Advertisement

ಸೂರಿಗೊಂದು ದೂರು, ಮನೆಗೆ ಅಳವಡಿಸೋ ಸೂರು ಹೇಗಿರಬೇಕು, ಹೇಗಿರಬಾರದು?

03:45 AM Jan 16, 2017 | Harsha Rao |

ಮಳೆ ನೀರನ್ನು ಸರಾಗವಾಗಿ ಹರಿಯಲು ಏನು ಮಾಡಬೇಕು ಅನ್ನೋದು ಎಲ್ಲರ ತಲೇನೋವು. ಮಾಮೂಲಿ ಸೂರಾದರೆ, ಎಲ್ಲೆಲ್ಲಿ ದೋಣಿ ಕೊಳವೆ ಇಡಬೇಕು? ಎಂದು ನಿರ್ಧರಿಸಿ ಅದರತ್ತ ಒಂದಕ್ಕೆ ಅರವತ್ತರಂತೆ ಇಳಿಜಾರು ನೀಡಿದರೆ ಸಾಕು. ಮಳೆನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ ಅನೇಕ ಬಾರಿ ಮಳೆ ಹೆಚ್ಚಿರುವ ಪ್ರದೇಶಗಳಲ್ಲಿ ಹಾಗೂ ವಿನ್ಯಾಸಕ್ಕಾಗಿಯೂ ಇತರೆ ಮಾದರಿಯ ಸೂರನ್ನು ಹಾಕುವುದುಂಟು. ಆಗ ಇಳಿಜಾರುಗಳನ್ನು ಸ್ವಲ್ಟ ಹುಷಾರಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ಎರಡು ಇಳಿಜಾರು ಇಲ್ಲವೇ ಕಮಾನು ಸೂರು ಮನೆಯ ಮಧ್ಯೆ ಇದ್ದರೆ, ಮಟ್ಟವಾದ ಸೂರಿನಲ್ಲಿ ಕೆಲಭಾಗ ಮಾತ್ರ ಇಳಿಜಾರಿದ್ದರೆ, ಅಂಥ ಸಂದರ್ಭದಲ್ಲೂ ನೀರು ಸರಾಗವಾಗಿ ಹರಿದುಹೋಗಲು ದೋಣಿ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕಾಗುತ್ತದೆ.

Advertisement

ಇಳಿಜಾರು ಸೂರಿನ ಲೆಕ್ಕಾಚಾರ
ಮನೆಯ ಮಧ್ಯಭಾಗದಲ್ಲಿ ಎತ್ತರಿಸಿಕೊಂಡು, ಎರಡೂ ಕಡೆ ಉದ್ದಕ್ಕೂ ಇಳಿಜಾರು ಕೊಟ್ಟರೆ, ಮಳೆ ಹೆಚ್ಚು ಇರುವ ಪ್ರದೇಶದಲ್ಲಿ ನೀರು ಸೋರುವ ಬಹುತೇಕ ತೊಂದರೆ ತಪ್ಪಿಬಿಡುತ್ತದೆ. ಆದರೆ ಅಕ್ಕಪಕ್ಕ ಮನೆಗಳಿದ್ದು, ಅವರ ಮನೆಕಡೆ ನಮ್ಮ ಮನೆಯ ಸೂರಿನ ನೀರನ್ನು ಹರಿಯಲು ಬಿಡಲಾಗುವುದಿಲ್ಲ, ಆಗ ಅನಿವಾರ್ಯವಾಗಿ ಇತರೆ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳಬೇಕಾಗುತ್ತದೆ. ನಿವೇಶನದ ಅಕ್ಕಪಕ್ಕದಲ್ಲಿ ಒತ್ತರಿಸಿಕೊಂಡು ಕಟ್ಟುವ ಪರಂಪರೆ ಇರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮನೆಯ ಮಧ್ಯಭಾಗದಲ್ಲಿ ತೆರೆದ ಸ್ಥಳವಿದ್ದು, ಇಡಿ ಮನೆಯನ್ನು “ತೊಟ್ಟಿಮನೆ’ – ಕೊರ್ಟ್‌ಯಾಡ್‌ ಹೌಸ್‌ ಮಾದರಿಯಲ್ಲಿ ವಿನ್ಯಾಸ ಮಾಡಿದರೆ, ಮಳೆಯ ನೀರು ಈ ಪ್ರದೇಶದಲ್ಲಿ ಬೀಳುವಂತೆ ಮಾಡಿ ನಂತರ ಇಂಗು ಗುಂಡಿಗೋ ಇಲ್ಲ ಕೊಳವೆಗಳ ಮೂಲಕ ಮನೆಯ ಮುಂಭಾಗಕ್ಕೆ ತೆಗೆದುಕೊಂಡು ಹೋಗಬಹುದು. ನಿವೇಶನದ ಅಗಲ ಕಡಿಮೆ ಇದ್ದು, ಮಧ್ಯಭಾಗದಲ್ಲಿ ತೆರೆದ ಸ್ಥಳ ಕೊಡಲು ಆಗದಿದ್ದರೆ ಅಂಥ ಸಂದರ್ಭಗಳಲ್ಲಿ ಅನಿವಾರ್ಯವಾಗಿ, ಇಳಿಜಾರನ್ನು ಮನೆಯ ಮುಂದೆ ಹಾಗೂ ಹಿಂದಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.

ಸ್ಲೋಪಿಂಗ್‌ ಸೂರಿನ ಗಟರ್‌ ವಿನ್ಯಾಸ
ಎರಡು ಸೂರಿನ ಇಳಿಜಾರು ತಗ್ಗು ಮನೆಯ ಮಧ್ಯೆ ಬರುವಂತಿದ್ದರೆ, ಆಗ ಇಲ್ಲಿ ಒಂದು ದೋಣಿಯನ್ನು ಕೊಡುವುದು ಉತ್ತಮ. ಸೂರಿನ ಉದ್ದ ಅಗಲ ಆಧರಿಸಿ ಮುವತ್ತು ನಲವತ್ತರ ನಿವೇಶನಕ್ಕೆ ಸುಮಾರು ಒಂಬತ್ತು ಇಂಚಿನ ದೋಣಿಯನ್ನು ಕಾಲುವೆ ಮಾದರಿಯಲ್ಲಿ ಮಾಡಿ. ನಮಗೆ ಅನುಕೂಕರ ಸ್ಥಳಕ್ಕೆ ನೀರು ಹರಿದುಹೋಗುವಂತೆ ಯಥಾಪ್ರಕಾರ ಒಂದಕ್ಕೆ ಅರವತ್ತರಂತೆ ಅಂದರೆ ಐದು ಅಡಿಗೆ ಒಂದು ಇಂಚಿನಷ್ಟು ಇಳಿಜಾರು ಕೊಟ್ಟು ನಯವಾಗಿ ಫಿನಿಶ್‌ ಮಾಡಬೇಕು. ತೀರ ಸೂ¾ತ್‌ ಆಗಿ ಫಿನಿಶ್‌ ಮಾಡಿದರೂ ಕೂಡ ಸಣ್ಣಸಣ್ಣ ಬಿರುಕುಗಳು ಬಿಡುವ ಸಾಧ್ಯತೆ ಇರುವುದರಿಂದ, ಸೂಕ್ತ ನೀರು ನಿರೋಧಕ ರಾಸಾಯನಿಕ ಬೆರೆಸಿ ಫಿನೀಶ್‌ ಮಾಡುವಾಗ ಸ್ಪಾಂಜ್‌ ಉಪಯೋಗಿಸಿ ಸ್ವಲ್ಪ ತರಿ ತರಿಯಾಗಿಸುವುದು ಉತ್ತಮ.

ಕೆಲವೊಮ್ಮೆ ಬರಿ ಸಿಂಟ್‌ ಕಾಂಕ್ರಿಟ್‌ ಫಿನಿಶ್‌ ಮಾಡಿದರೆ ಕೆಲಬಾರಿ ದೋಣಿ ಕೊಳವೆ ಸಂಪೂರ್ಣವಾಗಿ ನೀರು ನಿರೋಧಕ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಅಂದರೆ ಮಳೆ ಹೆಚ್ಚು ಇರುವ ಪ್ರದೇಶಗಳಲ್ಲಿ, ತೆರೆದಂತೆ ಇರುವ ಅರ್ಧ ಚಂದ್ರಾಕೃತಿಯ ಇಲ್ಲವೆ ಇಂಗ್ಲೀಷ್‌ ಅಕ್ಷರ “ಯು’ ಆಕಾರದ ದೋಣಿಗೆ ಕ್ಲೇ ಟೈಲ್ಸ್‌ಗಳನ್ನೂ ಬೇಕಾದರೆ ಸಿಮೆಂಟ್‌ ಗಾರೆ ಬಳಸಿ ಅಂಟಿಸಬಹುದು. ದೋಣಿಯ ಗಾತ್ರ ಕಡಿಮೆ ಇರುವುದರಿಂದ, ಇಡೀ ಟೈಲ್ಸ್‌ಅನ್ನು ಹಾಕಲು ಆಗದಿರಬಹುದು. ಹಾಗಾಗಿ ಉದ್ದುದ್ದಕ್ಕೆ ಜೇಡಿಮಣ್ಣಿನ ಬಿಲ್ಲೆಗಳನ್ನು ಕತ್ತರಿಸಿ, ಇಳಿಜಾರಿಗೆ ಹೊಂದುವಂತೆ ಸೂಕ್ತ ರೀತಿಯಲ್ಲಿ ಅಂಟಿಸಬಹುದು.

ಸಾಮಾನ್ಯವಾಗಿ ಸಿಮೆಂಟ್‌ ಗಾರೆ ಹಾಗೂ ಕಾಂಕ್ರಿಟ್‌ ಬಿಸಿಲಿಗೆ ಹಿಗ್ಗಿ, ಚಳಿಗೆ ಕುಗ್ಗುವುದರಿಂದ, ಬಿರುಕುಗಳು ಬರುವುದು ಸ್ವಾಭಾವಿಕ, ನೀರುನಿರೋಧಕ ಗುಣ ಹೆಚ್ಚು ಮುಖ್ಯವಾಗಿರುವ ಪ್ರದೇಶಗಳಲ್ಲಿ  ಈ ಕಾರಣದಿಂದಾಗಿ ಜಡ ಎನ್ನಬಹುದಾದ ಕ್ಲೆಟೈಲ್ಸ್‌ ಗಳನ್ನು ಬಳಸಲಾಗುತ್ತದೆ.

Advertisement

ಮೆಟ್ಟಿಲು ಕೋಣೆಯ ಪಕ್ಕದ ಇಳಿಜಾರು
ಎಲ್ಲವೂ ಇಳಿಜಾರಾಗಿದ್ದರೆ ನೀರು ಸರಾಗವಾಗಿ ಹರಿದುಹೋಗಿಬಿಡುತ್ತದೆ. ಆದರೆ ಒಂದು ಭಾಗ, ಸಣ್ಣದೊಂದು ಮೆಟ್ಟಿಲು ರೂಮ್‌ ಮೇಲೆದ್ದರೂ ಅದಕ್ಕೆ ತಾಗಿದಂತೆ ಇರುವ ಇಳಿಜಾರು ಸೂರಿನ  ಈ ಸಂಧಿಯಲ್ಲಿ ಸೋರಲು ಶುರುಮಾಡುತ್ತದೆ. ಭಿನ್ನ ವಸ್ತುಗಳು – ಸೂರಿನ ಕಾಂಕ್ರಿಟ್‌ ಹಾಗೂ ಮೆಟ್ಟಿಲು ಕೋಣೆಯ ಇಟ್ಟಿಗೆ ಮಧ್ಯದ ಜಾಯಿಂಟ್‌ ಸೋರಲು ಮುಖ್ಯ ಕಾರಣ- ಆ ಜಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಇಳಿಜಾರು ಕೊಡದೇ ಇರುವುದೇ ಆಗಿರುತ್ತದೆ. ಹಾಗಾಗಿ ನೀವು ಇಳಿಜಾರು ಸೂರಿನ ಮನೆ ಹೊಂದಿದ್ದು, ಮೆಟ್ಟಿಲು ಕೋಣೆ ಮೇಲಕ್ಕೆ ಇದ್ದರೆ, ಸಂದಿಗಳ ಇಳಿಜಾರಿಗೆ ವಿಶೇಷ ಕಾಳಜಿ ವಹಿಸಿ, ಸೂಕ್ತ ರೀತಿಯಲ್ಲಿ ದೋಣಿಯಂತೆ ಇರುವ ಮೋರಿಗಳನ್ನು ವಿನ್ಯಾಸ ಮಾಡಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಕೆಲವೊಮ್ಮೆ, ಒಂದು ಪದರ ನೀರು ನಿರೋಧಕ ಗುಣ ನೀಡದಿದ್ದರೆ, ಪದೇ ಪದೇ ಮಾಡಿದ್ದನ್ನು ಕಿತ್ತು ಮತ್ತೆ ಹೊಸದಾಗಿ ಮಾಡುವ ಬದಲು, ಇರುವ ಪದರದ ಮೇಲೆಯೇ ಹೆಚ್ಚುವರಿಯಾಗಿ ಮತ್ತೂಂದು ಪದರ ಹಾಕಿದರೆ, ಅದು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಿಮೆಂಟ್‌ ದೋಣಿಯೋ ಇಲ್ಲ ಪ್ಲಾಸ್ಟಿಕ್‌?
ಮನೆಯ ವಿನ್ಯಾಸ ಮಾಡುವಾಗ ಅದರ ಒಂದು ಭಾಗದಂತೆ ದೋಣಿ ಕೊಳವೆಗಳನ್ನೂ ಮಾಡಿದರೆ,  ಇಳಿಜಾರು ಸೂರಿನ ನೀರು ನಿರಾಯಾಸವಾಗಿ ಹೊರಗೆ ಹರಿದುಹೋಗುವಂತೆ ಮಾಡಬಹುದು. “ಮಳೆ ನೀರು ಹೇಗಿದ್ದರೂ ಹರಿದು ಹೋಗುತ್ತದೆ’ ಎಂದು ದೊಣಿ ಕೊಳವೆ ಇಲ್ಲದೆ ಹಾಗೆಯೇ ಕೆಳಗೆ ಬಿಟ್ಟರೆ, ಸ್ಲೋಪಿಂಗ್‌ ರೂಫಿನ ನೀರು ಮನೆಯ ಗೋಡೆಯ ಮೇಲೆಲ್ಲ ಬಿದ್ದು, ಅಲ್ಲಿ ತೇವಾಂಶ ಮೂಡುವ ಆತಂಕ ಇರುತ್ತದೆ. ಹಾಗಾಗಿ ಇಳಿಜಾರು ಸೂರಿಗೂ ಸೂಕ್ತ ದೋಣಿ ವ್ಯವಸ್ಥೆ ಮಾಡುವುದು ಅನಿವಾರ್ಯ. ಈಗ ಪ್ಲಾಸ್ಟಿಕ್‌ ಪೈಪಿನ ಅರ್ಧಚಂದ್ರಾಕೃತಿಯ ದೋಣಿಗಳು ಲಭ್ಯವಾಗಿದ್ದರೂ ಅವು ಸೂರಿಗೆ ಅಂಟಿದಂತಿರುವ ಕಾಂಕ್ರಿಟ್‌ ಡ್ರೆ„ನ್‌ಗಳಷ್ಟು ಆಕರ್ಷಕವಾಗಿರುವುದಿಲ್ಲ. ಪ್ಲಾಸ್ಟಿಕ್‌ ದೋಣಿ ಕೊಳವೆಗಳು ಮನೆಯ ಮುಂದೆಯೇ ಬರುತ್ತಿದ್ದರೆ, ಅವನ್ನೇ ಸ್ವಲ್ಪ ಲೆಕ್ಕಾಚಾರ ಮಾಡಿ, ಸಮವಾಗಿ, ಹೆಚ್ಚು ಇಳಿಜಾರು ಕಾಣದಂತೆ ಎರಡು ಇಲ್ಲವೇ ನಾಲ್ಕು ಕಡೆ ಸರಾಗವಾಗಿ ಹರಿದು ಹೋಗುವುದರ ಜೊತೆಗೆ ಮನೆಯ ಒಟ್ಟಾರೆ ವಿನ್ಯಾಸಕ್ಕೆ ಹೊಂದುವಂತೆಯೂ ಮಾಡಿಕೊಳ್ಳಬೇಕಾಗುತ್ತದೆ.

ಪ್ರಕೃತಿ ನಿಯಮಕ್ಕೆ ಹೊಂದುವಂತೆ ಸೂರಿನ ವಿವಿಧ ಮಾದರಿಗಳು ಲಭ್ಯವಿರುವಂತೆಯೇ ಮನೆ ಕಟ್ಟುವವರ ಕ್ರಿಯಾಶೀಲ ಮೂಸೆಯಲ್ಲಿ ವಿವಿಧ ನಮೂನೆಯ ವಿನ್ಯಾಸಗಳ ಸೂರುಗಳು ಮೂಡಿಬರುವುದೂ ಸಹಜ. ಡಿಸೈನ್‌ ಯಾವುದೇ ಇರಲಿ, ನೀರಿನ ಓಟ ಹಾಗೂ ಹರಿವನ್ನು ಮನದಲ್ಲಿ ಇಟ್ಟುಕೊಂಡು ಮನೆಯ ದೋಣಿಗಳನ್ನು ನಿರ್ಧರಿಸಿದರೆ, ಸುಂದರ ಮನೆ ನಮ್ಮದಾಗುವುದರ ಜೊತೆಗೆ ಹತ್ತಾರು ವರ್ಷ ಯಾವುದೇ ತೊಂದರೆಗಳಿಲ್ಲದಂತೆ ಇರಬಹುದು.

ಹೆಚ್ಚಿನ ಮಾತಿಗೆ : 98441 32826 

-ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next