ಹಾಸನ: ತಾಲೂಕಿನ ಸೋಮನಹಳ್ಳಿ ಕಾವಲ್ನಲ್ಲಿ ತೋಟಗಾರಿಕೆ ಕಾಲೇಜಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಅವರು, ಈ ವರ್ಷದಿಂದಲೇ ತೋಟಗಾರಿಕೆ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೋಟಗಾರಿಕಾ ಸಂಶೋಧನಾ ಕೇಂದ್ರ ಆರಂಭಕ್ಕೂ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಅರಣ್ಯ ಇಲಾಖೆ ವಿರುದ್ಧ ದೂರು: ಅರಣ್ಯ ಇಲಾಖೆಯು ಅನಗತ್ಯವಾಗಿ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ನೀಡುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಶಾಸಕ ಎ.ಟಿ.ರಾಮಸ್ವಾಮಿ ಅವರು ದೂರಿದರು. ಕುಡಿಯುವ ನೀರು ಪೂರೈಕೆಯ ಪೈಪುಗಳನ್ನು ಹೂಳಲು ಅರಣ್ಯ ಇಲಾಖೆ ಅಧಿಕಾರಿ ಗಳು ತೊಂದರೆ ಕೊಡುತ್ತಿದೆ ಎಂದು ಶಿವ ಲಿಂಗೇಗೌಡ ಅವರು ಆರೋಪಿಸಿದರೆ, ಗೋಮಾಳ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಆಕ್ಷೇಪ ಎತ್ತಿದ್ದರಿಂದ 10 ಕೋಟಿ ರೂ. ಅನುದಾನ ಸರ್ಕಾರಕ್ಕೆ ವಾಪಸ್ ಹೋಯಿತು ಎಂದು ಶಾಸಕ ರಾಮಸ್ವಾಮಿ ಅಸಮಾ ಧಾನ ವ್ಯಕ್ತಪಡಿಸಿದರು. ಶಾಸಕರ ಆಕ್ಷೇಪ ಗಳಿಗೆ ದನಿಗೂಡಿಸಿದ ಸಚಿವ ಎಚ್.ಡಿ.ರೇವಣ್ಣ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಹೀಗೇ ತೊಂದರೆ ಕೊಡುತ್ತಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡ ಬೇಕಾದೀತು ಎಂದು ಸಭೆಯಲ್ಲಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಚ್ಚರಿಕೆ ನೀಡಿದರು.
ಶಾಲಾ ಶಿಕ್ಷಕರಿಗೆ ಸಿಎಂ ಸನ್ಮಾನ: ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 144 ಸರ್ಕಾರಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಈ ಶಾಲೆಗಳ ಶಿಕ್ಷಕರು ಮತ್ತು ಮುಖ್ಯಶಿಕ್ಷಕರಿಗೆ ಮುಖ್ಯಮಂತ್ರಿಯ ವರಿಂದ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಜುಲೈ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಎಲ್ಲಾ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಅವರು ಹೇಳಿದರು. ಸಚಿವರ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಸರ್ಕಾರಿ ಶಾಲೆಯ ಶಿಕ್ಷಕರನ್ನು ಪ್ರೋತ್ಸಾಹಿಸುವ ಕ್ರಮ ಒಳ್ಳೆಯದು ಎಂದು ಸಚಿವರ ಹೇಳಿಕೆಯನ್ನು ಬೆಂಬಲಿಸಿದರು.
ಖಾಸಗಿ ಶಾಲೆಗಳಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ಎಲ್ಲಾ ಮೂಲ ಸೌಖರ್ಯಗಳೂ ಇರ ಬೇಕು. ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಖಾಸಗಿ ಶಾಲೆಗಳು ಪೋಷಕರಿಂದ ಸಾವಿರಾರು ರೂಪಾಯಿ ವಂತಿಕೆ ಸಂಗ್ರಹಿಸಿ ಲಾಭ ಮಾಡಿಕೊಳ್ಳು ತ್ತಿವೆ. ಶೀಘ್ರದಲ್ಲಿಯೇ ಶಿಕ್ಷಣ ಇಲಾಖೆಯ ಸಭೆಯನ್ನು ಕರೆದು ಚರ್ಚಿಸಲಾಗುವುದು ಎಂದರು. ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ, ಪ್ರೀತಂ ಜೆ.ಗೌಡ, ಕೆ.ಎಸ್.ಲಿಂಗೇಶ್, ಎಂ.ಎ. ಗೋಪಾಲ ಸ್ವಾಮಿ, ಡೀಸಿ ಅಕ್ರಂಪಾಷಾ, ಜಿಪಂ ಸಿಇಒ ವಿಜಯಪ್ರಕಾಶ್ ಸಭೆಯಲ್ಲಿ ಉಪಸ್ಥಿತರಿದ್ದರು.