತ್ರ ಆಗಿದೆ ಎಂದು ಕಿಡಿ ಕಾರಿದರು.

ವೋಟಿಗಾಗಿ ನಾನೂ ಹಿಂದು ಎಂದು ಹೇಳಿಕೊಂಡು ಅದನ್ನು ಸಮರ್ಥಿಸಿಕೊಳ್ಳಲು ಈಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ರಾಹುಲ್‌ ಗಾಂಧಿ ಅವರನ್ನು ಕರೆಸಿಕೊಳ್ಳುತ್ತೀರಿ. ಇನ್ನೊಂದು ಕಡೆ ಕೇವಲ ಅಲ್ಪಸಂಖ್ಯಾತರ ಮೇಲಿನ ಕೇಸ್‌ ಮಾತ್ರ ವಾಪಸ್‌ ಪಡೆದು ಹಿಂದೂಗಳ ಬಗ್ಗೆ ನಿಮ್ಮ ಕರಾಳ ಮುಖವನ್ನು ತೋರಿಸುತ್ತೀರಿ.
– ಶೋಭಾ ಕರಂದ್ಲಾಜೆ,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next