Advertisement

ಸಮಸ್ಯೆ ನಿವೇದಿಸಿಕೊಂಡ ಗಂಟೆಯೊಳಗೆ ಬಂತು ಕಂಪ್ಯೂಟರ್‌

06:15 PM Jul 30, 2022 | Nagendra Trasi |

ವಿಜಯಪುರ: ಜಿಪಂ ಸಿಇಒ ರಾಹುಲ್‌ ಶಿಂಧೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ವಿವಧ ಕಾಮಗಾರಿ ಪರಿಶೀಲಿಸಿ ಸಮಸ್ಯೆ ಆಲಿಸಿದರು. ಅಲ್ಲದೇ ಮಕ್ಕಳು ಸಮಸ್ಯೆ ನಿವೇದಿಸಿಕೊಂಡ ಗಂಟೆಯಲ್ಲೇ ಸರ್ಕಾರಿ ವಸತಿ ಶಾಲೆಗೆ ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಪೂರೈಸಿ ಮೆಚ್ಚುಗೆಗೆ ಪಾತ್ರವಾದರು.

Advertisement

ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಮತ್ತು ಕಾರಜೊಳ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲಿಸಿದ ಅವರು, ಹೊನಗನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು. ಕಾರಜೋಳ ಗ್ರಾಪಂ ವ್ಯಾಪ್ತಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಸಿಇಒ, ಶಾಲಾ ಕೊಠಡಿಗಳು, ಅಡುಗೆ ಕೋಣೆ, ಊಟದ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಕ್ಕಳಿಂದ ಅಹವಾಲು ಆಲಿಸಿದಾಗ, ತಮಗೆ ಕಂಪ್ಯೂಟರ್‌ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆ ನಿವೇದಿಸಿಕೊಂಡರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಿಇಒ ಶಿಂಧೆ, ಸದರಿ ವಸತಿ ಶಾಲೆಗೆ 4 ಕಂಪ್ಯೂಟರ್‌ ಹಾಗೂ 1 ಪ್ರೊಜೆಕ್ಟರ್‌ ಪೂರೈಸಲು ತಾಪಂ ಅಧಿಕಾರಿಗೆ ಸೂಚಿಸಿದರು.

ಸಿಇಒ ಸೂಚಿಸಿದ ಒಂದು ಗಂಟೆಯಲ್ಲಿ ಸದರಿ ಶಾಲೆಗೆ ಕಂಪ್ಯೂಟರ್‌-ಪ್ರೊಜೆಕ್ಟರ್‌ ಪೂರೈಕೆ ಆಗಿದ್ದು ವಸತಿ ಶಾಲೆಯ ಮಕ್ಕಳಿಂದ ಪ್ರಶಂಸೆಗೆ ಪಾತ್ರವಾಯಿತು. ಹೊನಗನಹಳ್ಳಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಇಒ, ಗ್ರಂಥಾಲಯದಲ್ಲಿ ಆಸನ ನಿರ್ಮಾಣ, ವಿದ್ಯುತ್‌ ವ್ಯವಸ್ಥೆ, ಕಂಪ್ಯೂಟರ್‌, ಇಂಟರ್ನೆಟ್‌ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ಹೊನಗನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.

ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಸಹ ಭೇಟಿ ಮಾಡಿ, ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಲು, ಸಾರ್ವಜನಿಕರಿಗೆ ತುರ್ತಾಗಿ ಸೌಲಭ್ಯಗಳನ್ನು ಕಲ್ಪಿಸಲು ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು. ಅದೇ ರೀತಿ ರಾಜೀವ್‌ ಗಾಂ ಧಿ ಸೇವಾ ಕೇಂದ್ರಕ್ಕೂ ಸಹ ಭೇಟಿ ನೀಡಿ ಪರಿಶೀಲಿಸಿದರು.

Advertisement

ಬಬಲೇಶ್ವತ ತಾಪಂ ಸಹಾಯಕ ನಿರ್ದೇಶಕಿ ಭಾರತಿ ಹಿರೇಮಠ, ಕಾರಜೊಳ ಪಿಡಿಒ ಬಿ.ಪಿ. ಉಪ್ಪಲದಿನ್ನಿ, ಹೊನಗನಹಳ್ಳಿ ಪಿಡಿಒ ಜಯಶ್ರೀ ಪವಾರ, ಕಾರಜೋಳ ಚನ್ನಮ್ಮ ವಸತಿ ಶಾಲೆ ಮುಖ್ಯ ಶಿಕ್ಷಕ ಸತೀಶ ಸಜ್ಜನ, ಹೊನಗನಹಳ್ಳಿ ಗ್ರಾಪಂ ಕಾರ್ಯದರ್ಶಿ ಅಮೃತ ನಿಂಬಾಳ್ಕರ, ಸಂಗಪ್ಪ ಪಡಸಲಗಿ, ವಾರ್ಡನ್‌ ಕವಿತಾ ಹೂಗಾರ ಸೇರಿದಂತೆ ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next