ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯ ಮಾತುಗಳ ಮೂಲಕ ಟೀಕಿಸಿದರು. ಕಾಂಗ್ರೆಸ್ ಮೇಲೆ ಮತದಾರರು ನಂಬಿಕೆ ಹೊಂದಿದ್ದು, ಮತ್ತೂಂದು ಅವಧಿಗೆ ಪಕ್ಷಕ್ಕೆ ಆಶೀರ್ವಾದ ಮಾಡುವರು. ಇದನ್ನು ಯಾರಿಂದಲೂ ತಪ್ಪಿಸಲು ಅಸಾಧ್ಯ ಎಂದರು. ಜೆಡಿಎಸ್ ಅಪ್ಪನಾಣೆಗೂ ಅಧಿಕಾರಕ್ಕೆ ಬರುವುದಿಲ್ಲ. ಇನ್ನೂ ಬಿಜೆಪಿ ಹಗಲು ಕನಸು ಕಾಣುತ್ತಿದೆ. ಯಾರು ಅನ್ನ, ನೀರು ಕೊಡುತ್ತಾರೆ ಅಂಥವರನ್ನು ರಾಜ್ಯದ ಜನ ಎಂದಿಗೂ ಮರೆಯುವುದಿಲ್ಲ. ಬಸವ, ಕುವೆಂಪು ಅವರ ಈ ನಾಡಿನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದಾಳುವ ಮೂಲಕ ಅಧಿಕಾರ ಗಿಟ್ಟಿಸಿಕೊಳ್ಳುವುದು ಅಸಾಧ್ಯ. ಇಲ್ಲಿನ ಜನರು ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಬಿಜೆಪಿಯವರ ಕನಸು ನನಸಾಗುವುದಿಲ್ಲ ಎಂದರು. ಬಿಎಸ್‌ವೈ ಢೋಂಗಿ ರಾಜಕಾರಣಿ: ಮಾಜಿ ಸಿಎಂ ಯಡಿಯೂರಪ್ಪ ಅವರಂಥ ಢೋಂಗಿ ರಾಜಕಾರಣಿ ಇನ್ನೊಬ್ಬರು ಸಿಗುವುದಿಲ್ಲ. ರೈತನ ಮಗ ಎಂದು ಹೇಳಿಕೊಳ್ಳುವ ಬಿಎಸ್‌ವೈ ಎಂದಾದರೂ ಜಮೀನು ಬಿತ್ತನೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದ ಬಿಎಸ್‌ವೈ 2011ರಲ್ಲಿ ರೈತರ ಸಾಲದ ಬಗ್ಗೆ ಕಾಂಗ್ರೆಸ್ ಒತ್ತಾಯಿಸಿದಾಗ ನಾನೇನು ನೋಟು ಮುದ್ರಿಸುವ ಯಂತ್ರ ಇಟ್ಟಿಕೊಂಡಿದ್ದಾನಾ ಎಂದು ಹೇಳಿ ಅವಮಾನಿಸಿದ್ದರು ಎಂದು ತಿಳಿಸಿದರು. ರಾಜ್ಯದ ರೈತರ ಮೇಲೆ 52 ಸಾವಿರ ಕೋಟಿ ರೂ. ಬೆಳೆ ಸಾಲ ಇದ್ದು, ಇದರಲ್ಲಿ ರಾಜ್ಯ ಸಹಕಾರ ಬ್ಯಾಂಕಿನ 8,156 ಕೋಟಿ ರೂ. ಮನ್ನಾ ಮಾಡಿದೆ. ಇನ್ನುಳಿದ 41 ಸಾವಿರ ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಕೇಂದ್ರ ಮನ್ನಾ ಮಾಡಬೇಕಿದೆ. ಆದರೆ, ರಾಜ್ಯದ ಯಾರೊಬ್ಬ ಬಿಜೆಪಿ ಸಂಸದರು ಈ ವಿಷಯದಲ್ಲಿ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ನಾಯಕರು ಈಗಲಾದರೂ ಸಾಲ ಮನ್ನಾ ಮಾಡಲು ಪ್ರಧಾನಿಗಳ ಮೇಲೆ ಒತ್ತಡ ಹಾಕದಿದ್ದರೆ ಜನರಿಂದ ರೈತ
ವಿರೋಧಿ ಪಟ್ಟ ಕಟ್ಟಿಕೊಳ್ಳುತ್ತೀರಿ ಎಂದು ಎಚ್ಚರಿಸಿದರು. ರೈತರ ಬಗ್ಗೆ ಮೊಸಳೆ ಕಣ್ಣೀರು: ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳೇ ಕಳೆದರೂ ಪ್ರಧಾನಿ ಹೇಳಿದ ಒಳ್ಳೆಯ ದಿನಗಳು ಬರಲೇ ಇಲ್ಲ. ಇದು ಬಾಯಿ ಬಡಾಯಿ ಸರ್ಕಾರ ಆಗಿದ್ದು, ಅಭಿವೃದ್ಧಿ ಮಾತ್ರ ಶೂನ್ಯ. 100 ದಿನದಲ್ಲೇ ಕಪ್ಪು ಹಣ ತಂದು ಪ್ರತಿ ಜನರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿ ಅ ಧಿಕಾರಕ್ಕೆ ಬಂದು ಈಗ ಖಾತೆಗೆ 15 ರೂ. ಸಹ ಹಾಕಲಿಲ್ಲ. ರೇಡಿಯೋ ಮನ್ ಕಿ ಬಾತ್‌ನಲ್ಲಿ ರೈತರ ಬಗ್ಗೆ ಪ್ರಧಾನಿ ಮೊಸಳೆ ಕಣ್ಣೀರು ಸುರಿಸುತ್ತಾರೆ ಹೊರತು ಅನ್ನದಾತರ ನೆರವಿಗೆ ಬರುವುದಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.
Advertisement