Advertisement

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ

06:20 AM Aug 06, 2018 | Team Udayavani |

ಮೈಸೂರು: ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಿಗೆ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ನಗರದಲ್ಲಿ ಭಾನುವಾರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದ ಕೆಲವು ಸ್ಥಾನಗಳನ್ನು ಕಳೆದುಕೊಂಡು, 104 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ರಾಜ್ಯದಲ್ಲಿ ಇಷ್ಟೊಂದು ಸ್ಥಾನವನ್ನು ಗೆದ್ದರೂ, ವಿಪಕ್ಷದಲ್ಲಿ ಕುಳಿತಿರುವುದು ಇದೇ ಮೊದಲು. ಪ್ರತಿಪಕ್ಷವಾಗಿ ಕೂತು ಕೆಲಸ ಮಾಡಲು ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳದೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಆ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ನಮಗೆ ಪ್ರತಿ ಜಿಲ್ಲೆಯೂ ಮುಖ್ಯ. ಹೀಗಾಗಿ, ಆ.9ರಂದು ಎಲ್ಲ ಶಾಸಕರ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ 3 ತಂಡಗಳನ್ನು ರಚಿಸಿ ಪ್ರವಾಸ ಆರಂಭಿಸುತ್ತೇವೆಂದು ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾದರೂ ಯಾವ ಕೆಲಸವೂ ನಡೆಯುತ್ತಿಲ್ಲ. ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಆರೋಪಿಸಿದರು.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸೇರಿ ಹಲವು ಮಹನೀಯರು ಇಲ್ಲದಿದ್ದರೆ ಇಷ್ಟೊತ್ತಿಗೆ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸಲಾಗುತ್ತಿತ್ತು. ಅದೇ ರೀತಿಯಲ್ಲಿ ಕರ್ನಾಟಕದ ಏಕೀಕರಣದಲ್ಲಿ ಸಾಕಷ್ಟು ಮಂದಿಯ ತ್ಯಾಗ, ಬಲಿದಾನವಿದೆ. ಆದರೂ, ಉತ್ತರ ಕರ್ನಾಟಕ ಪ್ರತ್ಯೇಕಿಸುವ ಮಾತು ಕೇಳಿ ಬರುತ್ತಿದೆ. ಇದು ವಿಷಾದನೀಯ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next