Advertisement

ಸಿಎಂ ವಿರುದ್ಧದ ದೂರು ಲೋಕಾಯುಕ್ತಕ್ಕೆ : ಹೈಕೋರ್ಟ್‌ ಸೂಚನೆ

03:45 AM Feb 02, 2017 | |

ಬೆಂಗಳೂರು: ಸಚಿವರು ಹಾಗೂ ಶಾಸಕರ  ಶಿಫಾರಸು ಮೇರೆಗೆ ನಿಯಮಾವಳಿ ಉಲ್ಲಂಘೀಸಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಆದೇಶಿಸಿದ್ದಾರೆ ಎನ್ನಲಾದ ಪ್ರಕರಣವನ್ನು ಹೈಕೋರ್ಟ್‌ ಲೋಕಾಯುಕ್ತರ ಅಂಗಳಕ್ಕೆ ಕಳುಹಿಸಿದೆ.

Advertisement

ಸಚಿವರು ಹಾಗೂ ಶಾಸಕರ ಶಿಫಾರಸು ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಪ್ರಕರಣವನ್ನು ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅಖೀಲ ಕರ್ನಾಟಕ ಪೊಲೀಸ್‌ ಮಹಾಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಅನುಮತಿ ನೀಡಿದೆ.

ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 7(1) ಅನ್ವಯ ಮುಖ್ಯಮಂತ್ರಿಗಳ ಕಾರ್ಯಗಳು ಮತ್ತು ಅವರ ಅನುಮೋದನೆಯಿರುವ ಕಾರ್ಯಗಳ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತರಿಗೆ ಪರಮಾಧಿಕಾರವಿದೆ. ಹಾಗೆಯೇ, ಮುಖ್ಯಮಂತ್ರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 9ರ ಅಡಿ ಅವಕಾಶವಿದೆ. ಹೀಗಾಗಿ, ಆರೋಪ ಸಂಬಂಧ ಅರ್ಜಿದಾರರು ಲೋಕಾಯುಕ್ತರಿಗೆ ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸಬಹುದು. ಆ ದೂರು ಮತ್ತು ಆ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಅನಂತರ ಲೋಕಾಯುಕ್ತರು ಕಾನೂನಿನನ್ವಯ ಕ್ರಮ ಜರಗಿಸಬಹುದು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next